ರಾಜ್ಯದಾದ್ಯಂತ ಶಾಲಾ, ಕಾಲೇಜುಗಳ ಸಮೀಪ ಹಾಗೂ ಮೇಲ್ಭಾಗಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಸೇರಿದಂತೆ ಎಲ್ಲ ಎಸ್ಕಾಂಗಳಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಮೂರು ತಿಂಗಳ ಕಾಲಾವಕಾಶ ನೀಡಿದೆ.
ಕೊಪ್ಪಳ ನಗರದ ಬನ್ನಿಕಟ್ಟಿ ಬಳಿಯ ಬಿಸಿಎಂ ಹಾಸ್ಟೆಲ್‌ನಲ್ಲಿ 2019ರ ಆಗಸ್ಟ್ 15ರಂದು ಧ್ಜಜಸ್ತಂಭ ತೆರವುಗೊಳಿಸುವ ವೇಳೆ ವಿದ್ಯುತ್ ತಂತಿ ತಗುಲಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಮೇಲ್ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ತೆರವುಗೊಳಿಸಲಾಗಿದೆಯೇ ಎಂಬ ಪೀಠದ ಪ್ರಶ್ನೆಗೆ ಉತ್ತರಿಸಿದ ಕೆಪಿಟಿಸಿಎಲ್ ಪರ ವಕೀಲ ಶ್ರೀರಂಗ ಸುಬ್ಬಣ್ಣ ಅವರು ”ನ್ಯಾಯಾಲಯದ ನಿರ್ದೇಶನದಂತೆ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳ ಸಮೀಪದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಗುರುತಿಸಿ, ಸ್ಥಳಾಂತರಗೊಳಿಸುವ ಕಾರ್ಯವನ್ನು ಎಸ್ಕಾಂಗಳು ಆರಂಭಿಸಿವೆ. ಹಂತ ಹಂತವಾಗಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದ್ದು, ಅದಕ್ಕೆ ಕನಿಷ್ಠ ಮೂರುನಾಲ್ಕು ತಿಂಗಳು ಬೇಕು” ಎಂದರು.
ಈ ಹೇಳಿಕೆಯನ್ನು ಪರಿಗಣಿಸಿದ ಪೀಠವು ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳಿಗೆ ತೆರವು ಕಾರ್ಯ ಮುಂದುವರಿಸಲು ಮೂರು ತಿಂಗಳ ಕಾಲಾವಕಾಶ ನೀಡಿತು.
ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ವಕೀಲೆ ಬಿ ವಿ ವಿದ್ಯುಲ್ಲತಾ ಅವರು ರಾಜ್ಯದಲ್ಲಿರುವ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿನ ಮೂಲ ಸೌಕರ್ಯ ಸೇರಿ ಅಲ್ಲಿನ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ 2019ರಲ್ಲೇ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಈವರೆಗೂ ಸರ್ಕಾರ ಸಮೀಕ್ಷಾ ವರದಿ ಸಲ್ಲಿಸಿಲ್ಲ. ಈಗಲೂ ಸರ್ಕಾರ ನಡೆಸುತ್ತಿರುವ ಹಾಸ್ಟೆಲ್‌ಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯ ಸಮಸ್ಯೆ ಇದೆ ಎಂದು ಪೀಠದ ಗಮನಕ್ಕೆ ತಂದರು.
ಸರ್ಕಾರದ ಪರ ವಕೀಲ ರಾಜಶೇಖರ್ ಅವರು ಸಮೀಕ್ಷೆ ವರದಿ ಸಲ್ಲಿಸಲು ನಾಲ್ಕು ವಾರಗಳ ಕಾಲವಕಾಶ ನೀಡುವಂತೆ ಮನವಿ ಮಾಡಿದರು. ಅದನ್ನು ಪರಿಗಣಿಸಿದ ಪೀಠ, ಇದೇ ಅಂತಿಮ ಅವಕಾಶವಾಗಿದ್ದು, ಮತ್ತೊಮ್ಮೆ ಕಾಲಾವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿ, ವಿಚಾರಣೆಯನ್ನು ಮಾರ್ಚ್ 11ಕ್ಕೆ ಮುಂದೂಡಿತು.
ತುಮಕೂರು ತಾಲೂಕಿನ ಕರೀಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಧ್ವಜಸ್ತಂಭ ತೆರವುಗೊಳಿಸುವಾಗ ಸಂಭವಿಸಿದ ಅವಘಡದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮೃತ ವಿದ್ಯಾರ್ಥಿಯ ಪಾಲಕರಿಗೆ ಪರಿಹಾರ ವಿತರಿಸಿರುವ ಕುರಿತ ವಿವರ ಲಭ್ಯವಾಗಬೇಕಿದೆ. ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಈ ಕುರಿತು ಮಾಹಿತಿ ನೀಡಲಾಗುವುದು ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ಅದನ್ನು ದಾಖಲಿಸಿಕೊಂಡ ಪೀಠ, ಪರಿಹಾರ ವಿತರಿಸಿರುವ ಕುರಿತು ಮುಂದಿನ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರ ಪರ ವಕೀಲರಿಗೆ ನಿರ್ದೇಶಿಸಿತು.