ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಮೋಹನ್ ನಾಯಕ್ ಜಾಮೀನು ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಪ್ರಕರಣದ ವಿಚಾರಣೆ ಶೀಘ್ರದಲ್ಲಿ ಮುಗಿಯುವ ಸಾಧ್ಯತೆ ಇಲ್ಲ ಎಂದು 2023ರ ಡಿಸೆಂಬರ್‌ನಲ್ಲಿ ತಿಳಿಸಿದ್ದ ಕರ್ನಾಟಕ ಹೈಕೋರ್ಟ್ ನಾಯಕ್‌ಗೆ ಜಾಮೀನು ನೀಡಿತ್ತು.
Gauri Lankesh, Supreme Court
Gauri Lankesh, Supreme Court
Published on

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ ಆರೋಪಕ್ಕೆ ಗುರಿಯಾಗಿದ್ದ ಎನ್‌ ಮೋಹನ್‌ ನಾಯಕ್‌ಗೆ ನೀಡಿದ್ದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್‌ ಆಗಸ್ಟ್ 20ರಂದು ನಿರಾಕರಿಸಿದೆ ಕವಿತಾ ಲಂಕೇಶ್ ಮತ್ತು ಕರ್ನಾಟಕ  ಸರ್ಕಾರ ಇನ್ನಿತರರ ನಡುವಣ ಪ್ರಕರಣ ]

ಆರೋಪಿಗಳು ವಿಚಾರಣೆಗೆ ಸಹಕರಿಸುತ್ತಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಈ ಸಂಬಂಧ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಎತ್ತಿಹಿಡಿದಿದೆ.

Also Read
[ಗೌರಿ ಹತ್ಯೆ ಪ್ರಕರಣ] ಮೋಹನ್‌ ನಾಯಕ್‌ಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು; ಪ್ರಕರಣದಲ್ಲಿ ಜಾಮೀನು ಪಡೆದ ಮೊದಲ ಆರೋಪಿ

ಪ್ರತಿವಾದಿ ಮೋಹನ್‌ ನಾಯಕ್‌ ವಿಚಾರಣೆ ಮುಂದುವರೆಯಲು ವಿಚಾರಣಾ ನ್ಯಾಯಾಲಯದೊಂದಿಗೆ ಸಹಕರಿಸುತ್ತಿದ್ದಾರೆ. ಅವರು ಪ್ರಕರಣ ಮುಂದೂಡುವಂತೆ ಎಲ್ಲೂ ಕೋರಿಲ್ಲ. ಅಲ್ಲದೆ, ಅವರು 18-7-2018 ರಿಂದ ಬಂಧನದಲ್ಲಿದ್ದು ಕರ್ನಾಟಕ ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸಲು ತಾನು ಇಚ್ಛಿಸುವುದಿಲ್ಲ ಎಂದು ತನ್ನ ಅದೇಶದಲ್ಲಿ ಹೇಳಿದ ಸುಪ್ರೀಂ ಕೋರ್ಟ್‌ ವಿಶೇಷ ಅನುಮತಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

ವಿಚಾರಣೆಗೆ ಸಾಕಷ್ಟು ಸಮಯ ಹಿಡಿಯಬಹುದು ಎಂಬ ಕಾರಣಕ್ಜೆ ಕರ್ನಾಟಕ ಹೈಕೋರ್ಟ್ 2023ರ ಡಿಸೆಂಬರ್‌ನಲ್ಲಿ ನಾಯಕ್‌ಗೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಗೌರಿ ಅವರ ಸಹೋದರಿ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಮಂಗಳವಾರ ನೀಡಿರವು ಆದೇಶದಲ್ಲಿ ರಾಜ್ಯ ಸರ್ಕಾರದ ಮೇಲ್ಮನವಿಯನ್ನೂ ವಜಾಗೊಳಿಸಲಾಗಿದೆ.

ಸುಮಾರು 100 ಸಾಕ್ಷಿಗಳ ವಿಚಾರಣೆ ಬಾಕಿ ಇದೆ ಎಂದು ಕರ್ನಾಟಕ ಸರ್ಕಾರದ ಪರ ವಕೀಲರು ತಿಳಿಸಿದ್ದರು.  ಮೇಲ್ಮನವಿಗಳನ್ನು ಪರಿಗಣಿಸಲು ನಿರಾಕರಿಸಿದ ಪೀಠ ಆರೋಪಿಯು ಯಾವುದೇ ಜಾಮೀನು ಷರತ್ತು ಉಲ್ಲಂಘಿಸಿದ್ದರೆ ಅಥವಾ ವಿಚಾರಣೆ ವಿಳಂಬಗೊಳಿಸಿದ್ದರೆ ಮಾತ್ರ ಜಾಮೀನು ರದ್ದುಗೊಳಿಸುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಕಕ್ಷಿದಾರರಿಗೆ ಸ್ವಾತಂತ್ರ್ಯವಿದೆ ಎಂದಿತು.

2017ರ ಸೆಪ್ಟೆಂಬರ್‌ 5ರಂದು ಗೌರಿ ಲಂಕೇಶ್‌ ಅವರನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು.

ಡಿಸೆಂಬರ್ 7, 2023 ರಂದು, ಕರ್ನಾಟಕ ಹೈಕೋರ್ಟ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಮೋಹನ್ ನಾಯಕ್‌ಗೆ ಜಾಮೀನು ನೀಡಿತ್ತು. ಪ್ರಕರಣದಲ್ಲಿ ಜಾಮೀನು ದೊರೆತ ಮೊದಲ ಆರೋಪಿ ಮೋಹನ್‌ ಆಗಿದ್ದರು.

ಈ ವರ್ಷ ಜುಲೈನಲ್ಲಿ ಪ್ರಕರಣದಲ್ಲಿ ಆರೋಪಿಗಳಾದ ಅಮಿತ್‌ ದಿಗ್ವೇಕರ್‌, ಕೆ ಟಿ ನವೀನ್‌ ಕುಮಾರ್ ಹಾಗೂ ಎಚ್ ಎಲ್‌ ಸುರೇಶ್‌ ಅವರಿಗೆ ಜಾಮೀನು ದೊರೆತಿತ್ತು.

Also Read
ಗೌರಿ ಹತ್ಯೆ ಪ್ರಕರಣ: ಜಾಮೀನು ಕೋರಿ ವಿಶೇಷ ನ್ಯಾಯಾಲಯದ ಕದತಟ್ಟಿದ 11ನೇ ಆರೋಪಿ ಮೋಹನ್‌ ನಾಯಕ್

ಕವಿತಾ ಲಂಕೇಶ್ ಪರ ವಕೀಲರಾದ ರೋಹನ್ ಶರ್ಮಾ, ಕರಿಷ್ಮಾ ಮಾರಿಯಾ, ಪೂಜಾ ಬಿ ಮೆಹ್ತಾ, ಯಶ್ ಎಸ್ ವಿಜಯ್ ಮತ್ತು ರಶ್ಮಿ ಸಿಂಗ್ ಅವರೊಂದಿಗೆ ಹಿರಿಯ ವಕೀಲರಾದ ಹುಝೆಫಾ ಅಹ್ಮದಿ ಮತ್ತು ಅಪರ್ಣಾ ಭಟ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.

ಕರ್ನಾಟಕ ಸರ್ಕಾರವನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆವಿಷ್ಕರ್ ಸಿಂಘ್ವಿ ಮತ್ತು ವಕೀಲ ವಿಎನ್ ರಘುಪತಿ, ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಪ್ರತಿನಿಧಿಸಿದ್ದರು.

ಮೋಹನ್ ನಾಯಕ್ ಪರ ವಕೀಲರಾದ ಗೌತಮ್ ಎಸ್ ಭಾರದ್ವಾಜ್, ಅಶ್ವಿನ್ ಕುಮಾರ್ ಡಿಎಸ್, ಸುರ್ಭಿ ಮೆಹ್ತಾ ಮತ್ತು ಇಶಾನ್ ರಾಯ್ ಚೌಧರಿ ವಕಾಲತ್ತು ವಹಿಸಿದ್ದರು.

Kannada Bar & Bench
kannada.barandbench.com