ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ಬಿಟಿಸಿ) ಕುದುರೆ ಲಾಯ ನವೀಕರಣ ಮತ್ತು ಕುದುರೆಗಳ ಯೋಗ ಕ್ಷೇಮ ಸುಧಾರಣೆಗೆ ಸಂಬಂಧಿಸಿದಂತೆ ಕಲ್ಪಿಸಲಾಗಿರುವ ಸೌಲಭ್ಯ ಪರಿಶೀಲಿಸಿ, ವರದಿ ಸಲ್ಲಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ (ಎಡಬ್ಲುಬಿಐ) ಇನ್‌ಸ್ಪೆಕ್ಟರ್ ನೇಮಿಸಲು ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶ ಮಾಡಿದೆ.
ಬಿಟಿಸಿಯಲ್ಲಿ ಓಟದ ಪ್ರದರ್ಶನಕ್ಕೆ (ಪರ್ಫಾರ್ಮಿಂಗ್) ಬಳಸಲಾಗುವ ಪ್ರಾಣಿಗಳ ದೃಷ್ಟಿಯಿಂದ ರೂಪಿಸಲಾಗಿರುವ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದು ಕಂಪ್ಯಾಷನ್ ಆನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯೂಪಾ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವು ನಡೆಸಿತು.
“ಅರ್ಜಿದಾರರ ಆಕ್ಷೇಪಗಳಿಗೆ ಸಂಬಂಧಿಸಿದಂತೆ ಕುದುರೆ ಲಾಯಗಳ ನವೀಕರಣ ಸೇರಿ ಕುದುರೆಗಳ ಯೋಗಕ್ಷೇಮ ಸುಧಾರಣೆಗೆ ಮೂಲಸೌಕರ್ಯ ಕಲ್ಪಿಸಲಾಗಿದ್ದು, ಬಹುತೇಕ ನಿರ್ದೇಶನಗಳನ್ನು ಪಾಲಿಸಲಾಗಿದೆ ಎಂದು ಬಿಟಿಸಿ ಅಫಿಡವಿಟ್ ಸಲ್ಲಿಸಿದೆ. ಬಿಟಿಸಿಯಲ್ಲಿ ಕೈಗೊಳ್ಳಲಾಗಿರುವ ಸುಧಾರಣಾ ಕ್ರಮಗಳ ಪರಿಶೀಲನೆಗೆ ಎಡಬ್ಲುಬಿಐ ಇನ್‌ಸ್ಪೆಕ್ಟರ್ ನೇಮಿಸಿ ಮೂರು ವಾರಗಳಲ್ಲಿ ವರದಿ ಸಲ್ಲಿಸಬೇಕು” ಎಂದು ಪೀಠವು ಆದೇಶಿಸಿದ್ದು, ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಬಿಟಿಸಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು “ಬಿಟಿಸಿಯಲ್ಲಿ ಸುಧಾರಣೆಯ ಮಾಹಿತಿಯನ್ನು ಪ್ರತಿವಾದಿಗಳಿಗೆ ನೀಡಲಾಗಿದೆ. ಕುದುರೆ ಲಾಯಗಳ ಮೇಲ್ಛಾವಣಿ ಬದಲಾಯಿಸಬೇಕು ಎಂದು ಅರ್ಜಿದಾರರು ಹೇಳಿದ್ದಾರೆ. ಈ ಮಧ್ಯೆ, ನಾವು ಕುದುರೆಗಳ ಸಂಖ್ಯೆಯನ್ನೂ ಕಡಿತಗೊಳಿಸಿದ್ದೇವೆ. ಲಾಯ ಕೆಲಸ ನಡೆಸಲು ವಸ್ತುಗಳು ಸಿಗುತ್ತಿಲ್ಲ. ಈ ಕೆಲಸ ಮಾಡಲು ಕನಿಷ್ಠ 1ರಿಂದ 1.5 ವರ್ಷ ಬೇಕಿದೆ” ಎಂದರು.
“ಇನ್ನು ಕುದುರೆಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಬಿಟಿಸಿಯಲ್ಲಿದೆ. ಇದಕ್ಕಾಗಿ ರಾಷ್ಟ್ರೀಯ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಪ್ರತಿವಾದಿಗಳು ಹೇಳುತ್ತಿದ್ದಾರೆ. ಬಿಟಿಸಿಯಲ್ಲಿರುವ ಕುದುರೆಗಳು ಕ್ಲಬ್‌ಗೆ ಸೇರಿಲ್ಲ. ನಿಗದಿಪಡಿಸಲಾಗಿರುವ ಲಾಯಗಳಲ್ಲಿ ಮಾಲೀಕರು ಕುದುರೆಗಳನ್ನು ಇಟ್ಟುಕೊಂಡಿರುತ್ತಾರೆ. ಅವುಗಳಿಗೆ ಏನೇ ಸಮಸ್ಯೆಯಾದರೂ ಕುದುರೆ ಮಾಲೀಕರು ನೋಡಿಕೊಳ್ಳುತ್ತಾರೆ. ಸ್ಪರ್ಧೆಗೂ ಮುನ್ನ ಕುದುರೆ ಓಡಲು ಸಿದ್ಧವಾಗಿದೆಯೇ ಎಂಬುದನ್ನು ಕ್ಲಬ್‌ನಲ್ಲಿರುವ ಪಶುವೈದ್ಯರು ಪ್ರಾಥಮಿಕವಾಗಿ ಪರೀಕ್ಷೆ ನಡೆಸುತ್ತಾರೆ. ಒಂದೊಮ್ಮೆ ಸಮಸ್ಯೆ ಕಂಡುಬಂದರೆ ಮಾಲೀಕರಿಗೆ ವಿಚಾರ ತಿಳಿಸಲಾಗುತ್ತದೆ. ಕುದುರೆ ಮಾಲೀಕರು ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಾರೆ. ಪಶು ವೈದ್ಯೋಪಚಾರಕ್ಕೆ ಸಂಬಂಧಿಸಿದ ಔಪಚಾರಿಕತೆಯನ್ನು ನಾವು ಪೂರ್ಣಗೊಳಿಸಿದ್ದೇವೆ” ಎಂದರು.
ಕ್ಯೂಪಾ ಪ್ರತಿನಿಧಿಸಿದ್ದ ವಕೀಲ ಅಲ್ವಿನ್ ಸೆಬಾಸ್ಟಿಯನ್ ಅವರು “ಇನ್ಸ್‌ಪೆಕ್ಟರ್ ಡಾ. ಕ್ಯಾಪ್ಟನ್ ರವಿ ರಾಯದುರ್ಗ ಅವರ ವರದಿಯಲ್ಲಿ ಸುಸಜ್ಜಿತವಾದ ಶಸ್ತ್ರಚಿಕಿತ್ಸಾ ವ್ಯವಸ್ಥೆ ಹೊಂದಬೇಕು ಎಂದು ಹೇಳಲಾಗಿದೆ. ಈ ಬಗ್ಗೆ ಬಿಟಿಸಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಪ್ರಸ್ತಾಪಿಸಲಾಗಿಲ್ಲ. ಮೂಲಸೌಕರ್ಯ ಕಲ್ಪಿಸಲು ಬಿಟಿಸಿಗೆ ಒಂದೂವರೆ ವರ್ಷ ಬೇಕು ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಹಾಲಿ ಇರುವ ಕುದುರೆಗಳಿಗೆ ಪುನರ್ವಸತಿ ಎಲ್ಲಿ ಕಲ್ಪಿಸಲಾಗುತ್ತದೆ? ಈ ಸಂದರ್ಭದಲ್ಲಿ ರೇಸ್ ಮುಂದುವರಿಯುತ್ತದೆ. ಇದೆನ್ನೆಲ್ಲಾ ಹೇಗೆ ನಿಭಾಯಿಸಲಾಗುತ್ತದೆ. ಎಡಬ್ಲುಬಿಐ ನೇಮಿಸುವ ಇನ್‌ಸ್ಪೆಕ್ಟರ್ ಅವರು ಬಿಟಿಸಿಯಲ್ಲಿ ಕೈಗೊಳ್ಳಲಾಗಿರುವ ಸೌಲಭ್ಯಗಳ ಪರಿಶೀಲನೆ ನಡೆಸಿದರೆ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿರುವ ವಿಚಾರಗಳ ಸತ್ಯಾಸತ್ಯತೆ ತಿಳಿಯುತ್ತದೆ” ಎಂದರು.
ಎಡಬ್ಲುಬಿಐ ಪ್ರತಿನಿಧಿಸಿದ್ದ ವಕೀಲ ರೋಹನ್ ಕೊಠಾರಿ ಅವರು “ಬಿಟಿಸಿ ನಡೆಸಿರುವ ಕೆಲಸ ಕಾರ್ಯಗಳ ಪರಿಶೀಲನೆಗೆ ಇನ್‌ಸ್ಪೆಕ್ಟರ್ ನೇಮಿಸಲು ಸಿದ್ಧವಿದ್ದೇವೆ. ಅವರು ನೀಡುವ ವರದಿಯನ್ನು ಆಧರಿಸಿ ನ್ಯಾಯಾಲಯವು ಮನವಿ ವಿಲೇವಾರಿಗೆ ಸಂಬಂಧಿಸಿದಂತೆ ನಿರ್ಧರಿಸಬಹುದು” ಎಂದರು.