ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಅಧ್ಯಕ್ಷರನ್ನು ನೇಮಿಸಲು ಸೋಮವಾರ ಕರ್ನಾಟಕ ಹೈಕೋರ್ಟ್ ಅನುಮತಿಸಿದೆ.
ಕೆಎಸ್‌ಪಿಸಿಬಿ ಅಧ್ಯಕ್ಷರ ಹುದ್ದೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರೂಪಿಸಿರುವ ಮಾರ್ಗಸೂಚಿಯ ಕಲಂಗಳನ್ನು ಪ್ರಶ್ನಿಸಿ ಆರ್ ಆಂಜನೇಯ ರೆಡ್ಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ನಡೆಸಿತು. ಅಧ್ಯಕ್ಷರ ನೇಮಕಾತಿಯು ಪಿಐಎಲ್‌ಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಅಧ್ಯಕ್ಷರ ಹುದ್ದೆಗೆ ಆಯ್ಕೆ ಮಾಡಲಾಗಿರುವ ವ್ಯಕ್ತಿಯ ಹೆಸರನ್ನು ಒಳಗೊಂಡ ದಾಖಲೆಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತು. ಕಳೆದ ವರ್ಷದ ಜುಲೈನಲ್ಲಿ ಸಾರ್ವಜನಿಕ ಅಧಿಸೂಚನೆ ಹೊರಡಿಸುವ ಮೂಲಕ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿ ಆ ಬಳಿಕ ಹೆಸರು ಅಂತಿಮಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿತು.
“ಕಳೆದ ವರ್ಷದ ಜೂನ್‌ನಿಂದ ಕೆಎಸ್‌ಪಿಸಿಬಿಗೆ ಅಧ್ಯಕ್ಷರಿಲ್ಲ” ಎಂದು ಹೇಳಿದ ನ್ಯಾಯಾಲಯವು ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ವ್ಯಕ್ತಿಯನ್ನು ನೇಮಿಸಬಹುದಾಗಿದೆ ಎಂದಿತು. “ಅಧ್ಯಕ್ಷರನ್ನಾಗಿ ನೇಮಿಸಲು ರಾಜ್ಯ ಸರ್ಕಾರ ಹೊರಟಿರುವ ವ್ಯಕ್ತಿಯ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಪ್ರಾಮಾಣಿಕವಾಗಿದ್ದಾರೆ ಎಂಬುದನ್ನು ಅರಿತುಕೊಂಡಿದ್ದೇವೆ” ಎಂದ ಪೀಠವು ಅರ್ಜಿದಾರರಿಗೂ “ಸರ್ಕಾರದ ಆಯ್ಕೆ ಉತ್ತಮವಾಗಿದೆ. ನಮ್ಮನ್ನು ನಂಬಿ” ಎಂದು ಹೇಳಿತು.
ಕೆಎಸ್‌ಪಿಸಿಬಿಯ ಅಧ್ಯಕ್ಷರನ್ನು ನೇಮಿಸಲು ಅರ್ಹತಾ ಮಾರ್ಗಸೂಚಿಗಳ ಅನುಪಸ್ಥಿತಿಯಲ್ಲಿ ಮಾಡಿದ ನೇಮಕಾತಿಗಳನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ದಾಖಲಿಸಲಾಗಿತ್ತು. ರಾಜ್ಯ ಸರ್ಕಾರವು ಮಾರ್ಗಸೂಚಿಗಳನ್ನು ರೂಪಿಸಿದ ಬಳಿಕ ವ್ಯಕ್ತಿಯ ಶೈಕ್ಷಣಿಕ ಮತ್ತು ಸಂಸ್ಥೆಯನ್ನು ಮುನ್ನಡೆಸುವುದಕ್ಕೆ ಸಂಬಂಧಿಸಿದ ಅರ್ಹತೆ ಕುರಿತು ತಕರಾರುಗಳನ್ನು ಎತ್ತಲಾಗಿತ್ತು.
ಆಗ ಪೀಠವು “ಅಧ್ಯಕ್ಷರ ಹುದ್ದೆಗೆ ಆಯ್ಕೆ ಮಾಡಲಾದ ವ್ಯಕ್ತಿಯು ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು ಇಲ್ಲವೇ ಪರಿಸರ ಸಂಬಂಧಿ ವಿಚಾರಗಳಿಗೆ ಸಂಬಂಧಿಸಿದ ಸರ್ಕಾರದ ಇಲಾಖೆ, ಸಂಸ್ಥೆ, ಸಂಘಟನೆಯನ್ನು ಮುನ್ನಡೆಸಿರುವವರಾಗಿಬೇಕು” ಎಂದಿತು. ಪ್ರಕರಣದ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಲಾಗಿದೆ.
ಅರ್ಹತೆಗಳಿಗೆ ಮಾರ್ಪಾಡು ಮಾಡಿದ ಬಳಿಕ ಹೊಸದಾಗಿ ಆಯ್ಕೆ ಪ್ರಕ್ರಿಯೆ ಆರಂಭಿಸುವಂತೆ ಕಳೆದ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು. ಕಳೆದ ವರ್ಷದ ಜುಲೈ ಅಧಿಸೂಚನೆಯ ಅನ್ವಯ ಈಗಾಗಲೇ ಅರ್ಹತೆಗಳನ್ನು ಹೊಂದಿರುವ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವು ಪೀಠಕ್ಕೆ ತಿಳಿಸಿತ್ತು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಶಾಸಕ ಡಾ ಕೆ ಸುಧಾಕರ್ ಅವರನ್ನು ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ನಿರ್ದೇಶನದಂತೆ ಮಾರ್ಗಸೂಚಿಗಳನ್ನು ರೂಪಿಸದೆಯೇ ಸರ್ಕಾರ ಅಧ್ಯಕ್ಷರನ್ನು ನೇಮಕ ಮಾಡಿದೆ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮಾರ್ಗಸೂಚಿ ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಿತ್ತು. ಹೈಕೋರ್ಟ್ ನಿರ್ದೇಶನದ ನಂತರ 2020ರ ಜೂನ್ 19ರಂದು ಸರ್ಕಾರ ಮಾರ್ಗಸೂಚಿ ರೂಪಿಸಿ ಅಧಿಸೂಚನೆ ಹೊರಡಿಸಿತ್ತು.
ಆದರೆ, ಸರ್ಕಾರದ ಮಾರ್ಗಸೂಚಿಗಳು ಜಲ ಕಾಯಿದೆ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನಗಳಿಗೆ ಅನುಗುಣವಾಗಿಲ್ಲ ಎಂದು ಆಕ್ಷೇಪಿಸಿ ಅರ್ಜಿದಾರರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಸರ್ಕಾರದ ಮಾರ್ಗಸೂಚಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಹೈಕೋರ್ಟ್, ಮಂಡಳಿಯ ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಗಳು ನಿಗದಿತ ವಿದ್ಯಾರ್ಹತೆ, ವಿಶೇಷ ಜ್ಞಾನ ಹಾಗೂ ಪ್ರಾಯೋಗಿಕ ಅನುಭವ ಹೊಂದಿರಬೇಕು. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದ ಅನುಸಾರ ಹೊಸ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.