[ಸಾಮೂಹಿಕ ಆತ್ಮಹತ್ಯೆ ಪ್ರಕರಣ] ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ಪಿಎಸ್‌ಐಗೆ ಇದೆ: ಕರ್ನಾಟಕ ಹೈಕೋರ್ಟ್‌

2021ರ ಸೆ.17ರಂದು ಮಾಗಡಿ ರಸ್ತೆಯ ತಿಗಳರಪಾಳ್ಯದ ಮನೆಯಲ್ಲಿ ಶಂಕರ್‌ ಪತ್ನಿ ಭಾರತಿ, ಪುತ್ರಿಯರಾದ ಸಿಂಚನಾ ಕುಮಾರಿ, ಸಿಂಧೂ ರಾಣಿ, ಪುತ್ರ ಮಧು ಸಾಗರ್‌ ಹಾಗೂ ಸಿಂಧೂ ಅವರ ಒಂಭತ್ತು ತಿಂಗಳ ಮಗು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.
[ಸಾಮೂಹಿಕ ಆತ್ಮಹತ್ಯೆ ಪ್ರಕರಣ] ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ಪಿಎಸ್‌ಐಗೆ ಇದೆ: ಕರ್ನಾಟಕ ಹೈಕೋರ್ಟ್‌
Karnataka High Court

ಪ್ರಕರಣದ ತನಿಖೆಯನ್ನು ನಡೆಸಿ ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗೆ (ಪಿಎಸ್‌ಐ) ಇದೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಸ್ಪಷ್ಟಪಡಿಸಿದ್ದು, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಟ್ಯಾಬ್ಲಾಯ್ಡ್‌ ಒಂದರ ಸಂಪಾದಕ ಹಲ್ಲಗೆರೆ ಶಂಕರ್‌ ಅವರ ಇಬ್ಬರು ಅಳಿಯಂದಿರು ಸಲ್ಲಿಸಿದ್ದ ಜಾಮೀನು ಮನವಿಯನ್ನು ತಿರಸ್ಕರಿಸಿದೆ (ಇ ಎಸ್‌ ಪ್ರಸನ್ನ ಕುಮಾರ್‌ ಮತ್ತು ಇತರರು ವರ್ಸಸ್‌ ಕರ್ನಾಟಕ ರಾಜ್ಯ ಮತ್ತು ಇತರರು).

ಹಲ್ಲಗೆರೆ ಶಂಕರ್‌ ಅಳಿಯ ಇ ಎಸ್‌ ಪ್ರವೀಣ್‌ ಕುಮಾರ್‌ ಹಾಗೂ ಈಡಿಗ ಶ್ರೀಕಾಂತ್‌ ಅವರು ಸಲ್ಲಿಸಿದ್ದ ಜಾಮೀನು ಮನವಿಗಳು ಹಾಗೂ ಬ್ಯಾಡರಹಳ್ಳಿ ಠಾಣೆಯ ಪಿಎಸ್‌ಐ ಆರೋಪ ಪಟ್ಟಿ ಸಲ್ಲಿಸಿರುವುದಕ್ಕೆ ಆಕ್ಷೇಪಿಸಿ ಪ್ರವೀಣ್‌ ಕುಮಾರ್‌ ಪ್ರತ್ಯೇಕವಾಗಿ ಸಲ್ಲಿಸಿದ್ದ ರಿಟ್‌ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಸಕದಸ್ಯ ಪೀಠವು ನಡೆಸಿತು.

“ಆರೋಪ ಪಟ್ಟಿ ಸಲ್ಲಿಸಲು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಸಮರ್ಥರಲ್ಲ ಎಂಬ ಅರ್ಜಿದಾರರ ವಕೀಲರ ವಾದಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಅಲ್ಲದೇ, ಪಿಎಸ್‌ಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಯಾವುದೇ ಲೋಪವಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ದದ ಕ್ರಿಮಿನಲ್‌ ಪ್ರಕ್ರಿಯೆಯನ್ನು ವಜಾ ಮಾಡಲಾಗದು. ಇದೇ ಆಧಾರದಲ್ಲಿ ಆರೋಪಿಗಳು ಜಾಮೀನಿಗೆ ಅರ್ಹವಾಗಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಪೊಲೀಸ್‌ ಮಾರ್ಗಸೂಚಿಯಲ್ಲಿ ಪಿಎಸ್‌ಐಗೂ ಅಧಿಕಾರವಿದ್ದು, ಆರೋಪ ಪಟ್ಟಿ ಸಲ್ಲಿಸಲು ಪಿಎಸ್‌ಐ ಸಹ ಠಾಣೆಯ ಉಸ್ತುವಾರಿಯಾಗಿದ್ದಾರೆ. ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರೇ ದೂರು ದಾಖಲಿಸಿದ್ದು, ಪಿಎಸ್‌ಐ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಎಂದು ಉಲ್ಲೇಖಿಸಲಾಗಿದೆ. ಎಫ್‌ಐಆರ್‌ ದಾಖಲಿಸಿರುವ ಪಿಎಸ್‌ಐ ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಹೀಗಾಗಿ, ಆರೋಪ ಪಟ್ಟಿ ಸಲ್ಲಿಸಲು ಪಿಎಸ್‌ಐಗೆ ಅಧಿಕಾರವಿಲ್ಲ ಅಥವಾ ಅದು ಕಾನೂನುಬಾಹಿರ ಎನ್ನಲಾಗದು ಎಂದು ನ್ಯಾಯಾಲಯ ಹೇಳಿದೆ.

ಪಿಎಸ್‌ಐ ಆರೋಪ ಪಟ್ಟಿ ಸಲ್ಲಿಸಿದ್ದಕ್ಕೆ ಆಕ್ಷೇಪಿಸಿದ್ದ ರಿಟ್‌ ಮನವಿಯಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಸ್ಮತ್‌ ಪಾಷಾ ಅವರು ಪೊಲೀಸ್‌ ಇನ್‌ಸ್ಪೆಕ್ಟರ್‌ ಸಹೋದ್ಯೋಗಿಯಾದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಆರೋಪ ಪಟ್ಟಿ ಸಲ್ಲಿಸುವ ಅಧಿಕಾರವಿಲ್ಲ. ಪಿಎಸ್‌ಐ ಪ್ರಕರಣದ ತನಿಖೆ ನಡೆಸಬಹುದಾಗಿದ್ದು, ಠಾಣೆಯ ಅಧಿಕಾರಿಯಾಗಿರುವವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ವಾದಿಸಿದ್ದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ವಿ ಎಸ್‌ ಹೆಗ್ಡೆ ಮತ್ತು ಹೈಕೋರ್ಟ್‌ನಲ್ಲಿ ಸರ್ಕಾರದ ವಕೀಲರಾಗಿರುವ ವಿನಾಯಕ್‌ ವಿ ಎಸ್‌ ಅವರು ಪಿಎಸ್‌ಐ ಅಥವಾ ಇನ್‌ಸ್ಪೆಕ್ಟರ್‌ ಇಬ್ಬರೂ ಠಾಣೆಯ ಉಸ್ತುವಾರಿಗಳಾಗಿದ್ದು, ಠಾಣಾಧಿಕಾರಿ ಮತ್ತು ಠಾಣೆಯ ಉಸ್ತುವಾರಿ ಈ ಎರಡೂ ಒಂದೇ ಅಥವಾ ಅನ್ವರ್ಥವಾಗಿರಬಹುದು. ಆದರೆ, ಐಪಿಸಿ 306 ಅಪರಾಧದಲ್ಲಿ ಇದು ಬೇರೆಯಾಗಬಹುದು. ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಅವರು ಪ್ರಕರಣದ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ಹೊಂದಿದ್ದಾರೆ ಎಂದಿದ್ದರು.

ಜಾಮೀನು ಮನವಿ ತಿರಸ್ಕಾರ: ಸಂತ್ರಸ್ತರಿಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂಬುದನ್ನು ಮರಣ ಪತ್ರ ಸ್ಪಷ್ಟಪಡಿಸಿದೆ. ಈ ಸಂದರ್ಭದಲ್ಲಿ ಮರಣ ಪತ್ರವನ್ನು ನಂಬದೇ ಇರಲು ಯಾವುದೇ ಸಕಾರಣವಿಲ್ಲ. ಮಗು ಸೇರಿದಂತೆ ತಾಯಿ ಹಾಗೂ ಮೂವರು ಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಈ ಪ್ರಕರಣವನ್ನು ಸಾಮಾನ್ಯ ಆತ್ಮಹತ್ಯೆ ಎಂದು ಪರಿಗಣಿಸಲಾಗದು. ಸಂತ್ರಸ್ತರು ಮರಣ ಪತ್ರದಲ್ಲಿ ತಮ್ಮ ಸಾವಿಗೆ ನ್ಯಾಯ ಕೋರಿರುವ ವಿಚಾರ ಸಾರ್ವಜನಿಕರ ಗಮನಸೆಳೆದಿದೆ ಎಂದು ಹೇಳಿರುವ ನ್ಯಾಯಾಲಯವು ಜಾಮೀನು ಮನವಿಗಳನ್ನು ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: 2021ರ ಸೆಪ್ಟೆಂಬರ್‌ 17ರಂದು ಬೆಂಗಳೂರಿನ ಮಾಗಡಿ ರಸ್ತೆಯ ತಿಗಳರಪಾಳ್ಯದ ಮನೆಯಲ್ಲಿ ಹಲ್ಲಗೆರೆ ಶಂಕರ್‌ ಪತ್ನಿ ಭಾರತಿ, ಪುತ್ರಿಯರಾದ ಸಿಂಚನಾ ಕುಮಾರಿ ಮತ್ತು ಸಿಂಧೂ ರಾಣಿ, ಪುತ್ರ ಮಧು ಸಾಗರ್‌ ಹಾಗೂ ಸಿಂಧೂ ರಾಣಿ ಅವರ ಒಂಭತ್ತು ತಿಂಗಳ ಮಗು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಸಾರ್ವಜನಿಕ ವಲಯದಲ್ಲಿ ತಲ್ಲಣ ಮೂಡಿಸಿತ್ತು.

ಮರಣ ಪತ್ರದಲ್ಲಿ ಪುತ್ರ ಮಧು ಸಾಗರ್‌ ಅವರು ತಂದೆ ಶಂಕರ್‌ ನಡವಳಿಕೆಗಳನ್ನು ಉಲ್ಲೇಖಿಸಿದ್ದರೆ, ಪುತ್ರಿಯರು ಬರೆದಿದ್ದ ಮರಣ ಪತ್ರದಲ್ಲಿ ಗಂಡಂದಿರಾದ ಪ್ರವೀಣ್‌ ಕುಮಾರ್‌ ಹಾಗೂ ಶ್ರೀಕಾಂತ್‌ ಅವರ ಮನೆಯಲ್ಲಿ ಅನುಭವಿಸಿದ್ದ ಯಾತನೆ ಮತ್ತು ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಮೊದಲಿಗೆ ಘಟನೆಯನ್ನು ಶಂಕರ್‌ ಅವರು ಬ್ಯಾಡರಹಳ್ಳಿ ಪೊಲೀಸರ ಗಮನಕ್ಕೆ ತಂದಿದ್ದರು. ಬಳಿಕ ಪೊಲೀಸರು ತನಿಖೆ ನಡೆಸಿ ಶಂಕರ್‌, ಪ್ರವೀಣ್‌ ಮತ್ತು ಶ್ರೀಕಾಂತ್‌ ಅವರನ್ನು ಬಂಧಿಸಿ ಕ್ರಮವಾಗಿ ಮೊದಲ ಮೂರು ಆರೋಪಿಗಳನ್ನಾಗಿಸಿದ್ದಾರೆ.

Attachment
PDF
E S Prasanna Kumar and others V. State of Karnataka.pdf
Preview

Related Stories

No stories found.
Kannada Bar & Bench
kannada.barandbench.com