Karnataka HC and election 
ಸುದ್ದಿಗಳು

ಜಿ.ಪಂ–ತಾ.ಪಂ ಚುನಾವಣೆ: ಕ್ಷೇತ್ರ ಮರುವಿಂಗಡಣೆಗೆ ಸರ್ಕಾರಕ್ಕೆ ಕೊನೆ ಬಾರಿಗೆ ತಿಂಗಳ ಕಾಲಾವಕಾಶ ನೀಡಿದ ಹೈಕೋರ್ಟ್‌

“2021ರಿಂದ ಅರ್ಜಿ ಬಾಕಿ ಇದೆ. ಇವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳು, ಇದಕ್ಕೆ ನೀವು ಚುನಾವಣೆ ನಡೆಸಲು ಇಚ್ಛಿಸುವುದಿಲ್ಲವೇ? ಸರ್ವೋಚ್ಚ ನ್ಯಾಯಾಲಯವು ಎರಡು ಬಾರಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ” ಎಂದು ನೆನಪಿಸಿದ ನ್ಯಾಯಾಲಯ.

Bar & Bench

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಾಗಿ ಕ್ಷೇತ್ರಗಳ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಿ ಅಧಿಸೂಚನೆ ಹೊರಡಿಸಲು ಕೊನೆಯ ಬಾರಿಗೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಒಂದು ತಿಂಗಳ ಕಾಲಾವಕಾಶ ನೀಡಿದೆ.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ‘ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆ’ಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ, ಹೆಚ್ಚಿನ ಕಾಲಾವಕಾಶದ ಅಗತ್ಯವಿದೆ” ಎಂದು ಪೀಠಕ್ಕೆ ಕೋರಿದರು.

ಇದಕ್ಕೆ ಮುಖ್ಯ ನ್ಯಾಯಮೂರ್ತಿ ವರಾಳೆ ಅವರು "ನಾಲ್ಕು ವಾರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ. ಈ ಅರ್ಜಿ ಬಹುಕಾಲದಿಂದ ಬಾಕಿ ಉಳಿದಿದೆ. ನಿಮಗೆ ಹೆಚ್ಚಿನ ಸಮಯಬೇಕಾಗಬಹುದು. ಆದರೆ, ಆದಷ್ಟು ಬೇಗ ಮಾಡಿ" ಎಂದರು.

ರಾಜ್ಯ ಚುನಾವಣಾ ಆಯೋಗ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “2021ರಿಂದ ಸರ್ಕಾರ ಒಂದಲ್ಲಾ ಒಂದು ಕಾರಣದಿಂದ ಅರ್ಜಿ ವಿಚಾರಣೆಯ ಮುಂದೂಡಿಕೆ ಕೋರುತ್ತಲೇ ಬಂದಿದೆ” ಎಂದರು.

ಅಂತಿಮವಾಗಿ ಪೀಠವು “ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆಯನ್ನು ಮತ್ತೆ ಮಾಡಲಾಗುತ್ತಿದೆ. ಇದಕ್ಕೆ ಸಮಯಬೇಕಾಗಿದೆ. ಇದಕ್ಕಾಗಿ ವಿಚಾರಣೆ ಮುಂದೂಡಿಕೆ ಮಾಡಬೇಕು ಎಂದು ಅಡ್ವೊಕೇಟ್‌ ಜನರಲ್‌ ಕೋರಿದ್ದಾರೆ. ಈ ಹಿಂದೆ 11 ವಾರ ಸಮಯ ನೀಡಲಾಗಿತ್ತು. ಈಗ ಅದೇ ಪ್ರಕ್ರಿಯೆ ಮುಂದುವರಿದಿದ್ದು, ಎಜಿ ಮತ್ತೆ ಸಮಯ ಕೇಳಿದ್ದಾರೆ. ಮತ್ತೆ ನಾಲ್ಕು ವಾರಗಳನ್ನು ಕೊನೆಯ ಬಾರಿಗೆ ನೀಡಲಾಗಿದೆ” ಎಂದು ಆದೇಶದಲ್ಲಿ ದಾಖಲಿಸಿತು.

ಇದಕ್ಕೆ ಅಡ್ವೊಕೇಟ್‌ ಜನರಲ್‌ ಅವರು “ಆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ” ಎಂದರು.

ಇದಕ್ಕೆ ಪೀಠವು “ನೀವು ಮಾಡಲೇಬೇಕು. ಪ್ರಯತ್ನಿಸುತ್ತೇವೆ ಎಂಬ ಪ್ರಶ್ನೆ ಬರುವುದೇ ಇಲ್ಲ. 2021ರಿಂದ ಅರ್ಜಿ ಬಾಕಿ ಇದೆ. ಇವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳು, ಇದಕ್ಕೆ ನೀವು ಚುನಾವಣೆ ನಡೆಸಲು ಇಚ್ಛಿಸುವುದಿಲ್ಲವೇ? ಸರ್ವೋಚ್ಚ ನ್ಯಾಯಾಲಯವು ಎರಡು ಬಾರಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ” ಎಂದು ನೆನೆಪಿಸಿತು.

ಅಂತಿಮವಾಗಿ ಪೀಠವು ಅರ್ಜಿಯ ವಿಚಾರಣೆಯನ್ನು ಡಿಸೆಂಬರ್‌ 19ಕ್ಕೆ ಮುಂದೂಡಿತು.