ಸುದ್ದಿಗಳು

ಅತ್ಯಾಚಾರ ಆರೋಪಿಯ ಎನ್‌ಕೌಂಟರ್: ರಿತೇಶ್‌ನ ಮರಣೋತ್ತರ ಪರೀಕ್ಷೆ ನಡೆಸಲು ಹೈಕೋರ್ಟ್‌ ನಿರ್ದೇಶನ

ನಿರ್ದೇಶನದಂತೆ ಸ್ಥಳೀಯ ಆಸ್ಪತ್ರೆಯ ಇಬ್ಬರು ವೈದ್ಯರು ಸಂತ್ರಸ್ತ ರಿತೇಶ್‌ ಕುಮಾರ್‌ನ ಮರಣೋತ್ತರ ಪರೀಕ್ಷೆ ನಡೆಸಬೇಕು. ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಮಾಡಬೇಕು ಎಂದು ಆದೇಶಿಸಿದ ನ್ಯಾಯಾಲಯ.

Bar & Bench

ಹುಬ್ಬಳ್ಳಿಯಲ್ಲಿ ಎರಡು ದಿನಗಳ ಹಿಂದೆ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ, ಆನಂತರ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಬಲಿಯಾದ ಬಿಹಾರದ ರಿತೇಶ್‌ ಕುಮಾರ್‌ನ ಮರಣೋತ್ತರ ಪರೀಕ್ಷೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ ಮತ್ತು ಡಾ.ಮಧು ಭೂಷಣ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ಪೊಲೀಸ್‌ ಎನ್‌ಕೌಂಟರ್‌ನಲ್ಲಿ ವ್ಯಕ್ತಿಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಪಿಯುಸಿಎಲ್‌ ವರ್ಸಸ್‌ ಮಹಾರಾಷ್ಟ್ರ ಪ್ರಕರಣದಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು” ಎಂದು ಆದೇಶಿಸಿತು.

“ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಸ್ಥಳೀಯ ಆಸ್ಪತ್ರೆಯ ಇಬ್ಬರು ವೈದ್ಯರು ಸಂತ್ರಸ್ತ ರಿತೇಶ್‌ ಕುಮಾರ್‌ನ ಮರಣೋತ್ತರ ಪರೀಕ್ಷೆ ನಡೆಸಬೇಕು. ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಮಾಡಬೇಕು. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಸಂಗ್ರಹಿಸುವ ದೇಹದ ಅಂಗಾಂಗಳ ಮಾದರಿಗಳನ್ನು ಕಾಪಿಟ್ಟು, ಅದು ತನಿಖೆಗೆ ಅಗತ್ಯವಾದರೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಪಿಯುಸಿಎಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ರಾಜ್ಯ ಸರ್ಕಾರದ ವಿರುದ್ಧ ಸದ್ಯಕ್ಕೆ ಯಾವುದೇ ಆರೋಪ ಮಾಡುವುದಿಲ್ಲ. ಸುಪ್ರೀಂ ಕೋರ್ಟ್‌ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದಷ್ಟೇ ಕೋರುತ್ತಿದ್ದೇವೆ. ಇಂದು ರಿತೇಶ್‌ ಅಂತ್ಯಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿ ಇದ್ದು, ಆತನ ಮೃತದೇಹ ಸಂಗ್ರಹಿಸಿಡಲು ನಿರ್ದೇಶಿಸುವಂತೆ ಕೋರುತ್ತೀದ್ದೇನೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಎನ್‌ಕೌಂಟರ್‌ ಸಂಬಂಧ ಈಗಾಗಲೇ ಎಫ್‌ಐಆರ್‌ ದಾಖಲಿಸಲಾಗಿದ್ದು, ಸಿಐಡಿ ತನಿಖೆ ನಡೆಸುತ್ತಿದೆ. ಇಂಥ ಪ್ರಕರಣಗಳಲ್ಲಿ ಮೃತದೇಹವನ್ನು ಹೂಳಲಾಗುತ್ತದೆಯೇ ವಿನಾ ಸುಡುವುದಿಲ್ಲ. ಸುಪ್ರೀಂ ಕೋರ್ಟ್‌ ನಿರ್ದೇಶನಗಳ ಅನ್ವಯ ಪ್ರಕ್ರಿಯೆ ನಡೆಸಲಾಗುತ್ತಿದೆ. ಕುಟುಂಬದ ಸದಸ್ಯರಿಗೆ ದೇಹ ಹಸ್ತಾಂತರಿಸಬೇಕಾದರೆ ಆತನ ಗುರುತು ಪತ್ತೆಯಾದ ಬಳಿಕ ಅಂತ್ಯಸಂಸ್ಕಾರ ಅನುಮತಿಸಲಾಗುತ್ತದೆ. ಒಂದೊಮ್ಮೆ ತನಿಖೆಗೆ ಅಗತ್ಯವಾದರೆ ಮೃತದೇಹವನ್ನು ಹೊರತೆಗೆಯಬೇಕಾಗಿರುವುದರಿಂದ ಹೂಳಲಾಗುತ್ತದೆ” ಎಂದರು.

“ಎಜಿ ವಾದವನ್ನು ಆಧರಿಸುವುದಾದರೆ ರಿತೇಶ್‌ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂಬ ಅರ್ಜಿದಾರರ ಆತಂಕದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯ ಸರ್ಕಾರ ಇಡೀ ಪ್ರಕ್ರಿಯೆಯ ಕುರಿತು ಅಫಿಡವಿಟ್‌ ಸಲ್ಲಿಸಬೇಕು” ಎಂದು ಆದೇಶಿಸಿ, ವಿಚಾರಣೆಯನ್ನು ಏಪ್ರಿಲ್‌ 24ಕ್ಕೆ ಮುಂದೂಡಿತು.

ಆರೋಪಿ ರಿತೇಶ್‌ ಏಪ್ರಿಲ್‌ 13ರಂದು ಹುಬ್ಬಳ್ಳಿಯ ವಿಜಯನಗರದ ಮನೆಯ ಸಮೀಪ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ತಿಂಡಿ-ತಿನಿಸು ನೀಡುವುದಾಗಿ ಪುಸಲಾಯಿಸಿ ಅಪಹರಿಸಿದ್ದ. ತದನಂತರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಇದಾದ ಕೆಲವೇ ನಿಮಿಷಗಳಲ್ಲಿ ರಿತೇಶ್‌ ಬಂಧನವಾಗಿತ್ತು. ಸಂಜೆ ಆತನನ್ನು ನಗರದ ತಾರಿಹಾಳ ಸಮೀಪ ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸ್‌ ವಾಹನದ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದ. ಅಶೋಕನಗರದ ಪಿಎಸ್‌ಐ ಅನ್ನಪೂರ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದ. ಈ ವೇಳೆ ಆತನ ಕಾಲಿಗೆ ಮತ್ತು ಬೆನ್ನಿಗೆ ಗುಂಡೇಟು ಹೊಡೆಯಲಾಗಿತ್ತು. ಗಾಯಗೊಂಡಿದ್ದ ಆತನನ್ನು ಕೆಎಂಸಿ-ಆರ್‌ಐ ಆಸ್ಪತ್ರೆಗೆ ತರಲಾಗಿತ್ತು. ಆದರೆ, ಆ ವೇಳೆಗಾಗಲೇ ರಿತೇಶ್‌ ಕುಮಾರ್‌ ಸಾವನ್ನಪ್ಪಿದ್ದ.