Ranjith balkrishnan and Karnataka HC 
ಸುದ್ದಿಗಳು

ಮಲೆಯಾಳಂ ನಿರ್ದೇಶಕ ರಂಜಿತ್‌ ಬಾಲಕೃಷ್ಣನ್‌ ವಿರುದ್ದದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ವಜಾಗೊಳಿಸಿದ ಹೈಕೋರ್ಟ್‌

ಯುವಕನೊಬ್ಬ ನೀಡಿದ ದೂರಿನ ಅನ್ವಯ ರಂಜಿತ್‌ ಬಾಲಕೃಷ್ಣನ್‌ ವಿರುದ್ಧ ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 377 ಮತ್ತು ಐಟಿ ಕಾಯಿದೆ ಸೆಕ್ಷನ್‌ 66ಇ ಅಡಿ ಪ್ರಕರಣ ದಾಖಲಾಗಿತ್ತು.

Bar & Bench

ಮಲೆಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ರಂಜಿತ್‌ ಬಾಲಕೃಷ್ಣನ್‌ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಕೇರಳದ ರಂಜಿತ್‌ ಬಾಲಕೃಷ್ಣನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ರಂಜಿತ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “2012ರಲ್ಲಿ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ತಾಜ್‌ ಹೋಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯವಾಗಿದೆ ಎಂದು 31 ವರ್ಷದ ವ್ಯಕ್ತಿ ಆರೋಪಿಸಿದ್ದಾರೆ. ಮದ್ಯದ ಮತ್ತಿನಲ್ಲಿ ರಂಜಿತ್‌ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ವಿಮಾನ ನಿಲ್ದಾಣ ರಸ್ತೆಯಲ್ಲಿನ ತಾಜ್‌ ಹೋಟೆಲ್‌ ಆರಂಭವಾಗಿದ್ದು 2016ರಲ್ಲಿ. ಆದರೆ, ದೂರುದಾರ ತಮ್ಮ ಮೇಲೆ 2012ರಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ," ಎಂದು ವಾದಿಸಿದ್ದರು.

ಮುಂದುವರೆದು,"ಸುಮಾರು 12 ವರ್ಷಗಳ ಬಳಿಕ ದೂರು ನೀಡಿದ್ದಾರೆ. ಮಲೆಯಾಳಂ ಖ್ಯಾತ ನಟ ಮಮ್ಮೂಟಿ ಅವರು ರಂಜಿತ್‌ ಬಾಲಕೃಷ್ಣನ್‌ ಅವರಿಗೆ ತನ್ನನ್ನು ಪರಿಚಯಿಸಿಕೊಟ್ಟಿದ್ದರು ಎಂದು ದೂರುದಾರರು ಹೇಳಿದ್ದಾರೆ. ರಂಜಿತ್‌ ಅವರು ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದು, ಆನಂತರ ಅವಕಾಶ ನೀಡದಿದ್ದಕ್ಕೆ ರಂಜಿತ್‌ ವಿರುದ್ಧ ದೂರು ನೀಡಿರಬೇಕು” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: 2024ರ ಅಕ್ಟೋಬರ್‌ 26ರಂದು 31 ವರ್ಷದ ಯುವಕ ನೀಡಿದ ದೂರಿನ ಅನ್ವಯ ರಂಜಿತ್‌ ಬಾಲಕೃಷ್ಣನ್‌ ವಿರುದ್ಧ ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 377 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಇ ಅಡಿ ಪ್ರಕರಣ ದಾಖಲಾಗಿತ್ತು.