ಬಾಲಬ್ರೂಯಿ ಅತಿಥಿ ಗೃಹ ಸಾಂವಿಧಾನಿಕ ಕ್ಲಬ್‌ ಆಗಿಸುವ ಪ್ರಸ್ತಾವ: ಯಥಾಸ್ಥಿತಿ ಕಾಪಾಡಲು ಹೈಕೋರ್ಟ್‌ ಆದೇಶ

ಬಾಲಬ್ರೂಯಿ ಅತಿಥಿ ಗೃಹದಲ್ಲಿ ಸಾಂವಿಧಾನಿಕ ಕ್ಲಬ್‌ ನಿರ್ಮಿಸುವ ಸಂಬಂಧ ತನ್ನ ತೀರ್ಮಾನವನ್ನು ರಾಜ್ಯ ಸರ್ಕಾರವು ಪರಿಶೀಲಿಸಿದೆ ಎಂದು ಅಕ್ಟೋಬರ್‌ 4ರಂದು ವಿಧಾನ ಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಿಸಿದ್ದರು.
Balabrooie Guest House and Karnataka HC
Balabrooie Guest House and Karnataka HC

ಬೆಂಗಳೂರಿನ ಪ್ರತಿಷ್ಠಿತ ಬಾಲಬ್ರೂಯಿ ಅತಿಥಿ ಗೃಹವನ್ನು ಶಾಸಕರಿಗೆ ಸಾಂವಿಧಾನಿಕ ಕ್ಲಬ್‌ ಆಗಿ ಪರಿವರ್ತಿಸುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡುವಂತೆ ಗುರುವಾರ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ.

ದತ್ತಾತ್ರೇಯ ಟಿ ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್‌ ಸಲ್ಲಿಸಿದ್ದ ಮಧ್ಯಪ್ರವೇಶ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಬಾಕಿ ಇರುವ ತಮ್ಮ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ ಮರಗಳ ಗಣತಿ ನಡೆಸಬೇಕು ಎಂದು ಅರ್ಜಿದಾರರು ಮಧ್ಯಪ್ರವೇಶ ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಅನುಮತಿ ಪಡೆಯದೇ ಈ ಪ್ರದೇಶದಲ್ಲಿರುವ ಮರಗಳು ಅಥವಾ ಕೊಂಬೆ ಕತ್ತರಿಸುವಂತಿಲ್ಲ ಎಂದು ಪೀಠ ಹೇಳಿದೆ. ನಗರದಲ್ಲಿ ಮರಗಳ ಗಣತಿ ನಡೆಯುತ್ತದೆ.

1850ರಲ್ಲಿ ಬಾಲಬ್ರೂಯಿ ಅತಿಥಿ ಗೃಹ ನಿರ್ಮಿಸಲಾಗಿದೆ ಎಂದು ಅರ್ಜಿದಾರರು ಹೇಳಿದ್ದು, ಬೆಂಗಳೂರು ನಗರದ ಮಹತ್ವದ ಪಾರಂಪರಿಕ ಸ್ಥಳವಾಗಿದೆ. ನಗರಕ್ಕೆ ಭೇಟಿ ನೀಡಿದ್ದ ಮಹನೀಯರಾದ ನೊಬೆಲ್‌ ಪುರಸ್ಕೃತರಾದ ರವೀಂದ್ರನಾಥ್‌ ಠಾಗೋರ್‌, ಎಂಜಿನಿಯರ್‌ ಎಂ ವಿಶ್ವೇಶ್ವರಯ್ಯ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಇಲ್ಲಿ ಉಳಿದುಕೊಂಡಿದ್ದರು. ಬಾಲಬ್ರೂಯಿ ಆವರಣದಲ್ಲಿ ಹಲವು ಪುರಾತನ ಕಾಲದ ಮರಗಳಿದ್ದು, ಕೆಲವು ಶತಮಾನಕ್ಕೂ ಹಳೆಯದ್ದಾಗಿವೆ. ಈ ಮರಗಳು 40 ಅಡಿಗಳಿಗೂ ಆಳವಾದ ಬೇರು ಬಿಟ್ಟಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆ ನೀರನ್ನು ಸಂಗ್ರಹಿಸಿ ನೆರೆಯನ್ನು ನಿಯಂತ್ರಿಸುತ್ತವೆ ಎಂದು ಅರ್ಜಿದಾರರು ಪೀಠದ ಗಮನಸೆಳೆದರು.

ಸಾಂವಿಧಾನಿಕ ಕ್ಲಬ್‌ ನಿರ್ಮಿಸುವ ಪ್ರಸ್ತಾಪವು ಪಾರಂಪರಿಕ ಮರಗಳನ್ನು ಕಡಿಯಲು ಅಥವಾ ಕತ್ತರಿಸಲು ಕಾರಣವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಕ್ಯಾಂಪಸ್‌ನಲ್ಲಿರುವ ಈ ಮರಗಳು ನಗರದ ಹೃದಯಭಾಗದ ಸುತ್ತಮುತ್ತಲಿನ ಟ್ರಾಫಿಕ್‌ಗೆ 'ಶ್ವಾಸಕೋಶʼವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳು ಸ್ವಯಂ ದೊಡ್ಡ ಪರಿಸರ ವ್ಯವಸ್ಥೆಗಳಾಗಿವೆ ಎಂದು ಹೇಳಿದ್ದಾರೆ.

Also Read
ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯವನ್ನು ಕಡ್ಡಾಯ ಮಾಡುವುದರಿಂದ ಗಂಭೀರ ಸಮಸ್ಯೆಗೆ ನಾಂದಿ: ಹೈಕೋರ್ಟ್‌ ಕಳವಳ

ಬಾಲಬ್ರೂಯಿ ಅತಿಥಿ ಗೃಹದ ಸುತ್ತಮುತ್ತಲಿರುವ ಮರಗಳ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಪೀಠವು ಆದೇಶ ಮಾಡಿದೆ. ಮುಂದಿನ ವಿಚಾರಣೆಯ ವೇಳೆಗೆ ಇಂಥದ್ದೇ ವರದಿ ಸಲ್ಲಿಸುವಂತೆ ನ್ಯಾಯಾಲಯವು ತೋಟಗಾರಿಕಾ ಇಲಾಖೆಗೂ ನಿರ್ದೇಶಿಸಿದೆ.

ಬಾಲಬ್ರೂಯಿ ಅತಿಥಿ ಗೃಹದಲ್ಲಿ ಸಾಂವಿಧಾನಿಕ ಕ್ಲಬ್‌ ನಿರ್ಮಿಸುವ ಸಂಬಂಧ ತನ್ನ ತೀರ್ಮಾನವನ್ನು ರಾಜ್ಯ ಸರ್ಕಾರವು ಪರಿಶೀಲಿಸಿದೆ ಎಂದು ಅಕ್ಟೋಬರ್‌ 4ರಂದು ವಿಧಾನ ಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಿಸಿದ್ದರು.

Related Stories

No stories found.
Kannada Bar & Bench
kannada.barandbench.com