ವಾಲ್ಮೀಕಿ ನಿಗಮದ ಹಗರಣ: ₹50 ಕೋಟಿ ಮೌಲ್ಯದ ನಗದು, ಬಂಗಾರ, ಕಾರು ಜಪ್ತಿ; 3,072 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ಒಟ್ಟು 12 ಆರೋಪಿಗಳನ್ನು ಬಂಧಿಸಿದ್ದು, ಎಂಟು ಪ್ರಕರಣ ದಾಖಲಿಸಲಾಗಿದೆ. ಸತ್ಯನಾರಾಯಣ ವರ್ಮಾರಿಂದ ನಗದು, ಕಾರು, ಎರಡು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ.
Karnataka Maharshi Valmiki Scheduled Tribes Development Corporation Limited
Karnataka Maharshi Valmiki Scheduled Tribes Development Corporation Limited
Published on

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ವಿಶೇಷ ತನಿಖಾ ದಳವು (ಎಸ್‌ಐಟಿ) ಏಳು ಸಂಪುಟಗಳಲ್ಲಿ 3,072 ಪುಟಗಳ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಸಿದೆ. ಈ ನಡುವೆ ಎಸ್‌ಐಟಿಯು ತನಿಖೆ ಮುಂದುವರಿಸಿದೆ.

ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಶ್ರೇಯಾಂಶ್‌ ದೊಡ್ಡಮನಿ ಅವರಿಗೆ ಎಸ್‌ಐಟಿ ಅಧಿಕಾರಿಗಳು ಈಚೆಗೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಕೆಎಂವಿಎಸ್‌ಟಿಡಿಸಿಎಲ್‌ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ ಜಿ ಪದ್ಮನಾಭ, ನಿಗಮದ ಮಾಜಿ ಲೆಕ್ಕಾಧಿಕಾರಿ ಪರಶುರಾಮ್‌ ದುರ್ಗಣ್ಣನವರ್‌, ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೊ-ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷ ಸತ್ಯನಾರಾಯಣ ಏಕತಾರಿ, ಮಾಜಿ ಸಚಿವ ಬಿ ನಾಗೇಂದ್ರ ಅವರ ಆಪ್ತ ನೆಕ್ಕುಂಟೆ ನಾಗರಾಜ್‌, ನಾಗರಾಜ್‌ ಅವರ ಭಾವ-ಮೈದುನ ನಾಗೇಶ್ವರ ರಾವ್‌, ಹೈದರಬಾದ್‌ನ ಎಂ ಚಂದ್ರಮೋಹನ್‌ ಮತ್ತು ಸಾಯಿತೇಜ, ಜಿ ಸತ್ಯನಾರಾಯಣ ವರ್ಮಾ, ಶಿವಮೊಗ್ಗದ ಜಿ ಕೆ ಜಗದೀಶ್‌, ಬೆಂಗಳೂರಿನ ತೇಜ ತಮ್ಮಯ್ಯ, ಆಂಧ್ರಪ್ರದೇಶದ ಪಿ ಶ್ರೀನಿವಾಸ ಮತ್ತು ಕೆ ಶ್ರೀನಿವಾಸ್‌ ರಾವ್‌ ಅವರನ್ನು ಎಸ್‌ಐಟಿ ಬಂಧಿಸಿದೆ.

Also Read
ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ: ಆದೇಶ ಪಾಲಿಸದ ಕಾರಾಗೃಹ ಮಹಾನಿರ್ದೇಶಕರ ಖುದ್ದು ಹಾಜರಿಗೆ ಸೂಚಿಸಿದ ನ್ಯಾಯಾಲಯ

ತನಿಖೆಯ ವೇಳೆ ಒಟ್ಟು ₹49,86,92,918 ಮೌಲ್ಯದ ನಗದು, ಬಂಗಾರ, ಕಾರು ಜಪ್ತಿ ಮಾಡಲಾಗಿದೆ. ಒಂಭತ್ತು ಆರೋಪಿಗಳಿಂದ ₹16,83,35,000 ನಗದು ಹಾಗೂ ನಾಲ್ವರು ಆರೋಪಿಗಳಿಂದ ₹11,70,33,120 ಮೌಲ್ಯದ 16.2546 ಕೆಜಿ ಬಂಗಾರ ಜಪ್ತಿ ಮಾಡಲಾಗಿದೆ. ಸತ್ಯನಾರಾಯಣ ವರ್ಮಾಗೆ ಸೇರಿದ ₹3,31,19,166 ಮೌಲ್ಯದ ಲ್ಯಾಂಬೊರ್ಗಿನಿ ಮತ್ತು ₹1.2 ಕೋಟಿ ಮೌಲ್ಯದ ಮರ್ಸಿಡೀಸ್‌ ಬೆಂಜ್‌ ಕಾರು ಜಪ್ತಿ ಮಾಡಲಾಗಿದೆ. ತನಿಖಾಧಿಕಾರಿಯ ಬ್ಯಾಂಕ್‌ ಖಾತೆಯಲ್ಲಿ ₹3,19,11,500 ಹಣವಿದ್ದು, ಜಪ್ತಿ ಮಾಡಲಾದ ಖಾತೆಗಳಲ್ಲಿ ₹13,72,94,132 ಹಣವಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ವಿವರಿಸಿದೆ.

ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 149, 409, 420, 467, 468, 471 ಅಡಿ ಪ್ರಕರಣ ದಾಖಲಾಗಿದೆ. ಇಡೀ ಹಗರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ. ಹಗರಣದ ತನಿಖೆಗಾಗಿ ಮೇ 31ರಂದು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು.

Kannada Bar & Bench
kannada.barandbench.com