AAB 
ಸುದ್ದಿಗಳು

ಉನ್ನತಾಧಿಕಾರ ಸಮಿತಿ ಸಹಮತ ಪಡೆದು ವೆಚ್ಚ ಮಾಡಲು ಎಎಬಿ ವ್ಯವಸ್ಥಾಪನಾ ಸಮಿತಿಗೆ ಅನುಮತಿ: ತೀರ್ಪಿನಲ್ಲಿ ಪರಿಷ್ಕರಣೆ

ಚುನಾವಣೆ ಮೇಲ್ವಿಚಾರಣೆಗಾಗಿ ಹಿರಿಯ ವಕೀಲ ಎನ್‌ ಎಸ್‌ ಸತ್ಯನಾರಾಯಣ ಗುಪ್ತಾ ನೇತೃತ್ವದಲ್ಲಿ ಜಿ ಚಂದ್ರಶೇಖರ್‌, ಕೆ ಎನ್‌ ಪುಟ್ಟೇಗೌಡ, ಎ ಜಿ ಶಿವಣ್ಣ, ಶಿವಾರೆಡ್ಡಿ, ಕೆ ಎನ್‌ ಫಣೀಂದ್ರ ಮತ್ತು ಪ್ರಶಾಂತ್‌ ಚಂದ್ರ ಅವರನ್ನು ಒಳಗೊಂಡ ಸಮಿತಿ ರಚನೆ.

Bar & Bench

ಬೆಂಗಳೂರು ವಕೀಲರ ಸಂಘದ (ಎಎಬಿ) ನಿಧಿಯಿಂದ ನ್ಯಾಯಮೂರ್ತಿಗಳ ಸ್ವಾಗತ ಮತ್ತು ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎಷ್ಟಾದರೂ ಹಣ ಖರ್ಚು ಮಾಡುವ ಸ್ವಾತಂತ್ರ್ಯವನ್ನು ವ್ಯವಸ್ಥಾಪನಾ ಸಮಿತಿ ಹೊಂದಿರುತ್ತದೆ. ಆದರೆ, ಇದಕ್ಕೆ ಉನ್ನತಾಧಿಕಾರ ಸಮಿತಿಯ ಸಹಮತ ಪಡೆಯಬೇಕು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ತೀರ್ಪು ಪರಿಷ್ಕರಿಸಿದೆ.

ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ಅವಧಿ ಮುಕ್ತಾಯವಾಗಿರುವುದರಿಂದ ಎಎಬಿ ತಾತ್ಕಾಲಿಕ ಮಾದರಿಯಲ್ಲಿ ಕೆಲಸ ನಿರ್ವಹಿಸಲಿದ್ದು, ಹಣ ವೆಚ್ಚವಾಗುವಂಥ ಯಾವುದೇ ಯೋಜನೆ ಅಥವಾ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ತೀರ್ಪು ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಎಎಬಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಅಲೋಕ್‌ ಆರಾಧೆ ಮತ್ತು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ನೇತೃತ್ವದ ವಿಭಾಗೀಯ ಪೀಠವು ತೀರ್ಪು ಪ್ರಕಟಿಸಿದೆ.

ಪಕ್ಷಕಾರರು ಮತ್ತು ಮಧ್ಯಪ್ರವೇಶ ಮನವಿಗಳನ್ನು ಸಲ್ಲಿಸಿದವರ ವಾದವನ್ನು ವಿಸ್ತೃತವಾಗಿ ಆಲಿಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ಹಾಲಿ ಇರುವ ಕಾರ್ಯಕಾರಿ ಸಮಿತಿಯು ತಾತ್ಕಾಲಿಕವಾಗಿ ಕೆಲಸ ನಿರ್ವಹಿಸಲಿದ್ದು, ನ್ಯಾಯಾಲಯ ರಚಿಸಿರುವ ಹಿರಿಯ ವಕೀಲ ಎನ್‌ ಎಸ್‌ ಸತ್ಯನಾರಾಯಣ ಗುಪ್ತಾ ನೇತೃತ್ವದ ಹಿರಿಯ ವಕೀಲರಾದ ಜಿ ಚಂದ್ರಶೇಖರ್‌, ಕೆ ಎನ್‌ ಪುಟ್ಟೇಗೌಡ, ಎ ಜಿ ಶಿವಣ್ಣ, ಶಿವರೆಡ್ಡಿ, ಕೆ ಎನ್‌ ಫಣೀಂದ್ರ ಮತ್ತು ಪ್ರಶಾಂತ್‌ ಚಂದ್ರ ಅವರನ್ನು ಒಳಗೊಂಡ ಉನ್ನತಾಧಿಕಾರ ಸಮಿತಿಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಮೇಲ್ವಿಚಾರಣೆ ನಡೆಸಲಿದೆ ಎಂದು ಸೆಪ್ಟೆಂಬರ್‌ 20ರಂದು ತೀರ್ಪು ನೀಡಿತ್ತು.

ಕಾರ್ಯಕಾರಿ ಸಮಿತಿಯು ತಾತ್ಕಾಲಿಕ ಸಮಿತಿಯಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ನ್ಯಾಯಮೂರ್ತಿಗಳ ಸ್ವಾಗತ ಮತ್ತು ಬೀಳ್ಕೊಡುಗೆ ಸಮಾರಂಭ ನಡೆಸಲು ಮತ್ತು ಅದಕ್ಕೆ ತಗುಲುವ ವೆಚ್ಚಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ಎಎಬಿ ಪದಾಧಿಕಾರಿಗಳಿಗೆ ಕಲ್ಪಿಸಬೇಕು. ಹೈಕೋರ್ಟ್‌ ರಚಿಸಿರುವ ಉನ್ನತಾಧಿಕಾರ ಸಮಿತಿಗೆ ಮತದಾರರ ಪಟ್ಟಿ ಸಿದ್ಧಪಡಿಸುವ ಕೆಲಸವನ್ನು ನೀಡಬಾರದಿತ್ತು. ಎಎಬಿಯ ಆಡಳಿತ ಮಂಡಳಿ ನೇಮಿಸಿದ್ದ ಚುನಾವಣಾಧಿಕಾರಿಗಳಿಗೆ ಮತದಾರ ಪಟ್ಟಿ ಸಿದ್ಧಪಡಿಸಲು ಅನುವು ಮಾಡಿಕೊಡಬೇಕು ಎಂದು ವಕೀಲ ಡಿ ಆರ್‌ ರವಿಶಂಕರ್‌ ಅವರ ಮೂಲಕ ಸಲ್ಲಿಸಿದ್ದ ಎಎಬಿ ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

ಸೆಪ್ಟೆಂಬರ್‌ 9ರಂದು ಚುನಾವಣಾಧಿಕಾರಿಗಳಾಗಿ ಎಎಬಿ ಆಡಳಿತ ಮಂಡಳಿ ನೇಮಿಸಿದ್ದ ಇಬ್ಬರು ಸದಸ್ಯರು ಹಾಗೂ ವಕೀಲರಾದ ಕೆ ಎನ್‌ ಪುಟ್ಟೇಗೌಡ ಮತ್ತು ಎ ಜಿ ಶಿವಣ್ಣ ಅವರು ಉನ್ನತಾಧಿಕಾರ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಜನವರಿ 22ರಂದು ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಮುಗಿದಿದೆ. ಹೀಗಾಗಿ, ಮೇಲ್ಮನವಿದಾರರ ಅವಧಿಯನ್ನು ವಿಸ್ತರಿಸುವುದಕ್ಕೆ ಎಎಬಿ ಬೈಲಾದಲ್ಲಿ ಅವಕಾಶವಿಲ್ಲ. ಆದ್ದರಿಂದ, ಆಡಳಿತ ಮಂಡಳಿ ನೇಮಿಸಿದ್ದ ಚುನಾವಣಾಧಿಕಾರಿಗಳಿಗೆ ಮಾತ್ರ ಮತದಾರರ ಪಟ್ಟಿ ಸಿದ್ಧಪಡಿಸುವ ಅಧಿಕಾರವಿದೆ ಎಂದು ಹೇಳಲು ಕಾನೂನಾತ್ಮಕ ಹಕ್ಕು ಎಎಬಿ ಆಡಳಿತ ಮಂಡಳಿಗೆ ಇಲ್ಲ. ಅದರಲ್ಲೂ ಸೆಪ್ಟೆಂಬರ್‌ 8ರಂದು ಆಡಳಿತಾಧಿಕಾರಿ ನೇಮಿಸಿದ ಬಳಿಕ ಚುನಾವಣಾಧಿಕಾರಿಗಳನ್ನು ನೇಮಿಸುವ ನಿರ್ಧಾರ ಕೈಗೊಂಡಿರುವುದರಿಂದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳು ಅಧಿಕಾರ ಹೊಂದಿದ್ದಾರೆ ಎಂದು ಹೇಳಲಾಗದು ಎಂದು ಪೀಠ ಹೇಳಿದೆ.

ಆಡಳಿತ ಮಂಡಳಿಯ ಅವಧಿ ಮುಗಿಯುವುದಕ್ಕೂ ಮುನ್ನವೇ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕಿತ್ತು. ಕಾನೂನಾತ್ಮಕ ಹಕ್ಕಿನ ಗೈರು ಮತ್ತು ಮೇಲ್ಮನವಿದಾರರ ವಕೀಲರು ತುರ್ತಾಗಿ ಚುನಾವಣೆ ನಡೆಸಬೇಕು ಎಂದು ಹೇಳಿರುವುದನ್ನು ಪರಿಗಣಿಸಿ ಏಕ ಸದಸ್ಯ ಪೀಠವು ತನ್ನ ಆದೇಶದ ಪ್ಯಾರಾ 17(ಎಚ್‌) ರಲ್ಲಿ ಉನ್ನತಾಧಿಕಾರ ಸಮಿತಿಯು ಚುನಾವಣೆಯ ಮೇಲ್ವಿಚಾರಣೆ ನಡೆಸುವ ಕುರಿತಾದ ಆದೇಶದಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಏಕಸದಸ್ಯ ಪೀಠವು ಉಲ್ಲೇಖಿಸಿರುವ ವಿಸ್ತೃತ ಆದೇಶವನ್ನು ಪರಿಗಣಿಸಿ ಮತ್ತು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ತೀರ್ಪು ಪ್ರಕಟಿಸಲಾಗಿದೆ ಎಂದು ವಿಭಾಗೀಯ ಪೀಠ ತೀರ್ಪಿನಲ್ಲಿ ಹೇಳಿದೆ.

WA996-21-30-09-2021 AAB.pdf
Preview