ಬೇಲೆಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಆರೋಗ್ಯ ಮೌಲ್ಯಮಾಪನಾ ವರದಿ ಸಲ್ಲಿಸಲು ಬೆಂಗಳೂರಿನ ವಾಯುಸೇನೆಯ ಕಮಾಂಡ್ ಆಸ್ಪತ್ರೆಗೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
ವಿಚಾರಣೆಗೆ ಸಹಕಾರಿಸುತ್ತಿಲ್ಲ ಎಂದು ಈಚೆಗೆ ಹೊರಡಿಸಿರುವ ಜಾಮೀನುರಹಿತ ಬಂಧನ ವಾರೆಂಟ್ ಜಾರಿ ಮಾಡಿರುವುದು ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಿದ್ದನ್ನು ರದ್ದುಪಡಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿದ್ದನ್ನು ಪ್ರಶ್ನಿಸಿ ಸತೀಶ್ ಸೈಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಬೆಂಗಳೂರಿನ ವಾಯುಸೇನೆಯ ಕಮಾಂಡ್ ಆಸ್ಪತ್ರೆಯ ಜಠರ-ಕರುಳಿನ ತಜ್ಞ ವೈದ್ಯರ (ಗ್ಯಾಸ್ಟ್ರೋಎಂಟ್ರಾಲಜಿಸ್ಟ್) ಮುಂದೆ ನವೆಂಬರ್ 15ರ ಬೆಳಿಗ್ಗೆ 11.30ಕ್ಕೆ ಸತೀಶ್ ಸೈಲ್ ಹಾಜರಾಗಬೇಕು. ಸೈಲ್ ಅವರು ತಮ್ಮ ಆರೋಗ್ಯ ವರದಿಗಳನ್ನು ವೈದ್ಯರಿಗೆ ಒದಗಿಸಬೇಕು. ಇದೆಲ್ಲವನ್ನೂ ಪರಿಶೀಲಿಸಿ, ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ಕಮಾಂಡ್ ಆಸ್ಪತ್ರೆಯು ಮೌಲ್ಯಮಾಪನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಧ್ಯಂತರ ವೈದ್ಯಕೀಯ ಜಾಮೀನು ಕೋರಿರುವ ಸೈಲ್ ಅವರ ಅರ್ಜಿ ನಿರ್ಧರಿಸಲು ಆರೋಗ್ಯ ಪರಿಸ್ಥಿತಿಯ ಮೌಲ್ಯಮಾಪನಾ ವರದಿ ಅಗತ್ಯವಾಗಿದೆ. ಒಂದೊಮ್ಮೆ ಕಮಾಂಡ್ ಆಸ್ಪತ್ರೆಯಲ್ಲಿ ಜಠರ ಕರುಳಿನ ತಜ್ಞ ವೈದ್ಯರು ಇಲ್ಲದಿದ್ದರೆ ಬೇರೆ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಲು ಸೈಲ್‌ಗೆ ಕಮಾಂಡೆಂಟ್ ಆಸ್ಪತ್ರೆ ಸೂಚಿಸಬಹುದಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಈ ನೆಲೆಯಲ್ಲಿ, ನವೆಂಬರ್ 20ರವರೆಗೆ ಸೈಲ್‌ಗೆ ಮಧ್ಯಂತರ ವೈದ್ಯಕೀಯ ಜಾಮೀನು ವಿಸ್ತರಿಸಲಾಗಿದೆ ಎಂದು ಪೀಠವು ಆದೇಶಿಸಿದ್ದು, ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು “ಸೈಲ್ ಅವರು ಗಂಭೀರವಾದ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ನಡುವೆ ಅವರ ಪ್ಲೇಟ್ಲೆಟ್ ಸಹ ಕಡಿಮೆಯಾಗಿದೆ. ಇದರಿಂದ ಅವರಿಗೆ ಯಕೃತ್ ಶಸ್ತ್ರಚಿಕಿತ್ಸೆ ನಡೆಸಲಾಗಿಲ್ಲ. ಪ್ಲೆಟ್ಲೆಟ್ ಹೆಚ್ಚಾದ ಮೇಲೆ ಹೃದಯದ ಕಾರ್ಯವೈಖರಿ ಪರಿಶೀಲಿಸಿ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು ಎಂದು ವೈದ್ಯರು ವರದಿ ನೀಡಿದ್ದಾರೆ. ಇದೂ ಸೇರಿ, ಸೈಲ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಕಮಾಂಡ್ ಆಸ್ಪತ್ರೆಯ ವೈದ್ಯರಿಗೆ ಸಲ್ಲಿಸಲಾಗುವುದು” ಎಂದರು.
ಆಗ ಪೀಠವು “ಸೈಲ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದರೆ ಅನಾರೋಗ್ಯ ತುತ್ತಾಗಿದ್ದಾರೆ ಎಂದಷ್ಟೆ ಹೇಳಿ” ಎಂದು ಪುನರುಚ್ಚರಿಸಿತ್ತು. ಕಳೆದ ಬಾರಿಯೂ ನ್ಯಾಯಾಯವು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.
ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ಬೆಂಗಳೂರಿನ ವಾಯುಸೇನೆಯ ಕಮಾಂಡ್ ಆಸ್ಪತ್ರೆಯಲ್ಲಿ ಸೈಲ್ ಅವರು ಆರೋಗ್ಯ ತಪಾಸಣೆಗೆ ಒಳಗಾಗಬೇಕು. ವೈದ್ಯರು ನೀಡುವ ಮೌಲ್ಯಮಾಪನಾ ವರದಿಯನ್ನು ಆಧರಿಸಿ ನ್ಯಾಯಾಲಯ ಮುಂದುವರಿಯಬಹುದು” ಎಂದರು.