Bengaluru Karaga procession Deccan Herald
ಸುದ್ದಿಗಳು

ಕರಗ ಮಹೋತ್ಸಕ್ಕೆ ಹೈಕೋರ್ಟ್ ಅನುಮತಿ; ಬೆಂಗಳೂರಿನಲ್ಲಿ ಮೆರವಣಿಗೆ ನಿಷೇಧಿಸಿದ್ದ ಹೈಕೋರ್ಟ್ ಆದೇಶದಲ್ಲಿ ಮಾರ್ಪಾಡು

ಕರಗ ಮಹೋತ್ಸವವು ಐತಿಹಾಸಿಕ ಪ್ರಸಿದ್ಧ ಹಬ್ಬವಾಗಿದ್ದು, 300 ವರ್ಷಗಳಿಂದ ನಡೆಸಲಾಗುತ್ತಿದೆ. ಹಿಂದೂ-ಮುಸ್ಲಿಮ್‌ ಏಕತೆ ಮತ್ತು ಜಾನಪದ ನೃತ್ಯಕ್ಕೆ ಹೆಸರುವಾಸಿಯಾದ ಕರಗವು ಬೆಂಗಳೂರು ಸಂಸ್ಕೃತಿಯ ಹೆಮ್ಮೆಯ ಪ್ರತೀಕ ಎಂದು ಅರ್ಜಿಯಲ್ಲಿ ಉಲ್ಲೇಖ.

Bar & Bench

ಸುಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಏಪ್ರಿಲ್‌ 16ರಂದು ರಾತ್ರಿ ನಗರದಲ್ಲಿ ಮೆರವಣಿಗೆ ನಡೆಸಲು ಧರ್ಮರಾಯಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ಅನುಮತಿಸಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ನಗರದ ಇತರೆ ಯಾವುದೇ ಭಾಗದಲ್ಲೂ ಯಾವುದೇ ರಾಜಕೀಯ ಅಥವಾ ರಾಜಕಿಯೇತರ ಸಂಘಟನೆಗಳು ಮೆರವಣಿಗೆ, ಪ್ರತಿಭಟನೆ, ಬಹಿರಂಗ ಸಭೆ ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ ಹೈಕೋರ್ಟ್ ಮಾರ್ಚ್‌ 3ರಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಕರಗ ಮೆರವಣಿಗೆ ನಡೆಸಲು ಸಮಸ್ಯೆಯಾಗಿದೆ. ಆದ್ದರಿಂದ, ಕರಗ ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಕೋರಿ ಧರ್ಮರಾಯಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿ ಸಲ್ಲಿಸಿದ್ದ ಮಧ್ಯಂತರ ಮನವಿಯ ತುರ್ತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಮೆರವಣಿಗೆಗೆ ಅನುಮತಿಸಿತು. ಅಲ್ಲದೇ, ಸಂಚಾರಕ್ಕೆ ಯಾವುದೇ ರೀತಿ ಅಡಚಣೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಷರತ್ತು ವಿಧಿಸಿದೆ.

ಈ ಆದೇಶವು ಕರಗ ಮೆರವಣಿಗೆ ಮಾತ್ರ ಅನ್ವಯಿಸಲಿದ್ದು, ಮಾರ್ಚ್‌ 3ರಂದು ಹೊರಡಿಸಿರುವ ಮಧ್ಯಂತರ ಆದೇಶ ಜಾರಿಯಯಲ್ಲಿದೆ. ಆದೇಶದಲ್ಲಿನ ಇತರೆ ಷರತ್ತು ಹಾಗೂ ನಿಯಮಗಳು ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಕರಗ ಮಹೋತ್ಸವವು ಅತ್ಯಂತ ಐತಿಹಾಸಿಕ ಪ್ರಸಿದ್ಧ ಹಬ್ಬವಾಗಿದ್ದು, 300 ವರ್ಷಗಳಿಂದ ನಡೆಸಲಾಗುತ್ತಿದೆ. ಹಿಂದೂ-ಮುಸ್ಲಿಮ್‌ ಏಕತೆ ಮತ್ತು ಜಾನಪದ ನೃತ್ಯಕ್ಕೆ ಹೆಸರುವಾಸಿಯಾದ ಕರಗವು ಬೆಂಗಳೂರು ಸಂಸ್ಕೃತಿಯ ಹೆಮ್ಮೆಯ ಪ್ರತೀಕ. ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹಬ್ಬದ ಆಚರಣೆ ಆರಂಭವಾಗುತ್ತದೆ. ಧರ್ಮರಾಯಸ್ವಾಮಿ ದೇವಸ್ಥಾನವು ದೇಶದಲ್ಲಿ ಪಾಂಡವರಿಗೆ ಮೀಸಲಾದ ಏಕೈಕ ದೇವಸ್ಥಾನವಾಗಿದೆ. ಕರಗ ಮಹೋತ್ಸವು ಪರಿಸರ ಮತ್ತು ಜಲಮೂಲಗಳ ಆಚರಣೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

ಹಿಂದೂ ಕ್ಯಾಲೆಂಡರ್ ಪ್ರಕಾರ ಕರ್ನಾಟಕದಲ್ಲಿ ಪ್ರತಿವರ್ಷ ಚೈತ್ರ ಮಾಸದಲ್ಲಿ (ಮಾಚ್/ಏಪ್ರಿಲ್) ಕರಗ ಮಹೋತ್ಸವ ನಡೆಯುತ್ತದೆ. ಇದು ಬೆಂಗಳೂರು ಕರಗ ಮಹೋತ್ಸವವೆಂದೇ ಖ್ಯಾತಿ ಪಡೆದಿದೆ. ತಿಗಳರ ಸಮುದಾಯವು ಈ ಹಬ್ಬವನ್ನು ಆಚರಿಸುತ್ತದೆ. ಮಹಾ ಭಾರತದ ಆದರ್ಶ ಮಹಿಳೆ ಮತ್ತು ಶಕ್ತಿ ದೇವತೆಯಾದ ದೌಪ್ರದಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಹಬ್ಬ ಆಚರಣೆ ಮಾಡಲಾಗುತ್ತಿದೆ. ಅದರಂತೆ ಏಪ್ರಿಲ್‌ 16ರಂದು ಹುಣ್ಣಿಮೆ ರಾತ್ರಿ ಕರಗ ಮೆರವಣಿಗೆ ನಡೆಸಲಾಗುತ್ತದೆ. ಇದಕ್ಕೆ ಅನುಮತಿ ನೀಡಬೇಕು ಎಂದು ದೇವಸ್ಥಾನದ ಪರವಾಗಿ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಕೋರಿಕೆ ಸಲ್ಲಿಸಿದ್ದರು.

ನಮ್ಮನ್ನೂ ಆಹ್ವಾನಿಸುತ್ತೀರಾ ಎಂದ ಸಿಜೆ

ಕರಗ ಮಹೋತ್ಸವಕ್ಕೆ ನಮ್ಮನ್ನೂ ಆಹ್ವಾನಿಸುತ್ತೀರಾ ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ಅರ್ಜಿದಾರರ ಪರ ಹಿರಿಯ ವಕೀಲ ಹಾಗೂ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರನ್ನು ಕೇಳಿದರು. ಇದಕ್ಕೆ ಸುಬ್ಬಾರೆಡ್ಡಿ ನಗುಬೀರಿದರೆ, ಪಕ್ಕದಲ್ಲೇ ಇದ್ದ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರು ಕರಗ ತುಂಬಾ ಚೆನ್ನಾಗಿರುತ್ತದೆ ಸರ್‌ ಎಂದರು. ಸರ್ಕಾರದ ವಕೀಲ ವಿಜಯಕುಮಾರ್‌ ಪಾಟೀಲ್‌ ಅವರು ಮಧ್ಯರಾತ್ರಿ ಕರಗ ಮಹೋತ್ಸವ ಆರಂಭವಾಗುತ್ತದೆ ಎಂದು ಹಬ್ಬದ ವಾತಾವರಣವನ್ನು ಸೂಚ್ಯವಾಗಿ ವಿವರಿಸಿದರು.

ಬೆಂಗಳೂರಿನಲ್ಲಿ ಮೆರವಣಿಗೆ ಮತ್ತು ಪ್ರತಿಭಟನೆಯಿಂದ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿರುವ ಸಂಬಂಧ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ಹೈಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಮಾರ್ಚ್‌ 3ರಂದು ಅರ್ಜಿ ವಿಚಾರಣೆಗೆ ಬಂದಾಗ ಸ್ವಾತಂತ್ರ್ಯ ಉದ್ಯಾನದಲ್ಲಿ ಹೊರತುಪಡಿಸಿ ನಗರದ ಇತರೆ ಯಾವುದೇ ಭಾಗದಲ್ಲೂ ಯಾವುದೇ ರಾಜಕೀಯ ಅಥವಾ ರಾಜಕಿಯೇತರ ಸಂಘಟನೆಗಳು ಮೆರವಣಿಗೆ, ಪ್ರತಿಭಟನೆ, ಬಹಿರಂಗ ಸಭೆ ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.