Prajwal Revanna, Rahul Gandhi and Karnataka HC 
ಸುದ್ದಿಗಳು

[ಪ್ರಜ್ವಲ್‌ನಿಂದ 400 ಮಹಿಳೆಯರ ಅತ್ಯಾಚಾರ ಆರೋಪ] ರಾಹುಲ್‌ ವಿರುದ್ಧದ ಪಿಐಎಲ್‌ ವಜಾ: ಅರ್ಜಿದಾರರಿಗೆ ₹25 ಸಾವಿರ ದಂಡ

ಆಲ್‌ ಇಂಡಿಯಾ ದಲಿತ ಆಕ್ಷನ್‌ ಕಮಿಟಿಯು ರಾಷ್ಟ್ರೀಯ ಅಧ್ಯಕ್ಷ ಚಿ ನಾ ರಾಮು ಮತ್ತು ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ದೇವರಾಜ್‌ ಅರ್ಜಿ ವಜಾ. ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ದಂಡ ಮೊತ್ತ ಪಾವತಿಸಲು ಆದೇಶಿಸಿದ ಹೈಕೋರ್ಟ್‌.

Bar & Bench

ಜೆಡಿಎಸ್‌ನ ಉಚ್ಚಾಟಿತ ಸಂಸದ ಪ್ರಜ್ವಲ್‌ ರೇವಣ್ಣ ಅವರು 400ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿ, ಅವರ ವಿಡಿಯೋಗಳನ್ನು ಮಾಡಿಕೊಂಡಿದ್ದಾರೆ ಎಂದು ಕಳೆದ ಲೋಕಸಭಾ ಚುನಾವಣೆ ವೇಳೆ ಸಾರ್ವಜನಿಕವಾಗಿ ಸುಳ್ಳು ಹರಡಿದ ಆರೋಪದ ಮೇಲೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌, ಅರ್ಜಿದಾರರಿಗೆ ₹25 ಸಾವಿರ ದಂಡ ವಿಧಿಸಿದೆ.

ಆಲ್‌ ಇಂಡಿಯಾ ದಲಿತ ಆಕ್ಷನ್‌ ಕಮಿಟಿಯು ರಾಷ್ಟ್ರೀಯ ಅಧ್ಯಕ್ಷ ಚಿ ನಾ ರಾಮು ಮತ್ತು ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ದೇವರಾಜ್‌ ಅವರಿಂದ ಜಿ ಆರ್‌ ಲಾ ಫರ್ಮ್‌ ಮೂಲಕ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ನಡೆಸಿತು.

“ಅರ್ಜಿಯನ್ನು ವಜಾ ಮಾಡಲಾಗಿದೆ. ಅರ್ಜಿದಾರರು ₹25 ಸಾವಿರ ದಂಡದ ಮೊತ್ತವನ್ನು ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಪಾವತಿಸಬೇಕು” ಎಂದು ಆದೇಶಿಸಿದೆ.

ಅರ್ಜಿದಾರರ ಪರ ವಕೀಲ ಎಸ್‌ ಎಸ್‌ ರವಿಶಂಕರ್‌ ಅವರು “ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಪ್ರಚಾರ ಸಭೆಯಲ್ಲಿ ರಾಹುಲ್‌ ಗಾಂಧಿ ಅವರು ಮತಕ್ಕಾಗಿ ಪ್ರಜ್ವಲ್‌ ರೇವಣ್ಣ 400 ಮಹಿಳೆಯರನ್ನು ಅತ್ಯಾಚಾರ ಮಾಡಿ, ವಿಡಿಯೊ ಮಾಡಿಕೊಂಡಿದ್ದಾರೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಭಾರತೀಯ ಮಹಿಳೆಯರ ಘನತೆಗೆ, ವಿಶೇಷವಾಗಿ ಹಾಸನದ ಮಹಿಳೆಯರ ಘನತೆಗೆ ಹಾನಿ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮಕ್ಕೆ ಆದೇಶಿಸಬೇಕು” ಎಂದು ಕೋರಿದರು.

ಮುಂದುವರಿದು, “ರಾಹುಲ್‌ ಗಾಂಧಿ ಅವರು ಇಂಥದ್ದೇ ಉಡಾಫೆಯ ಹೇಳಿಕೆಗಳನ್ನು ಹಿಂದೆಯೂ ನೀಡಿದ್ದಾರೆ. ಈ ಹಿಂದೆ ಮೋದಿ ಉಪನಾಮ ಹೊಂದಿದವರು ಕಳ್ಳರು ಎಂದಿದ್ದರು. ಇದರಿಂದ ಅವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಲಾಗಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು. ರಾಹುಲ್‌ ಅವರ ಪೌರತ್ವ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ” ಎಂದು ಪೀಠದ ಗಮನಸೆಳೆದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ನಿಲೋಫರ್‌ ಅಕ್ಬರ್‌ ಅವರು “ದುರುದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ” ಎಂದು ಆಕ್ಷೇಪಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ದಂಡ ವಿಧಿಸಿ ಅರ್ಜಿ ವಜಾ ಮಾಡಿ, ಆದೇಶಿಸಿತು.

ಪ್ರಕರಣದ ಹಿನ್ನೆಲೆ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 2024ರ ಮೇ 2ರಂದು ಶಿವಮೊಗ್ಗದಲ್ಲಿ ಪ್ರಚಾರ ಭಾಷಣ ಮಾಡಿದ್ದ ರಾಹುಲ್‌ ಗಾಂಧಿ ಅವರು ಹಾಸನದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಪ್ರಜ್ವಲ್‌ ರೇವಣ್ಣ ಅವರು 400 ಮಹಿಳೆಯರನ್ನು ಅತ್ಯಾಚಾರ ಮಾಡಿ, ಆ ಘಟನೆಯನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಇಂಥ ಅಭ್ಯರ್ಥಿಯ ಪರವಾಗಿ ಮತ ಕೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರ ಕ್ಷಮೆ ಕೋರಬೇಕು ಎಂದು ವಾಗ್ದಾಳಿ ನಡೆಸಿದ್ದರು.

ಈ ಹೇಳಿಕೆಯ ಮೂಲಕ ಮಹಿಳೆಯ ಘನತೆಗೆ ವಿಶೇಷವಾಗಿ ಹಾಸನ ಭಾಗದ ಮಹಿಳೆಯರ ಘನತೆಗೆ ರಾಹುಲ್‌ ಹಾನಿ ಮಾಡಿದ್ದಾರೆ. ಸುಳ್ಳು ಸುದ್ದಿ ಹರಡುವ ಮೂಲಕ ಮತಗಳಿಕೆಗೆ ಪ್ರಕರಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಭಾರತದ ಮಹಿಳೆಯ ಘನತೆಗೆ ಹಾನಿ ಮಾಡಿದ್ದಾರೆ. ಅಧಿಕಾರಿಗಳೂ ಅವರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.