Karnataka High Court 
ಸುದ್ದಿಗಳು

ಬೆಳಗಾವಿಯ ಲಸಿಕಾ ಸಂಗ್ರಹ ಕೇಂದ್ರದ ಅಭಿವೃದ್ಧಿ ಕಾಮಗಾರಿ ನಡೆಸಲು ಸರ್ಕಾರಕ್ಕೆ ಹೈಕೋರ್ಟ್‌ ಷರತ್ತು ಬದ್ಧ ಅನುಮತಿ

ಕೇಂದ್ರದ ಆವರಣದ ಸಸ್ಯ ಮತ್ತು ಪ್ರಾಣಿ ಸಂಕುಲದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ವಿವಿಧ ಜಾತಿಯ 93 ಸಾವಿರ ಗಿಡ ನೆಡಲಾಗುವುದು. ಕಾಮಗಾರಿ ವಿಳಂಬವಾದರೆ ಯೋಜನೆ ವೆಚ್ಚ ಹೆಚ್ಚಾಗುತ್ತದೆ ಎಂದು ಪೀಠಕ್ಕೆ ವಿವರಿಸಿದ ಸರ್ಕಾರ.

Bar & Bench

ಬೆಳಗಾವಿಯ ಐತಿಹಾಸಿಕ ಉದ್ಯಾನ ಲಸಿಕಾ ಸಂಗ್ರಹ ಕೇಂದ್ರದ (ವ್ಯಾಕ್ಸಿನ್‌ ಡಿಪೊ) ವ್ಯಾಪ್ತಿಯಲ್ಲಿ ರಂಗಮಂದಿರ, ವೈಮಾನಿಕ ಮ್ಯೂಸಿಯಂ ಹಾಗೂ ವಾಯು ವಿಹಾರ ಟ್ರ್ಯಾಕ್‌ ನಿರ್ಮಾಣ ಸೇರಿ ಇತರೆ ಅಭಿವೃದ್ಧಿ ಕಾಮಗಾರಿ ನಡೆಸಲು ರಾಜ್ಯ ಸರ್ಕಾರ ಮತ್ತು ಬೆಳಗಾವಿ ಮಹಾನಗರ ಪಾಲಿಕೆಗೆ ಕರ್ನಾಟಕ ಹೈಕೋರ್ಟ್ ಗುರುವಾರ ಷರತ್ತುಬದ್ಧ ಅನುಮತಿ ನೀಡಿದೆ.

ಬೆಳಗಾವಿ ಸ್ಮಾರ್ಟ್‌ ಸಿಟಿ ಯೋಜನೆಯ ಭಾಗವಾಗಿ ಲಸಿಕಾ ಸಂಗ್ರಹ ಕೇಂದ್ರ ಉದ್ಯಾನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಸರ್ಕಾರ, ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ರೂಪಿಸಿದ್ದ ಯೋಜನೆ ಪ್ರಶ್ನಿಸಿ ಕಿಶೋರ್ ಸಿಂಗ್ ಠಾಕೂರ್ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಯೋಜನೆ ಜಾರಿ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನಿರ್ದೇಶಿಸಿ 2021ರ ಜುಲೈ 5ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತಿದ್ದುಪಡಿ ಮಾಡಿದ್ದು, ಯಾವೊಂದು ಮರ ಕತ್ತರಿಸದೆ ಉದ್ದೇಶಿತ ಯೋಜನೆ ಅನುಸಾರ ಕಾಮಗಾರಿ ನಡೆಸಬಹುದು” ಎಂದು ಷರತ್ತುಬದ್ಧ ಅನುಮತಿ ನೀಡಿ ಪೀಠವು ಆದೇಶ ಮಾಡಿದೆ.

ಲಸಿಕಾ ಕೇಂದ್ರ ಒಟ್ಟು156 ಎಕರೆಯಲ್ಲಿ ಹರಡಿಕೊಂಡಿದ್ದು ಅದರಲ್ಲಿ 1.76 ಎಕರೆ ಜಾಗದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಕಾಮಗಾರಿಗಾಗಿ ಯಾವುದೇ ಮರ ಕತ್ತರಿಸುವುದು ಅಥವಾ ಸ್ಥಳಾಂತರಿಸುವುದು ಮಾಡುವುದಿಲ್ಲ. ಕೇಂದ್ರದ ಗುರುತು ಬದಲಿಸುವುದಿಲ್ಲ ಹಾಗೂ ನಿರ್ದಿಷ್ಟ ಜಾಗದಲ್ಲೇ ಕಾಮಗಾರಿ ನಡೆಸಲಾಗುವುದು. ಇದರಿಂದ ಡಿಪೊ ಆವರಣದ ಸಸ್ಯ ಮತ್ತು ಪ್ರಾಣಿ ಸಂಕುಲದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ವಿವಿಧ ಜಾತಿಯ 93 ಸಾವಿರ ಗಿಡ ನೆಡಲಾಗುವುದು. ಕಾಮಗಾರಿ ವಿಳಂಬವಾದರೆ ಯೋಜನೆ ವೆಚ್ಚ ಹೆಚ್ಚಾಗುತ್ತದೆ ಎಂಬ ಸರ್ಕಾರದ ವಾದವನ್ನು ಪರಿಗಣಿಸಿ ಕಾಮಗಾರಿಗೆ ಅನುಮತಿ ನೀಡಲಾಗುತ್ತಿದೆ ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.

ಉದ್ದೇಶಿತ ಯೋಜನೆ ಅನುಸಾರ ನಿರ್ಮಾಣ ಕಾಮಗಾರಿ ಮತ್ತು ಇತರೆ ಅಭಿವೃದ್ಧಿ ಕಾರ್ಯ ನಡೆಸಬಹುದಾಗಿದೆ. ಅದಕ್ಕೂ ಮುನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ಅನುಮತಿ ಅಥವಾ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಕಾಮಗಾರಿಯು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ. ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯದೆ ಕಾಮಗಾರಿಗೆ ಯಾವುದೇ ಮರ ಕತ್ತರಿಸಬಾರದು. ನ್ಯಾಯಾಲಯಕ್ಕೆ ನೀಡಿರುವ ಮುಚ್ಚಳಿಕೆಯಂತೆ ಗಿಡಗಳನ್ನು ನೆಟ್ಟು ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಪೀಠವು ನಿರ್ದೇಶಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪ್ರಹ್ಲಾದ್‌ ಕುಲಕರ್ಣಿ ಅವರು “ಯೋಜನೆ ಜಾರಿಗಾಗಿ ಲಸಿಕಾ ಕೇಂದ್ರ ಉದ್ಯಾನದಲ್ಲಿರುವ ಮರಗಳನ್ನು ಕತ್ತರಿಸಲಾಗುತ್ತದೆ. ಇದರಿಂದ ಡಿವೋವಿನ ಸಸ್ಯ ಮತ್ತು ಪ್ರಾಣಿ ಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬೆಳಗಾವಿ ಸ್ಮಾಟ್ ಸಿಟಿ ಯೋಜನೆ ಭಾಗವಾಗಿ ಕಾಮಗಾರಿ ನಡೆಸುತ್ತಿಲ್ಲ” ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು “ಡಿಪೊ ಆವರಣದಲ್ಲಿ ಯಾವುದೇ ಮರ ಕತ್ತರಿಸದೆ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು” ಎಂದರು. ಇದನ್ನು ಆಧರಿಸಿ ಪೀಠವು ಕಾಮಗಾರಿಗೆ ಅನುಮತಿಸಿತು.