ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ಬಿಟಿಸಿ) ತಜ್ಞರ ಸಮಿತಿ ಶಿಫಾರಸ್ಸಿನಂತೆ ಕುದುರೆಗಳ ಸುರಕ್ಷತೆಗೆ ಹೊಸ ಲಾಯ ನಿರ್ಮಾಣ ಸೇರಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅದನ್ನು ಪೂರ್ಣಗೊಳಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ ಬಿಟಿಸಿ ಪರ ವಕೀಲರ ಕೋರಿಕೆಗೆ ಮಂಗಳವಾರ ಕರ್ನಾಟಕ ಹೈಕೋರ್ಟ್ ಅಸ್ತು ಎಂದಿದೆ.
ಬಿಟಿಸಿಯಲ್ಲಿ ಕುದುರೆಗಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕಂಪ್ಯಾಷನ್ ಆನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್(ಕ್ಯೂಪಾ) ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಬಿಟಿಸಿ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು “ಕುದುರೆ ಲಾಯಗಳ ನಿರ್ಮಾಣ ಆರಂಭವಾಗಿದೆ. ಸುಮಾರು 800 ಕುದುರೆ ಲಾಯಗಳ ನಿರ್ಮಾಣಕ್ಕೆ ಸುಮಾರು ಒಂದೂವರೆ ವರ್ಷ ಕಾಲಾವಕಾಶ ಬೇಕು. ಈ ಸಂಬಂಧ ವಿಸ್ತೃತವಾದ ಪ್ರಮಾಣಪತ್ರ ಸಲ್ಲಿಸಲಾಗುವುದು” ಎಂದು ತಿಳಿಸಿದರು.
“ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿರುವ 850 ಕುದುರೆ ಲಾಯಗಳ ನವೀಕರಣ ಸೇರಿ ಕುದುರೆಗಳ ಯೋಗಕ್ಷೇಮ ಸುಧಾರಣೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕುರಿತು ಡಾ. ಕ್ಯಾಪ್ಟನ್ ರವಿ ರಾಯದುರ್ಗ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ. ಆ ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೊಳಿಸಲಾಗುತ್ತಿದೆ” ಎಂದು ನಾಗಾನಂದ್ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಕಾಮಗಾರಿಯ ಪ್ರಗತಿ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ನಾಲ್ಕು ವಾರಗಳಿಗೆ ಮುಂದೂಡಿತು.
ನ್ಯಾಯಾಲಯದ ಸೂಚನೆ ಮೇರೆಗೆ ಸರ್ಕಾರದಿಂದ ನಿಯೋಜಿಸಲ್ಪಟ್ಟಿದ್ದ ಇನ್ಸ್‌ಪೆಕ್ಟರ್ ಡಾ. ಕ್ಯಾಪ್ಟನ್ ರವಿ ರಾಯದುರ್ಗ ಟರ್ಫ್ ಕ್ಲಬ್‌ನ ಕುದುರೆಗಳ ಯೋಗಕ್ಷೇಮ ಕುರಿತು ತಪಾಸಣೆ ನಡೆಸಿದ ಸಮಗ್ರ ವರದಿಯನ್ನು ಸಲ್ಲಿಸಿದ್ದರು. ವರದಿಯಲ್ಲಿ, ಕ್ಲಬ್‌ನಲ್ಲಿ ದುಸ್ಥಿತಿಯಲ್ಲಿರುವ 850 ಕುದುರೆ ಲಾಯಗಳನ್ನು ನವೀಕರಿಸಬೇಕಿದೆ. ಪಶುವೈದ್ಯಕೀಯ ಮೂಲ ಸೌಕರ್ಯ ಅಭಿವೃದ್ಧಿಪಡಿಸಬೇಕಿದೆ. ಕುದುರೆ ಲಾಯಗಳ ವಿಸ್ತೀರ್ಣವನ್ನು ವಿಸ್ತರಿಸಬೇಕಿದೆ. ಕಾನೂನು ಪ್ರಕಾರ ಕ್ಲಬ್‌ನಲ್ಲಿರುವ ಕುದುರೆಗಳ ಸಂಖ್ಯೆಗೆ ಅನುಗುಣವಾಗಿ 88 ಪಶು ವೈದ್ಯಾಧಿಕಾರಿಗಳನ್ನು ನಿಯೋಜಿಸಬೇಕು. ಆದರೆ, ಸದ್ಯ ಕೇವಲ 12 ಮಂದಿ ಪಶುವೈದ್ಯಾಧಿಕಾರಿಗಳಿದ್ದಾರೆ. ರೇಸ್‌ನಿಂದ ನಿವೃತ್ತಗೊಂಡ ಕುದುರೆಗಳ ಆರೈಕೆ ವಿಚಾರವಾಗಿ ಸೂಕ್ತ ಮಾರ್ಗಸೂಚಿ ರಚಿಸಬೇಕು. ನಿವೃತ್ತ ಕುದುರೆಗಳನ್ನು ಹರಾಜು ಹಾಕುವ ಅಥವಾ ದಯಾ ಮರಣ ಕಲ್ಪಿಸುವ ಬದಲಿಗೆ ಪರ್ಯಾಯ ಮಾರ್ಗೋಪಾಯ ಹುಡುಕಬೇಕು ಎಂದು ವರದಿಯ ಹೇಳಲಾಗಿತ್ತು.
ಅರ್ಜಿದಾರರ ಪರವಾಗಿ ವಕೀಲ ಆಲ್ವಿನ್ ಸೆಬಾಸ್ಟಿಯನ್ ಹಾಜರಾಗಿದ್ದರು. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯನ್ನು ವಕೀಲ ರೋಹನ್ ಕೊಠಾರಿ ಪ್ರತಿನಿಧಿಸಿದ್ದರು.