ಹುಬ್ಬಳ್ಳಿಯಲ್ಲಿ ಬಾಲಕಿ ಅತ್ಯಾಚಾರ-ಕೊಲೆ: ಆರೋಪಿ ರಿತೇಶ್‌ ಕುಮಾರ್‌ ಎನ್‌ಕೌಂಟರ್‌ಗೆ ಆಕ್ಷೇಪಿಸಿ ಪಿಐಎಲ್‌ ಸಲ್ಲಿಕೆ

“ಆರೋಪಿ ರಿತೇಶ್‌ ಶವಸಂಸ್ಕಾರ ಇಂದು ನಡೆಯಲಿದ್ದು, ಪೊಲೀಸರು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ, ಶವ ಶಂಸ್ಕಾರ ಮಾಡಬಾರದು ಎಂದು ನಿರ್ದೇಶಿಸಬೇಕು” ಎಂದು ಕೋರಿದ ಅರ್ಜಿದಾರರ ಪರ ವಕೀಲೆ.
ಹುಬ್ಬಳ್ಳಿಯಲ್ಲಿ ಬಾಲಕಿ ಅತ್ಯಾಚಾರ-ಕೊಲೆ: ಆರೋಪಿ ರಿತೇಶ್‌ ಕುಮಾರ್‌ ಎನ್‌ಕೌಂಟರ್‌ಗೆ ಆಕ್ಷೇಪಿಸಿ ಪಿಐಎಲ್‌ ಸಲ್ಲಿಕೆ
Published on

ಹುಬ್ಬಳ್ಳಿಯಲ್ಲಿ ಎರಡು ದಿನಗಳ ಹಿಂದೆ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಬಿಹಾರದ ರಿತೇಶ್‌ ಕುಮಾರ್‌ ಎನ್‌ಕೌಂಟರ್‌ಗೆ ಆಕ್ಷೇಪಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಮಧ್ಯಾಹ್ನ ನ್ಯಾಯಾಲಯವು ಅರ್ಜಿ ವಿಚಾರಣೆ ನಡೆಸಲಿದೆ.

ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠದ ವಕೀಲೆಯೊಬ್ಬರು ಅರ್ಜಿಯ ಕುರಿತು ಉಲ್ಲೇಖಿಸಿದರು.

ಅರ್ಜಿದಾರರ ಪರ ವಕೀಲೆಯು “ಆರೋಪಿ ರಿತೇಶ್‌ ಶವಸಂಸ್ಕಾರ ಇಂದು ನಡೆಯಲಿದ್ದು, ಪೊಲೀಸರು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ, ಶವ ಶಂಸ್ಕಾರ ಮಾಡಬಾರದು ಎಂದು ನಿರ್ದೇಶಿಸಬೇಕು” ಎಂದು ಕೋರಿದರು.

ಆಗ ಪೀಠವು ವಿಳಂಬವಾಗಿ ಅರ್ಜಿ ಸಲ್ಲಿಸಿರುವುದೇಕೆ? ಆ ರೀತಿ ನಿರ್ದೇಶನ ನೀಡಲಾಗದು ಎಂದಿತು. ಆಗ ಅರ್ಜಿದಾರರ ಪರ ವಕೀಲರು “ಲಾಜಿಸ್ಟಿಕ್‌ ಸಮಸ್ಯೆಯಿಂದಾಗಿ ಅರ್ಜಿಯನ್ನು ತುರ್ತಾಗಿ ದಾಖಲಿಸಲಾಗಿಲ್ಲ. ಹೀಗಾಗಿ, ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು” ಎಂದು ಕೋರಿದರು.

ಕೆಲಕಾಲ ಸಮಾಲೋಚನೆ ನಡೆಸಿದ ಪೀಠವು ಮಧ್ಯಾಹ್ನ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಏಪ್ರಿಲ್‌ 13ರಂದು ಹುಬ್ಬಳ್ಳಿಯ ವಿಜಯನಗರದ ಮನೆಯ ಸಮೀಪ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ತಿಂಡಿ-ತಿನಿಸು ನೀಡುವುದಾಗಿ ಪುಸಲಾಯಿಸಿ, ಅಪಹರಿಸಿದ್ದ 35 ವರ್ಷದ ಬಿಹಾರ ರಾಜ್ಯದ ಪಟ್ನಾದ ರಿತೇಶ್‌ ಕುಮಾರ್‌ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದನು. ಇದಾದ ಕೆಲವೇ ನಿಮಿಷಗಳಲ್ಲಿ ರಿತೇಶ್‌ ಬಂಧನವಾಗಿತ್ತು. ಸಂಜೆ ಆತನನ್ನು ನಗರದ ತಾರಿಹಾಳ ಸಮೀಪ ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸ್‌ ವಾಹನದ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದನು. ಅಶೋಕನಗರದ ಪಿಎಸ್‌ಐ ಅನ್ನಪೂರ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಗುಂಡು ಹಾರಿಸಲಾಗಿ, ಗುಂಡು ಆತನ ಕಾಲು ಮತ್ತು ಬೆನ್ನಿಗೆ ತಗುಲಿತ್ತು. ಗಾಯಗೊಂಡಿದ್ದ ಆತನನ್ನು ತಕ್ಷಣ ಕೆಎಂಸಿ-ಆರ್‌ಐ ಆಸ್ಪತ್ರೆಗೆ ತರಲಾಗಿತ್ತು. ಈ ವೇಳೆಗಾಗಲೇ ರಿತೇಶ್‌ ಕುಮಾರ್‌ ಸಾವನ್ನಪ್ಪಿದ್ದನು.

Kannada Bar & Bench
kannada.barandbench.com