ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಲನಚಿತ್ರಗಳ ವೀಕ್ಷಣೆಗೆ ಜನರಿಂದ ಡಿಜಿಟಲ್ ಮತ್ತು ನಗದಿನ ರೂಪದಲ್ಲಿ ಸಂಗ್ರಹಿಸುವ ಹಣದ ಲೆಕ್ಕವನ್ನು ಪ್ರತಿ ತಿಂಗಳ 15ರಂದು ಪರವಾನಗಿ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ಸ್ ಆಫ್ ಇಂಡಿಯಾಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದ್ದು, ಏಕಸದಸ್ಯ ಪೀಠದಲ್ಲಿ ಮಾರ್ಪಾಡು ಮಾಡಿದೆ.
ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಿತ್ರಗಳಿಗೆ 200 ರೂಪಾಯಿ ಏಕರೂಪದ ದರ ನಿಗದಿಪಡಿಸಲು ಅನುವು ಮಾಡಿರುವ ಕರ್ನಾಟಕ ಸಿನಿಮಾ ನಿಯಂತ್ರಣ (ತಿದ್ದುಪಡಿ) ನಿಯಮಗಳು 2025 ಅಡಿ ನಿಯಮ 55(6)ರ ಪ್ರಾವಿಸೊಗೆ ಹೈಕೋರ್ಟ್‌ನ ಏಕಸದಸ್ಯ ಪೀಠವು ಸೆಪ್ಟೆಂಬರ್ 23ರಂದು ನೀಡಿರುವ ತಡೆ ತೆರವು ಮಾಡುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಸಿನಿಮಾ ನಿರ್ಮಾಪಕರ ಸಂಘ ಪ್ರತ್ಯೇಕವಾಗಿ ಸಲ್ಲಿಸಿದ್ದ ಒಟ್ಟು ಆರು ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಕೆ ರಾಜೇಶ್ ರೈ ಅವರ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.
ಎಲ್ಲರ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು “ಕ್ರೆಡಿಟ್, ಡೆಬಿಟ್, ಯುಪಿಐ, ಬ್ಯಾಂಕ್ ಖಾತೆ ಮೂಲಕ ಟಿಕೆಟ್ ಬುಕ್ ಮಾಡಿದವರ ಪಟ್ಟಿಯನ್ನು ಪ್ರತಿವಾದಿಗಳು ನಿರ್ವಹಿಸಬೇಕು. ನಗದಿನ ಮೂಲಕ ಟಿಕೆಟ್ ಖರೀದಿಸಿರುವವರ ವಿಚಾರವನ್ನು ಈ ನ್ಯಾಯಾಲಯವು ಪ್ರಕರಣವನ್ನು ಮೆರಿಟ್ ಮೇಲೆ ಪರಿಗಣಿಸಿದಾಗ ನಿರ್ಧರಿಸಲಿದೆ” ಎಂದು ಆದೇಶಿಸಿದೆ.
ಮುಂದುವರಿದು, “ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಸೇರಿದಂತೆ ಪ್ರತಿವಾದಿಗಳು ಪ್ರಕರಣದಲ್ಲಿ ಯಶಸ್ವಿಯಾದರೆ ಸಂಗ್ರಹಿಸಿದ ಹಣವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಬಹುದು. ಒಂದೊಮ್ಮೆ ಸರ್ಕಾರದ ನಿಯಮವನ್ನು ಹೈಕೋರ್ಟ್ ಎತ್ತಿ ಹಿಡಿದರೆ ಆ ಹಣವನ್ನು ಸಾರ್ವಜನಿಕ ಹಿತಾಸಕ್ತಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾವು ಪರವಾನಗಿಗೆ ನೀಡಿರುವ ಪ್ರಾಧಿಕಾರಕ್ಕೆ ನಿಯಮಿತವಾಗಿ ತಿಂಗಳಿಗೊಮ್ಮೆ ಲೆಕ್ಕ ಸಲ್ಲಿಸಬೇಕು. ಮಲ್ಟಿಪ್ಲೆಕ್ಸ್ ಅಸೋಸಿಯೇನ್ಸ್ ಆಫ್ ಇಂಡಿಯಾವು ಮಲ್ಟಿಪ್ಲೆಕ್ಸ್‌ಗಳ ಪರವಾಗಿ ಮುಂದೆ ಬಂದಿರುವುದರಿಂದ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿನ ಲೆಕ್ಕವನ್ನು ಪಡೆದು ಅದನ್ನು ಪರವಾನಗಿ ಪ್ರಾಧಿಕಾರಿಗೆ ಮುಂದಿನ ತಿಂಗಳ 15ರೊಳಗೆ ಸಲ್ಲಿಸಬೇಕು. ಯಾವುದಾದರೂ ಮಲ್ಟಿಪ್ಲೆಕ್ಸ್ ಲೆಕ್ಕದ ಮಾಹಿತಿ ಒದಗಿಸದಿದ್ದರೆ ಈ ಮಧ್ಯಂತರ ಆದೇಶವು ಅವರಿಗೆ ಅನ್ವಯಿಸುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಲ್ಲದೇ, “ಹೆಚ್ಚುವರಿ ಅಡ್ವೊಕೇಟ್ ಜನರಲ್ ಇಸ್ಮಾಯಿಲ್ ಜಬೀವುಲ್ಲಾ ಅವರು ನ್ಯಾಯಾಲಯದ ಈ ಆದೇಶವನ್ನು ಸಾರ್ವಜನಿಕರಿಗೆ ತಿಳಿಸಲು ಅನುಮತಿ ಕೋರಿದ್ದು, ಅದಕ್ಕೆ ಅನುಮತಿಸಲಾಗಿದೆ. ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ಸ್ ಆಫ್ ಇಂಡಿಯಾವು ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಮತ್ತು ಸಿನಿಮಾ ಆರಂಭಕ್ಕೂ ಮುನ್ನ ನ್ಯಾಯಾಲಯದ ಈ ಆದೇಶವನ್ನು ಪ್ರದರ್ಶಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿ, ಏಕಸದಸ್ಯ ಪೀಠದ ಆದೇಶದಲ್ಲಿ ಮಾರ್ಪಾಡು ಮಾಡಿದೆ. ಅಲ್ಲದೇ, ಪ್ರಕರಣದ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿದೆ.
ಸೆಪ್ಟೆಂಬರ್ 23ರಂದು ನ್ಯಾಯಮೂರ್ತಿ ರವಿ ಹೊಸಮನಿ ಅವರ ಏಕಸದಸ್ಯ ಪೀಠವು ಅನುಕೂಲತೆಯ ಸಮತೋಲನದ ತತ್ವದ ಅನ್ವಯ ಸರ್ಕಾರದ ತಿದ್ದುಪಡಿ ನಿಯಮಕ್ಕೆ ತಡೆ ನೀಡದಿದ್ದರೆ ಮತ್ತು ಅರ್ಜಿದಾರರು ರಿಟ್ ಅರ್ಜಿಯಲ್ಲಿ ಯಶಸ್ಸು ಕಂಡರೆ ಪ್ರತಿವಾದಿಗಳು (ಮಲ್ಟಿಪ್ಲೆಕ್ಸ್) ಶಾಶ್ವತವಾಗಿ ತಮ್ಮ ಗಳಿಕೆಯನ್ನು ಕಳೆದುಕೊಳ್ಳಲಿದ್ದಾರೆ. ತಿದ್ದುಪಡಿ ನಿಯಮಕ್ಕೆ ತಡೆ ನೀಡಿದರೆ ಮತ್ತು ಅರ್ಜಿದಾರರು ಅಂತಿಮವಾಗಿ ಸೋಲು ಅನುಭವಿಸಿದರೆ ಗಳಿಸಿರುವ ಹಣಕ್ಕೆ ಸಂಬಂಧಿಸಿದಂತೆ ಸೂಕ್ತ ಆದೇಶ ಮಾಡಬಹುದು. ಹೀಗಾಗಿ, ತಿದ್ದುಪಡಿ ನಿಯಮಗಳಿಗೆ ಮುಂದಿನ ಆದೇಶದವರೆಗೆ ತಡೆ ನೀಡಲಾಗಿದೆ ಎಂದು ಆದೇಶಿಸಿತ್ತು. ಈ ಆದೇಶದಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಲ್ಪಟ್ಟ ಹಣಕ್ಕೆ ಸಂಬಂಧಿಸಿದಂತೆ ಮಾರ್ಪಾಡು ಮಾಡುವುದು ಸೂಕ್ತ ಎಂದು ವಿಭಾಗೀಯ ಪೀಠವು ಈ ಬದಲಾವಣೆ ಮಾಡಿದೆ.
ಇದಕ್ಕೂ ಮುನ್ನ, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಲಕ್ಷ್ಮಿನಾರಾಯಣ ಅವರು “ಸಿನಿಮಾ ಟಿಕೆಟ್ ದರ ಕಡಿಮೆ ಇದ್ದರೆ ಹೆಚ್ಚು ಜನರು ಸಿನಿಮಾಗೆ ಬರುತ್ತಾರೆ. ಆಗ ಸಿನಿಮಾ ಯಶಸ್ಸು ಕಾಣುತ್ತದೆ ಎಂಬುದು ವಾಣಿಜ್ಯ ಮಂಡಳಿಯ ಅನುಭವವಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಜನರ ಕಲ್ಯಾಣಕ್ಕಾಗಿ ಸಿನಿಮಾ ಟಿಕೆಟ್ ದರಕ್ಕೆ ಮಿತಿ ವಿಧಿಸಲು ಸರ್ಕಾರ ಮುಂದಾಗಿದೆ. ಇಲ್ಲಿ ಕರಾರಿನ ವಿಚಾರ ಬರುವುದಿಲ್ಲ. ಅಂತಿಮವಾಗಿ ಸಾಂವಿಧಾನಿಕ ಸಿಂಧುತ್ವ ನಿರ್ಧರಿಸುವವರೆಗೆ ನ್ಯಾಯಾಲಯ ತಡೆ ನೀಡಲಾಗದು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವಿಚಾರದಲ್ಲಿ ಹೈಕೋರ್ಟ್, ವಕ್ಫ್ ತಿದ್ದುಪಡಿ ಕಾಯಿದೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಇದನ್ನೇ ಮಾಡಿದೆ” ಎಂದರು.
ಮಲ್ಟಿಪ್ಲೆಕ್ಸ್ ಅಸೋಸಿಯೇನ್ಸ್ ಆಫ್ ಇಂಡಿಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ನ್ಯಾಯಾಲಯದ ಆಶಯದಂತೆ ಲೆಕ್ಕ ಪತ್ರ ನಿರ್ವಹಿಸುತ್ತೇವೆ. ಈ ಹಿಂದೆ ರಾಜ್ಯ ಸರ್ಕಾರವು ಇಂಥದ್ದೇ ಆದೇಶ ಮಾಡಿ, ಆನಂತರ ಅದನ್ನು ಹಿಂಪಡೆದಿತ್ತು” ಎಂದರು.
ಪ್ರತಿವಾದಿಗಳ ಪರವಾಗಿ ಹಿರಿಯ ವಕೀಲರಾದ ಧ್ಯಾನ್ ಚಿನ್ನಪ್ಪ, ವಿಕ್ರಮ್ ಹುಯಿಲಗೋಳ ಮತ್ತು ಡಿ ಆರ್ ರವಿಶಂಕರ್ ಹಾಜರಿದ್ದರು.