ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧದ ಪ್ರಕರಣದಲ್ಲಿ ಅನುಮತಿ ಪಡೆಯದೇ ರಾಜ್ಯ ಸರ್ಕಾರವು ಆರೋಪ ಪಟ್ಟಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸದಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ರದ್ದತಿ ಕೋರಿ ಬಿಜೆಪಿ ಮುಖಂಡ ಹಾಗೂ ವಕೀಲ ಜಿ ದೇವರಾಜೇಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
“ದೇವರಾಜೇಗೌಡ ಅವರು ತನಿಖೆಗೆ ಸಹಕರಿಸಬೇಕು. ಹೊಳನರಸೀಪುರ ಟೌನ್ ಠಾಣೆಯ ಪೊಲೀಸರು ಹೈಕೋರ್ಟ್ ಅನುಮತಿ ಪಡೆಯದೇ ಅಂತಿಮ ಆರೋಪ ಪಟ್ಟಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸುವಂತಿಲ್ಲ” ಎಂದು ಆದೇಶಿಸಿ, ವಿಚಾರಣೆಯನ್ನು ಪೀಠವು ಡಿಸೆಂಬರ್ 5ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ರಾಜಕೀಯ ದುರುದ್ದೇಶದಿಂದ ದೇವರಾಜೇಗೌಡ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರುದಾರೆಯ ಪತಿ ಹಿಂದೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ಬಿ ವರದಿ ಸಲ್ಲಿಕೆಯಾಗಿದೆ” ಎಂದು ಆಕ್ಷೇಪಿಸಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ದೇವರಾಜೇಗೌಡ ಅವರ ಫೋನ್‌ನಲ್ಲಿ ಕೆಲವು ಫೋಟೊಗಳು ಪತ್ತೆಯಾಗಿವೆ. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ವರದಿ ಇನ್ನಷ್ಟೇ ಬರಬೇಕಿದೆ” ಎಂದರು.
ಪ್ರಕರಣದ ಹಿನ್ನೆಲೆ: ಮಹಿಳೆಯೊಬ್ಬರು ಹೊಳೆ ನರಸೀಪುರ ಠಾಣೆಗೆ 2024ರ ಏಪ್ರಿಲ್ 1ರಂದು ದೇವರಾಜೇಗೌಡ ವಿರುದ್ಧ ದೂರು ದಾಖಲಿಸಿದ್ದರು. ಹಾಸನದ ನಿಲವಾಗಿಲು ಗ್ರಾಮದ ರಸ್ತೆಯಲ್ಲಿ 30x40 ಅಡಿ ವಿಸ್ತೀರ್ಣದ ನಿವೇಶನವನ್ನು ನನ್ನ ಪತಿ ಹೊಂದಿದ್ದಾರೆ. ಅದನ್ನು ಮಾರಾಟ ಮಾಡುವ ವಿಚಾರವಾಗಿ ದೂರು ದಾಖಲಾಗುವ ದಿನದಿಂದ 10 ತಿಂಗಳ ಹಿಂದೆ ದೇವರಾಜೇಗೌಡ ಅವರನ್ನು ಭೇಟಿ ಮಾಡಿದ್ದೆ. ಅಂದಿನಿಂದ ತನ್ನೊಂದಿಗೆ ಅವರು ಮಾತನಾಡುತ್ತಿದ್ದರು. ಆ ನಿವೇಶನದಲ್ಲಿ ನಾನೇ ಮನೆಯನ್ನು ಕಟ್ಟಿಸಿಕೊಡುತ್ತೇನೆ. ಉಪ ವಿಭಾಗಾಧಿಕಾರಿ ನನಗೆ ಪರಿಚಯವಿದ್ದು, ನಿಮ್ಮ ಕೆಲಸ ಮಾಡಿಕೊಡುತ್ತೇನೆ. ನೀನು ಒಬ್ಬಳೇ ಹಾಸನಕ್ಕೆ ಬರಬೇಕು ಎಂದು ಹೇಳಿದ್ದರು.
ನಾನು ಹಾಸನಕ್ಕೆ ಹೋದಾಗ ಹೊಳೆನರಸೀಪುರ ರಸ್ತೆಗೆ ಹೊಂದಿಕೊಂಡಿರುವ ಬಿಯರ್ ತಯಾರಿಕಾ ಘಟಕದ ಹಿಂದಿರುವ ಪ್ರದೇಶಕ್ಕೆ ಕರೆದೊಯ್ದು, ಮೈ ಕೈಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ. ನಂತರ ತಮ್ಮನ್ನು ಮನೆಗೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ತನ್ನನ್ನು ಹೆದರಿಸಿ ದೈಹಿಕವಾಗಿ ಬಳಸಿಕೊಂಡು ಜೀವ ಬೆದರಿಕೆ ಹಾಕಿರುತ್ತಾರೆ. ಫೆಬ್ರವರಿ 2ರಂದು ನಾನು ಹೇಳಿದ ಜಾಗಕ್ಕೆ ನೀನು ಬರಲಿಲ್ಲ ಎಂದರೆ ನಾನು ನಿನಗೆ ಕಳುಹಿಸಿರುವ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನ ಮೇರೆಗೆ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಜೀವ ಬೆದರಿಕೆ, ಅವಮಾನ ಮಾಡಿರುವುದು ಸೇರಿದಂತೆ ಇನ್ನಿತರ ಆರೋಪದ ಮೇಲೆ ಹೊಳನರಸೀಪುರ ಟೌನ್ ಠಾಣೆಯಲ್ಲಿ ದೇವರಾಜೇಗೌಡ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354(ಎ), 354ಸಿ, 354ಡಿ, 376(1), 448, 504, 506 ಮತ್ತು 34 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66 (ಇ) ಅಡಿ ಪ್ರಕರಣ ದಾಖಲಾಗಿತ್ತು.