Karnataka HC Chief Justice P B Varale and Justice Ashok S Kinagi
Karnataka HC Chief Justice P B Varale and Justice Ashok S Kinagi 
ಸುದ್ದಿಗಳು

ಬಾಲಬ್ರೂಯಿ ಅತಿಥಿ ಗೃಹವನ್ನು ಸಾಂವಿಧಾನಿಕ ಕ್ಲಬ್‌ ಆಗಿ ಪರಿವರ್ತಿಸಲು ರಾಜ್ಯ ಸರ್ಕಾರಕ್ಕೆ ಅನುಮತಿಸಿದ ಹೈಕೋರ್ಟ್‌

Bar & Bench

ಶತಮಾನಗಳಿಗೂ ಹಳೆಯದಾದ ಮರಗಳನ್ನು ಹೊಂದಿರುವ ಬಾಲಬ್ರೂಯಿ ಅತಿಥಿ ಗೃಹವನ್ನು ಸಾಂವಿಧಾನಿಕ ಕ್ಲಬ್‌ ಆಗಿ ವರ್ತಿಸಲು ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ.

ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ಪರಿಸರವಾದಿ ಟಿ ದತ್ತಾತ್ರೇಯ ದೇವರೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ನೇತೃತ್ವದ ವಿಭಾಗೀಯ ನಡೆಸಿತು.

ಬಾಲಬ್ರೂಯಿ ಅತಿಥಿ ಗೃಹಕ್ಕೆ ಸಂಬಂಧಿಸಿದಂತೆ 2021ರ ಅಕ್ಟೋಬರ್‌ 7ರ ಆದೇಶದಲ್ಲಿ ಯಥಾಸ್ಥಿತಿ ಕಾಪಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿದ್ದ ತನ್ನ ಆದೇಶದಲ್ಲಿ ನ್ಯಾಯಾಲಯವು ಮಾರ್ಪಾಡು ಮಾಡಿದೆ. ಅತಿಥಿ ಗೃಹದ ಸಮೀಪ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೇ ಮರ ಕಡಿಯುವುದು, ರೆಂಬೆ ಕತ್ತರಿಸದಂತೆ ಇದೇ ಸಂದರ್ಭದಲ್ಲಿ ನ್ಯಾಯಾಲಯ ಆದೇಶಿಸಿದೆ.

“ಕಟ್ಟಡದ ಹೊರಾಂಗಣದಲ್ಲಿ ಯಾವುದೇ ಬದಲಾವಣೆ ಮಾಡದೇ ಒಳಾಂಗಣ ಪ್ರದೇಶದ ನಿರ್ವಹಣೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ. ಅತಿಥಿ ಗೃಹ ಪ್ರದೇಶದಲ್ಲಿನ ಮರಗಳಿಗೆ ಯಾವುದೇ ಹಾನಿ ಮಾಡಬಾರದು. ರಾಜ್ಯ ಸರ್ಕಾರವು ಅತಿಥಿ ಗೃಹವನ್ನು ಸಾಂವಿಧಾನಿಕ ಕ್ಲಬ್‌ ಆಗಿ ಪರಿವರ್ತಿಸಬಹುದಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಪ್ರತಿಭಾ ಹೊನ್ನಾಪುರ ಅವರು “ಸಾಂವಿಧಾನಿಕ ಕ್ಲಬ್‌ ಬಳಕೆಗೆ ಸಂಬಂಧಿಸಿದಂತೆ ಕಟ್ಟಡದ ಒಳಗೆ ಅಥವಾ ಹೊರಗೆ ಯಾವುದೇ ಬದಲಾವಣೆ ಮಾಡದೇ ಅದರ ಸೌಂದರ್ಯವನ್ನು ಹೆಚ್ಚಿಸುವ ಪ್ರಸ್ತಾವ ಮಾತ್ರ ಇತ್ತು. ಇದಕ್ಕಾಗಿ ಯಾವುದೇ ಮರ ಕಡಿಯುವುದಿಲ್ಲ. ಅತಿಥಿ ಗೃಹದಲ್ಲಿ ಯಾವುದೇ ಮರಕ್ಕೆ ಹಾನಿ ಮಾಡುವುದಿಲ್ಲ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಬಾಲಬ್ರೂಯಿ ಅತಿಥಿ ಗೃಹದಲ್ಲಿ ಸಾಂವಿಧಾನಿಕ ಕ್ಲಬ್‌ ಆರಂಭಿಸಲಾಗುವುದು ಎಂದು ವಿಧಾನಸಭೆಯ ಸ್ವೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೆಲವು ತಿಂಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಈ ಬದಲಾವಣೆಗೆ ಆಕ್ಷೇಪಿಸಿ, ಬಾಲಬ್ರೂಯಿಯ ಐತಿಹಾಸಿಕ ಮಹತ್ವದ ಕುರಿತು ವಕೀಲ ಪ್ರದೀಪ್‌ ನಾಯಕ್‌ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಬಾಲಬ್ರೂಯಿ ಅತಿಥಿ ಗೃಹದಲ್ಲಿ ಕಟ್ಟಡ ತೆರವು, ಪುನರ್‌ ವಿನ್ಯಾಸ, ಪುನರ್‌ ನಿರ್ಮಾಣ ಮಾಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಈ ಹಿಂದೆ ತಡೆಯಾಜ್ಞೆ ತೆರವು ಕೋರಿದ್ದಾಗ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು. ಇದನ್ನು ಪೀಠವು ಪುರಸ್ಕರಿಸಿರಲಿಲ್ಲ.