ED and Karnataka HC 
ಸುದ್ದಿಗಳು

ವಾಲ್ಮೀಕಿ ನಿಗಮ ಹಗರಣ: ಇ ಡಿ ವಶಕ್ಕೆ ಆರೋಪಿ ಸತ್ಯನಾರಾಯಣ ವರ್ಮಾ ನೀಡಲು ಹೈಕೋರ್ಟ್‌ ಆದೇಶ

Bar & Bench

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಹಣ ದುರ್ಬಳಕೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಅವರನ್ನು ಆಗಸ್ಟ್‌ 13ರಂದು ತನಿಖೆಗಾಗಿ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಬೇಕು ಎಂದು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ಆಗಸ್ಟ್‌ 2ರಂದು ಸತ್ಯನಾರಾಯಣ ವರ್ಮಾ ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಸತ್ಯನಾರಾಯಣ ವರ್ಮಾ ಅವರ ಎಸ್‌ಐಟಿ ಕಸ್ಟಡಿ ಅವಧಿಯು ಆಗಸ್ಟ್‌ 12ರಂದು ಸಂಜೆ ಮುಗಿಯುತ್ತದೆ. ಆಗಸ್ಟ್‌ 13ರಿಂದ ಅವರನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸುವ ಸಂಬಂಧ ತನಿಖಾಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಇ ಡಿ ನ್ಯಾಯಾಲಯ) ಮುಂದೆ ಹಾಜರುಪಡಿಸಬೇಕು” ಎಂದು ಹೈಕೋರ್ಟ್‌ ಆದೇಶಿಸಿದೆ.

ಇದಕ್ಕೂ ಮುನ್ನ, ಇ ಡಿ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್‌ “ವರ್ಮಾ ವಿರುದ್ಧ ಇ ಡಿ ನ್ಯಾಯಾಲಯ ಬಾಡಿ ವಾರೆಂಟ್‌ ಜಾರಿ ಮಾಡಿರುವುದು ಬಾಕಿ ಇರುವಾಗ ಅದನ್ನು ಈ ರೀತಿ ಮಾಡಲಾಗದು. ಇಂದೂ ಸಹ ವಿಶೇಷ ನ್ಯಾಯಾಲಯ ಬಾಡಿ ವಾರೆಂಟ್‌ ಜಾರಿ ಮಾಡಿದೆ” ಎಂದರು.

ಎಸ್‌ಐಟಿ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಆಗಸ್ಟ್‌ 22ರಂದು ಇ ಡಿ ನ್ಯಾಯಾಲಯವು ಬಾಡಿ ವಾರೆಂಟ್‌ ಆದೇಶ ಮಾಡಿದಾಗ ಇ ಡಿ ವಕೀಲರು ವರ್ಮಾ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ ಎಂದು ಸಂಬಂಧಿತ ನ್ಯಾಯಾಲಯಕ್ಕೆ ತಿಳಿಸಿಲ್ಲ. ಈಗ ವರ್ಮಾ ಅವರ ಕಸ್ಟಡಿ ಅವಧಿಯು ಆಗಸ್ಟ್‌ 12ರಂದು ಮುಗಿಯುತ್ತದೆ. ಆಮೇಲೆ ಇ ಡಿ ವಶಕ್ಕೆ ತೆಗೆದುಕೊಳ್ಳಬಹುದು. ಉಳಿದ ಎಲ್ಲಾ ಆರೋಪಿಗಳನ್ನು ಅವರು ಕಸ್ಟಡಿಗೆ ಪಡೆದಿದ್ದಾರೆ. ಸದ್ಯ ಪ್ರಕರಣದಲ್ಲಿ 49 ಕೋಟಿ ಜಪ್ತಿ ಮಾಡಿದ್ದೇವೆ. ಇನ್ನೂ 30ಕ್ಕೂ ಹೆಚ್ಚು ಕೋಟಿ ಜಪ್ತಿ ಮಾಡಬೇಕಿದೆ. ವರ್ಮಾ ಅವರೇ ಹಗರಣದ ಪ್ರಮುಖ ವ್ಯಕ್ತಿ” ಎಂದರು.

ಆಗ ಪೀಠವು ಇ ಡಿ ನ್ಯಾಯಾಲಯ ಬಾಡಿ ವಾರೆಂಟ್‌ ಆದೇಶ ಮಾಡಿರುವಾಗ ಮತ್ತೆ ಪೊಲೀಸ್‌ ಕಸ್ಟಡಿ ಆದೇಶವನ್ನು ಹೇಗೆ ಮಾಡಲಾಗುತ್ತದೆ? ಪೊಲೀಸ್‌ ಕಸ್ಟಡಿ ಆದೇಶ ಅಕ್ರಮ ಎಂದು ಆದೇಶ ಮಾಡಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ನೀವು (ಎಸ್‌ಐಟಿ) ವರ್ಮಾ ಅವರನ್ನು ಪೊಲೀಸ್‌ ಕಸ್ಟಡಿಗೆ ತೆಗೆದುಕೊಂಡಿದ್ದೀರಿ. ಇ ಡಿ ತನಿಖೆ ಮಾಡಬಾರದೇ? ಇದೆಲ್ಲವೂ ಇ ಡಿ ತಪ್ಪಿಸಿಕೊಳ್ಳುವ ತಂತ್ರ” ಎಂದಿತು. ಅಂತಿಮವಾಗಿ ಪೀಠವು ವಿಚಾರಣೆಯನ್ನು ಆಗಸ್ಟ್‌ 21ಕ್ಕೆ ಮುಂದೂಡಿತು.