ರಾಜ್ಯದಲ್ಲಿರುವ ಎಲ್ಲಾ ಅಂಧ ವಿದ್ಯಾರ್ಥಿಗಳಿಗೆ 15 ದಿನಗಳ ಒಳಗಾಗಿ ಬ್ರೈಲ್ ಲಿಪಿಯಲ್ಲಿ ಪಠ್ಯಪುಸ್ತಕ ಪೂರೈಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ರಾಷ್ಟ್ರೀಯ ಅಂಧರ ಒಕ್ಕೂಟ (ಎನ್‌ಎಫ್‌ಬಿ) - ಕರ್ನಾಟಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕ ಪೂರೈಸುವುದಾಗಿ ಕಳೆದ ವರ್ಷ ಭರವಸೆ ನೀಡಲಾಗಿತ್ತು ಎಂದು ಅರ್ಜಿದಾರರ ಪರ ವಕೀಲೆ ವರ್ಷಾ ಐಯ್ಯಂಗಾರ್ ಹೇಳಿದ್ದನ್ನು ಪರಿಗಣಿಸಿದ ಪೀಠವು ಮೇಲಿನ ಆದೇಶ ಮಾಡಿದೆ.
ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಬ್ರೈಲ್‌ನಲ್ಲಿ ಉಚಿತ ಪಠ್ಯಪುಸ್ತಕ, ಅವಲೋಕನ ಪುಸ್ತಕಗಳು ಮತ್ತು ಇತರೆ ಕಲಿಕೆ/ಶೈಕ್ಷಣಿಕ ವಸ್ತುಗಳನ್ನು ಪೂರೈಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಎನ್‌ಎಫ್‌ಬಿ ಕರ್ನಾಟಕ ಮನವಿ ಮಾಡಿತ್ತು. ಈ ಸಂಬಂಧ 2016ರ ನವೆಂಬರ್ 29ರಂದು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ ಎಂದು ಅರ್ಜಿದಾರರು ಪೀಠದ ಗಮನಸೆಳೆದರು.
ಕನ್ನಡ ಮಾಧ್ಯಮದ ಪಠ್ಯಪುಸ್ತಕ ಪೂರೈಸಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ ಎಂದ ಪೀಠವು ಎರಡು ವಾರಗಳಲ್ಲಿ ಅನುಪಾಲನಾ ವರದಿ ಸಲ್ಲಿಸುವಂತೆ ಆದೇಶಿಸಿದ್ದು, ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ಮುಂದೂಡಿದೆ.
ಅಂಧ ಮಕ್ಕಳ ಅನುಕೂಲಕ್ಕಾಗಿ 107 ಪುಸ್ತಕಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಮಾಹಿತಿ ನೀಡಿತು.