ಸುದ್ದಿಗಳು

ಪರಿಶಿಷ್ಟ ಜಾತಿಗಳ ವರ್ಗೀಕರಣ, ಒಳ ಮೀಸಲಾತಿ ಸಂಬಂಧಿತ ಸಂಪುಟದ ನಿರ್ಣಯ ಪ್ರಶ್ನೆ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಸಚಿವ ಸಂಪುಟದ ನಿರ್ಣಯ ಪ್ರಶ್ನಿಸಿ ಜುಡೊ ಬಂಜಾರ ಫೌಂಡೇಷನ್ (ರಿ) ಇದರ ಪ್ರಧಾನ ಕಾರ್ಯದರ್ಶಿ ಖೇಮ್ ಸಿಂಗ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Bar & Bench

ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ವರ್ಗೀಕರಣ ಹಾಗೂ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್ ನಾಗಮೋಹನ್ ದಾಸ್ ಆಯೋಗದ ವರದಿ ಆಧರಿಸಿ 2025ರ ಆಗಸ್ಟ್ 19ರಂದು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿರುವ ನಿರ್ಣಯ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಇದೇ ವಿಚಾರವಾಗಿ ಸಲ್ಲಿಕೆಯಾಗಿರುವ ಮತ್ತೊಂದು ಅರ್ಜಿಯಲ್ಲಿ ‘ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಬಹುದು. ಆದರೆ, ಅಂತಿಮ ನೇಮಕಾತಿ ಆದೇಶಗಳ್ನು ನೀಡುವಂತಿಲ್ಲ‘ ಎಂದು 2025ರ ಅಕ್ಟೋಬರ್‌ 16ರಂದು ಹೊರಡಿಸಲಾಗಿರುವ ಮಧ್ಯಂತರ ತಡೆ ಆದೇಶವು ಈಗ ಸಲ್ಲಿಕೆಯಾಗಿರುವ ಅರ್ಜಿಗೂ ಅನ್ವಯವಾಗಲಿದೆ ಎಂದು ಪೀಠ ಹೇಳಿದೆ.

ಸಚಿವ ಸಂಪುಟದ ನಿರ್ಣಯ ಪ್ರಶ್ನಿಸಿ ಜುಡೊ ಬಂಜಾರ ಫೌಂಡೇಷನ್ (ರಿ) ಇದರ ಪ್ರಧಾನ ಕಾರ್ಯದರ್ಶಿ ಖೇಮ್ ಸಿಂಗ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಕೆ ಜಿ ರಾಘವನ್‌ ವಾದ ಆಲಿಸಿದ ಪೀಠವು ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪರಿಶಿಷ್ಟ ಜಾತಿಗಳ ಆಯೋಗ ಹಾಗೂ ಇತರರಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ ಮತ್ತೊಂದು ಅರ್ಜಿಯಲ್ಲಿ ಈ ಹಿಂದೆ ನೀಡಲಾಗಿರುವ ಮಧ್ಯಂತರ ತಡೆ ಆದೇಶವು, ಈಗಿನ ಅರ್ಜಿಗೂ ಅನ್ವವಾಗಲಿದೆ ಎಂದು ಹೇಳಿ ವಿಚಾರಣೆಯನ್ನು ಸೆಪ್ಟೆಂಬರ್‌ 1ಕ್ಕೆ ಮುಂದೂಡಿತು.

ಕೊರಮ, ಕೊರಚ, ಬಂಜಾರ ಸೇರಿ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣದಲ್ಲಿನ 63 ಜಾತಿಗಳ ಪೈಕಿ ಅತೀ ಹಿಂದುಳಿದ 59 ಜಾತಿಗಳಿಗೆ ಶೇ.20ರಷ್ಟು ಮೀಸಲಾತಿ ಹಾಗೂ ನಾಲ್ಕು ಜಾತಿಗಳಿಗೆ ಶೇ.80ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಇದು ಸಹಜ ನ್ಯಾಯದ ತತ್ವದ ವಿರುದ್ಧ ಹಾಗೂ ಸಂವಿಧಾನಬಾಹಿರವಾಗಲಿದೆ. ಅಷ್ಟಕ್ಕೂ, ಮೀಸಲಾತಿ ನಿಗದಿ, ಹೆಚ್ಚಳ, ಮೀಸಲಾತಿ ಪಟ್ಟಿಗೆ ಸೇರಿಸುವುದು ರಾಷ್ಟ್ರಪತಿಗೆ ಪ್ರದತ್ತವಾದ ಅಧಿಕಾರವಾಗಿದೆ. ರಾಜ್ಯ ಸರ್ಕಾರಕ್ಕೆ ಈ ಅಧಿಕಾರವಿಲ್ಲ. ಆದ್ದರಿಂದ, ಸಚಿವ ಸಂಪುಟದ ನಿರ್ಣಯ ಸೇರಿದಂತೆ ಅದರ ನಂತರ ಸರ್ಕಾರ ಹೊರಡಿಸಿರುವ ಅಧಿಸೂಚನೆಗಳನ್ನು ರದ್ದುಪಡಿಸಬೇಕು. 2022ರ ಡಿಸೆಂಬರ್‌ 28ರ ಮೊದಲು ಚಾಲ್ತಿಯಲ್ಲಿರುವ ನಿಮಯಗಳನ್ವಯ ನೇಮಕಾತಿ ಪ್ರಕ್ರಿಯೆ ನಡೆಸಲು ಸರ್ಕಾರಕ್ಕೆ ಸೂಚನೆ ಕೊಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.