
ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ ₹200 ಏಕರೂಪ ದರ ನಿಗದಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆ ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಸಿನಿಮಾ ನಿರ್ಮಾಪಕರ ಸಂಘ ಸೇರಿದಂತೆ ಎಂಟು ಸಿನಿಮಾ/ಕನ್ನಡ ಸಂಘಟನೆಗಳು ಹಾಗೂ 33 ವ್ಯಕ್ತಿಗಳು, ಶ್ರೀವಾರಿ ಟಾಕೀಸ್ ಕರ್ನಾಟಕ ಹೈಕೋರ್ಟ್ ಕದತಟ್ಟುವ ಮೂಲಕ ನಿರ್ಣಾಯಕ ಹೋರಾಟಕ್ಕೆ ಇಳಿದಿವೆ.
ಕರ್ನಾಟಕ ಸಿನಿಮಾ ನಿಯಂತ್ರಣ (ತಿದ್ದುಪಡಿ) ನಿಯಮಗಳು 2025 ಅಡಿ ನಿಯಮ 55(6)ರ ಪ್ರಾವಿಸೊಗೆ ಹೈಕೋರ್ಟ್‌ನ ಏಕಸದಸ್ಯ ಪೀಠವು ಸೆಪ್ಟೆಂಬರ್ 23ರಂದು ನೀಡಿರುವ ತಡೆ ತೆರವು ಮಾಡುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಸಿನಿಮಾ ನಿರ್ಮಾಪಕರ ಸಂಘ ಪ್ರತ್ಯೇಕವಾಗಿ ಒಟ್ಟು ಆರು ಮೇಲ್ಮನವಿಗಳನ್ನು ಸಲ್ಲಿಸಿದ್ದು, ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಕೆ ರಾಜೇಶ್ ರೈ ಅವರ ರಜಾಕಾಲೀನ ವಿಭಾಗೀಯ ಪೀಠವು ಮಂಗಳವಾರ ವಿಚಾರಣೆ ನಡೆಸಲಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಸಿನಿಮಾ ನಿರ್ಮಾಪಕರ ಸಂಘ, ಕನ್ನಡ ಸಿನಿಮಾ ನಿರ್ದೇಶಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಡಾ. ರಾಜಕುಮಾರ್ ಸೇನೆ, ಸುವರ್ಣ ಕರ್ನಾಟಕ ಚಲನಚಿತ್ರ ವಿತರಕರ ಸಂಘ, ಕರ್ನಾಟಕ ಸಿನಿ ಕಲಾವಿದರು, ತಂತ್ರಜ್ಞರ ಒಕ್ಕೂಟ, ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ, ಎ ಗಣೇಶ್, ಕೆ ವಿ ವೆಂಕಟೇಶ್, ಪ್ರಿಯಾಮ ದಾಸರ ಚಂದ್ರು, ಆರ್ ಶಿವಶಂಕರ್, ಸಿ ಎಸ್ ವೆಂಕಟಸುಬ್ಬು, ರಮೇಶ್ ಕಶ್ಯಪ್ ಮತ್ತಿತರರು ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ.
ಮಲ್ಟಿಪ್ಲೆಕ್ಸ್ ಅಸೋಶಿಯೇಶನ್ ಆಫ್ ಇಂಡಿಯಾ, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಸಂತನು ಪೈ, ಸಿನಿಪ್ಲೆಕ್ಸ್ ಪ್ರೈವೇಟ್ ಲಿಮಿಟೆಡ್, ಕೀ ಸ್ಟೋನ್ ಎಂಟರ್‌ಪ್ರೈಸಸ್, ಹೊಂಬಾಳೆ ಫಿಲ್ಮ್ಸ್ ಎಲ್‌ಎಲ್‌ಪಿ, ವಿ ಕೆ ಫಿಲ್ಮ್ಸ್ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಸೆಪ್ಟೆಂಬರ್ 23ರಂದು ನ್ಯಾಯಮೂರ್ತಿ ರವಿ ಹೊಸಮನಿ ಅವರ ಏಕಸದಸ್ಯ ಪೀಠವು ಅನುಕೂಲತೆಯ ಸಮಾನತೆಯ ಪರೀಕ್ಷೆಯ ಅನ್ವಯ ಸರ್ಕಾರದ ತಿದ್ದುಪಡಿ ನಿಯಮಕ್ಕೆ ತಡೆ ನೀಡದಿದ್ದರೆ ಮತ್ತು ಅರ್ಜಿದಾರರು ರಿಟ್ ಅರ್ಜಿಯಲ್ಲಿ ಯಶಸ್ಸು ಕಂಡರೆ ಶಾಶ್ವತವಾಗಿ ತಮ್ಮ ಗಳಿಕೆಯನ್ನು ಕಳೆದುಕೊಳ್ಳಲಿದ್ದಾರೆ. ತಿದ್ದುಪಡಿ ನಿಯಮಕ್ಕೆ ತಡೆ ನೀಡಿದರೆ ಮತ್ತು ಅರ್ಜಿದಾರರು ಅಂತಿಮವಾಗಿ ನಷ್ಟ ಅನುಭವಿಸಿದರೆ ಗಳಿಸಿರುವ ಹಣಕ್ಕೆ ಸಂಬಂಧಿಸಿದಂತೆ ಸೂಕ್ತ ಆದೇಶ ಮಾಡಬಹುದು. ಹೀಗಾಗಿ, ತಿದ್ದುಪಡಿ ನಿಯಮಗಳಿಗೆ ಮುಂದಿನ ಆದೇಶದವರೆಗೆ ತಡೆ ನೀಡಲಾಗಿದೆ ಎಂದು ಆದೇಶಿಸಿತ್ತು.