ಪರಿಶಿಷ್ಟ ಜಾತಿಗಳ ವರ್ಗೀಕರಣ, ಒಳಮೀಸಲಾತಿ ಆದೇಶ ರದ್ದತಿಗೆ ಮನವಿ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಶೇ.17 ಮೀಸಲಾತಿಯಲ್ಲಿ ಎಡಗೈ-ಬಲಗೈ (ಗ್ರೂಪ್‌ ಎ & ಬಿ) ಸಮುದಾಯಗಳಿಗೆ ತಲಾ ಶೇ.6, ಕೊರಚ, ಕೊರಮ, ಭೋವಿ, ಲಂಬಾಣಿ ಹಾಗೂ ಅಲೆಮಾರಿ ಜಾತಿಗಳನ್ನೊಳಗೊಂಡ ಗುಂಪುಗಳಿಗೆ ಶೇ.5ರಷ್ಟು ಮೀಸಲಾತಿ ನಿಗದಿಪಡಿಸಿ ಸಮಾಜ ಕಲ್ಯಾಣ ಇಲಾಖೆ ಆದೇಶಿಸಿತ್ತು.
ಪರಿಶಿಷ್ಟ ಜಾತಿಗಳ ವರ್ಗೀಕರಣ, ಒಳಮೀಸಲಾತಿ ಆದೇಶ  ರದ್ದತಿಗೆ ಮನವಿ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌
Published on

ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ವರ್ಗೀಕರಣ ಹಾಗೂ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್ ಎನ್‌ ನಾಗಮೋಹನ್ ದಾಸ್ ಆಯೋಗದ ವರದಿ ಆಧರಿಸಿ 2025ರ ಆಗಸ್ಟ್ 28ರಂದು ಹೊರಡಿಸಲಾದ ಸರ್ಕಾರದ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.

ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಮುಖ್ಯಸ್ಥರಿಗೆ ನೋಟಿಸ್‌ ಜಾರಿ ಮಾಡಿತು. ಅಲ್ಲದೇ, ನ್ಯಾ. ನಾಗಮೋಹನ್‌ ದಾಸ್‌ ವರದಿ ಅನುಸಾರ ಹಂಚಿಕೆ ಮಾಡಲಾಗಿರುವ ಮೀಸಲಾತಿ ಅನ್ವಯ ಹೊಸ ನೇಮಕಾತಿ ಮಾಡುವುದಕ್ಕೆ ತಡೆ ನೀಡಲಾಗಿರುವ ಅರ್ಜಿ ಸೇರಿ ಇದೇ ವಿಚಾರವಾಗಿ ಸಲ್ಲಿಸಲಾಗಿರುವ ಇತರ ಅರ್ಜಿಗಳ ಜೊತೆಗೆ ಈಗಿನ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿತು.

Also Read
ಐವತ್ತನೇ ಮುದ್ರಣ ಕಂಡ ʼಸಂವಿಧಾನ ಓದುʼ ಕೃತಿ: ಲೇಖಕ ನ್ಯಾ. ನಾಗಮೋಹನ್ ದಾಸ್ ಅವರ ವಿಶೇಷ ಸಂದರ್ಶನ

ನ್ಯಾ. ನಾಗಮೋಹನದಾಸ್ ಆಯೋಗ ಸಲ್ಲಿರುವ ವರದಿಯಲ್ಲಿನ ಜಾತಿವಾರು ವರ್ಗೀಕರಣವನ್ನು ಪರಿಷ್ಕರಿಸಿ 101 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ಅಂದರೆ ಗ್ರೂಪ್‌ ಎ, ಗ್ರೂಪ್‌ ಬಿ ಮತ್ತು ಗ್ರೂಪ್‌ ಸಿ ಎಂದು ವರ್ಗೀಕರಿಸಿ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಪರಿಶಿಷ್ಟ ಜಾತಿಗೆ ಇರುವ ಒಟ್ಟು ಶೇ.17 ಮೀಸಲಾತಿಯಲ್ಲಿ ಎಡಗೈ-ಬಲಗೈ (ಗ್ರೂಪ್‌ ಎ ಮತ್ತು ಬಿ) ಸಮುದಾಯಗಳಿಗೆ ತಲಾ ಶೇ.6, ಕೊರಚ, ಕೊರಮ, ಭೋವಿ, ಲಂಬಾಣಿ ಹಾಗೂ ಅಲೆಮಾರಿ ಜಾತಿಗಳನ್ನೊಳಗೊಂಡ ಸ್ಪೃಶ್ಯ ಗುಂಪುಗಳಿಗೆ ಶೇ.5ರಷ್ಟು ಮೀಸಲಾತಿ ನಿಗದಿಪಡಿಸಿ 2025ರ ಆಗಸ್ಟ್ 25ರಂದು ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿತ್ತು.ಅದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. 

Kannada Bar & Bench
kannada.barandbench.com