Gauri Lankesh and Karnataka High Court 
ಸುದ್ದಿಗಳು

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಭರತ್‌ ಕುರಾನೆ, ಸುಧನ್ವ ಗೊಂಧಾಲೇಕರ್‌, ಸುಜಿತ್‌ ಕುಮಾರ್‌ ಮತ್ತು ಶ್ರೀಕಾಂತ್‌ ಪಂಗಾರ್ಕರ್‌ ಅವರಿಗೆ ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರು ಜಾಮೀನು ಮಂಜೂರು ಮಾಡಿದ್ದಾರೆ.

Bar & Bench

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದಲ್ಲಿ ಮತ್ತೆ ನಾಲ್ವರು ಆರೋಪಿಗಳಿಗೆ ಈಚೆಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಇದರೊಂದಿಗೆ 18 ಆರೋಪಿಗಳ ಪೈಕಿ 8 ಮಂದಿಗೆ ನ್ಯಾಯಾಲಯವು ಜಾಮೀನು ನೀಡಿದಂತಾಗಿದೆ.

ಪ್ರಕರಣದಲ್ಲಿ 6ನೇ ಆರೋಪಿಯಾಗಿರುವ ಬೆಳಗಾವಿಯ ಭರತ್‌ ಜಯವಂತ್‌ ಕುರಾನೆ ಅಲಿಯಾಸ್‌ ಬರತ್‌ ಕುರಾನೆ ಅಲಿಯಾಸ್‌ ಅಂಕಲ್‌ ಅಲಿಯಾಸ್‌ ಟೊಮೊಟರ್; 9ನೇ ಆರೋಪಿ ಮಹಾರಾಷ್ಟ್ರದ ಸತಾರದ ಸುಧನ್ವ ಗೊಂಧಾಲೇಕರ್‌ ಅಲಿಯಾಸ್ ಪಂದೇಜಿ ಅಲಿಯಾಸ್‌ ಪಂಡೆ ಅಲಿಯಾಸ್‌ ಗುಜ್ಜಾರ್‌ ಅಲಿಯಾಸ್‌ ಮಹೇಶ್‌ ಪಾಟೀಲ್‌; 13ನೇ ಆರೋಪಿ ಶಿವಮೊಗ್ಗದ ಶಿಕಾರಿಪುರದ ಸುಜಿತ್‌ ಕುಮಾರ್‌ ಅಲಿಯಾಸ್‌ ಸುಜಿತ್‌ ಎಸ್‌ ಆರ್‌ ಅಲಿಯಾಸ್‌ ಸಂಜಯ್‌ ಅಲಿಯಾಸ್‌ ಪ್ರವೀಣ್‌ ಅಲಿಯಾಸ್‌ ಮಂಜುನಾಥ್‌ ಅಲಿಯಾಸ್‌ ಗೋವಿನಾಥ್‌; ಮಹಾರಾಷ್ಟ್ರದ ಔರಂಗಾಬಾದ್‌ನ 16ನೇ ಆರೋಪಿ ಮಹಾರಾಷ್ಟ್ರದ ಔರಂಗಾಬಾದ್‌ನ ಶ್ರೀಕಾಂತ್‌ ಪಂಗಾರ್ಕರ್‌ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice S Vishwajith Shetty and Karnataka High Court

ಎಲ್ಲಾ ಆರೋಪಿಗಳು ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ವಿಚಾರಣಾಧೀನ ನ್ಯಾಯಾಲಯ ವಿನಾಯಿತಿ ನೀಡದ ಹೊರತು ವಿಚಾರಣೆಯ ಎಲ್ಲಾ ದಿನ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕು. ಅರ್ಜಿದಾರರು ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂಥದ್ದೇ ಆರೋಪದಲ್ಲಿ ಭಾಗಿಯಾಗುವಂತಿಲ್ಲ. ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾಲಯ ಅನುಮತಿಸದ ಹೊರತು ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದ ವ್ಯಾಪ್ತಿ ತೊರೆಯುವಂತಿಲ್ಲ. ಈ ಪೈಕಿ ಯಾವುದೇ ಷರತ್ತು ಉಲ್ಲಂಘಿಸಿದರೂ ಪ್ರಾಸಿಕ್ಯೂಷನ್‌ ಜಾಮೀನು ರದ್ದತಿಗೆ ಕೋರಬಹುದು ಎಂದು ನ್ಯಾಯಾಲಯ ಹೇಳಿದೆ.

ಗೌರಿ ಲಂಕೇಶ್‌ ಕೊಲೆಯಾದ ಅರ್ಜಿದಾರರು ಸ್ಥಳದಲ್ಲಿರಲಿಲ್ಲ. ಎರಡನೇ ಆರೋಪಿ ಪರಶುರಾಮ್‌ ವಾಘ್ಮೋರೆ ಮತ್ತು 3ನೇ ಆರೋಪಿ ಗಣೇಶ್‌ ಮಿಸ್ಕಿನ್‌ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ಉಳಿದವರ ಜೊತೆ ಸೇರಿ ಕೊಲೆಗೆ ವಾಹನ, ಶಸ್ತ್ರಾಸ್ತ್ರ ಪೂರೈಕೆ ಇತ್ಯಾದಿ ಮೂಲಕ ಪಿತೂರಿ ನಡೆಸಿರುವ ಆರೋಪ ಅರ್ಜಿದಾರರ ವಿರುದ್ಧವಿದೆ. ಇದೇ ಆರೋಪ ಈಚೆಗೆ ಜಾಮೀನು ಪಡೆದಿದ್ದ ಅಮಿತ್‌ ದಿಗ್ವೇಕರ್‌ (5ನೇ ಆರೋಪಿ), ಎಚ್‌ ಎಲ್‌ ಸುರೇಶ್‌ (7ನೇ ಆರೋಪಿ), ಎನ್‌ ಮೋಹನ್‌ ನಾಯಕ್‌ (11ನೇ ಆರೋಪಿ) ಮತ್ತು ಕೆ ಟಿ ನವೀನ್‌ ಕುಮಾರ್‌ (17ನೇ ಆರೋಪಿ) ಅವರ ವಿರುದ್ಧವಿತ್ತು. ಮೋಹನ್‌ ನಾಯಕ್‌ಗೆ ಮೊದಲಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಸಹ ಎತ್ತಿ ಹಿಡಿದಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ಅರ್ಜಿದಾರರ ವಿರುದ್ಧದ ಆರೋಪವೇನು?

6ನೇ ಆರೋಪಿ ಭರತ್‌ ವಿರುದ್ಧ ಪರಶುರಾಮ್‌ ವಾಘ್ಮೋರೆ ಮತ್ತು ಗಣೇಶ್‌ ಮಿಸ್ಕಿನ್‌ಗೆ ವ್ಯವಸ್ಥೆ ಮಾಡಿದ ಆರೋಪವಿದೆ. ಆರೋಪಿಗಳಿಗೆ ಸುಧನ್ವ ವಾಹನ ವ್ಯವಸ್ಥೆ ಮಾಡಿದ್ದು, ಶಸ್ತ್ರಾಸ್ತ್ರ ಪೂರೈಕೆಗೆ ನೆರವಾಗಿದ್ದನು ಎಂದು ಆರೋಪಿಸಲಾಗಿದೆ. ಆರೋಪಿ ಶ್ರೀಕಾಂತ್‌ ಪಂಗಾರ್ಕರ್‌ ಎಂಬಾತ ತರಬೇತಿ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದು, 10ನೇ ಆರೋಪಿ ಶರದ್‌ ಕಲಸ್ಕರ್‌ ಅಲಿಯಾಸ್‌ ಚೋಟುಗೆ ಶಸ್ತ್ರಾಸ್ತ್ರ ತಲುಪಿಸಿದ್ದ ಆರೋಪವಿದೆ. 1ನೇ ಆರೋಪಿ ಅಮೋಲ್‌ ಕಾಳೆ ಮತ್ತು 14ನೇ ಆರೋಪಿ ಮನೋಜ್‌ ಜೊತೆಗೆ ಸೇರಿ ಬೆಳಗಾವಿಯ ಸ್ವೀಕಾರ್‌ ಹೋಟೆಲ್‌ನಲ್ಲಿ ಪಿತೂರಿ, ಮನೋಹರ್‌ ಜೊತೆಗೆ ಆದಿಚುಂಚನಗಿರಿ ಮಠದ ಪಾರ್ಕ್‌ ಸಮೀಪ ಪಿತೂರಿ ಹಾಗೂ ಸುಜಿತ್‌ ಕಸ್ಟಡಿಯಲ್ಲಿದ್ದಾಗ ದಾವಣಗೆರೆಯ ಆತನ ಅಜ್ಜಿಯ ಮನೆಯಲ್ಲಿ ಎರಡು ಜೀವಂತ ಬುಲೆಟ್‌ ವಶಕ್ಕೆ ಪಡೆಯಲಾಗಿತ್ತು. 12ನೇ ಆರೋಪಿ ವಾಸುದೇವ್‌ ಭಗವಾನ್‌ ಸೂರ್ಯವಂಶಿ ಜೊತೆಗೂಡಿ ದಾವಣಗೆರೆಯಲ್ಲಿ ಹೀರೊ ಹೋಂಡಾ ಪ್ಯಾಷನ್‌ ಪ್ರೊ ಬೈಕ್‌ ಕದ್ದ ಆರೋಪ ಸುಜಿತ್‌ ಮೇಲಿದೆ.

ಭರತ್‌ ಪರವಾಗಿ ವಕೀಲ ಅಮರ್‌ ಕೊರಿಯಾ ವಾದಿಸಿದರೆ, ಇನ್ನಿತರ ಮೂವರು ಆರೋಪಿಗಳ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌ ವಾದಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜನ ಅಶೋಕ್‌ ಎನ್. ನಾಯಕ್‌ ವಾದಿಸಿದ್ದರು.

Bharat Jayawat Kurane & others Vs State of Karnataka.pdf
Preview