Justices Alok Aradhe and Anant Ramanath Hegde 
ಸುದ್ದಿಗಳು

ತನ್ನ ಇಚ್ಛೆಗೆ ವಿರುದ್ಧವಾಗಿ ಯಾರೂ ತನ್ನನ್ನು ಬಂಧನದಲ್ಲಿ ಇರಿಸಿಲ್ಲ ಎಂದ ಯುವತಿ; ಹೇಬಿಯಸ್‌ ಕಾರ್ಪಸ್‌ ಅರ್ಜಿ ಇತ್ಯರ್ಥ

ದಕ್ಷಿಣ ಕನ್ನಡದ ಹಿಂದೂ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳನ್ನು ಆಕೆಯ ಪಾಲಕರು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವಕನೊಬ್ಬ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ.

Bar & Bench

ತನ್ನ ಇಚ್ಛೆಗೆ ವಿರುದ್ಧವಾಗಿ ಸದ್ಯಕ್ಕೆ ಯಾರೂ ತನ್ನನ್ನು ಬಂಧನದಲ್ಲಿ ಇಟ್ಟಿಲ್ಲ ಎಂಬ ಎಂಬಿಎ ಪದವೀಧರೆ ಹೇಳಿಕೆಯನ್ನು ಆಧರಿಸಿ ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಬಿಸ್‌ ಕಾರ್ಪಸ್‌ ಅರ್ಜಿಯೊಂದನ್ನು ಇತ್ಯರ್ಥಪಡಿಸಿದೆ. ಅನ್ಯ ಧರ್ಮದ ಯುವಕನನ್ನು ಪ್ರೀತಿಸಿ ವಿವಾಹವಾಗಲು ಮುಂದಾದ ಕಾರಣ ಆಕೆಯನ್ನು ಪಾಲಕರು ಅಕ್ರಮ ಬಂಧನದಲ್ಲಿ ಇರಿಸಿದ್ದು, ಆಕೆಯನ್ನು ಹಾಜರುಪಡಿಸಲು ಆದೇಶಿಸಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ದಕ್ಷಿಣ ಕನ್ನಡದ ಹಿಂದೂ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳನ್ನು ಆಕೆಯ ಪಾಲಕರು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವಕನೊಬ್ಬ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಲೋಕ್‌ ಅರಾಧೆ ಮತ್ತು ಅನಂತ್‌ ರಾಮನಾಥ್‌ ಹೆಗ್ಡೆ ಅವರ ನೇತೃತ್ವದ ವಿಭಾಗೀಯ ಪೀಠವು ವಿಲೇವಾರಿ ಮಾಡಿದೆ.

“1998 ಜುಲೈ 2ರಂದು ಜನಿಸಿರುವ ತಾನು ಎಂಬಿಎ ಪದವೀಧರೆ ಎಂದು ಪೀಠದ ಮುಂದೆ ಹಾಜರಾಗಿ ಯುವತಿ ಮಾಹಿತಿ ನೀಡಿದ್ದಾರೆ. ತನ್ನ ಇಚ್ಛೆಗೆ ವಿರುದ್ಧವಾಗಿ ಸದ್ಯಕ್ಕೆ ಯಾರೂ ತನ್ನನ್ನು ಅಕ್ರಮ ವಶದಲ್ಲಿ ಇಟ್ಟಿಲ್ಲ ಎಂದೂ ಹೇಳಿದ್ದಾರೆ. ಈ ಹೇಳಿಕೆಯನ್ನು ಅಧಿಕೃತವಾಗಿ ಸ್ವೀಕರಿಸಲಾಗಿದೆ” ಎಂದು ಆದೇಶದಲ್ಲಿ ವಿವರಿಸಿರುವ ಪೀಠವು ಅರ್ಜಿ ಇತ್ಯರ್ಥಪಡಿಸಿದೆ.  

ನ್ಯಾಯಾಲಯವು 2023ರ ಮೇ 11ರಂದು ವಿಚಾರಣೆ ನಡೆಸಿ ಯುವತಿಗೆ ಮೇ 16ರವರೆಗೆ ಪುನರ್ವಸತಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿತ್ತು. ಮೇ 16ರಂದು ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ ಯುವತಿ ಹಾಜರಾಗಿ, ತನಗೆ 24 ವರ್ಷವಾಗಿದೆ. ತಾನು ವಯಸ್ಕಳಾಗಿದ್ದು, ಕಚೇರಿಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದೇನೆ. ನನಗೆ ಪಾಲಕರೊಂದಿಗೆ ಹೋಗಲು ಇಷ್ಟವಿಲ್ಲ. ಸದ್ಯ ಉಳಿದುಕೊಂಡಿರುವ ಪುನರ್ವಸತಿ ಕೇಂದ್ರದಲ್ಲಿ ಉಳಿಯಲೂ ಇಚ್ಛೆಯಿಲ್ಲ. ಮುಕ್ತವಾಗಿರಲು ಬಯಸಿದ್ದು, ನಾನು ಇಷ್ಟಪಡುವ ವಸತಿ ನಿಲಯದಲ್ಲಿ ನೆಲೆಸಲು ಬಯಸಿದ್ದೇನೆ. ಅದಕ್ಕೆ ಅವಕಾಶ ಕೊಡಬೇಕು. ಆ ಜಾಗ ನನಗೆ ಸುರಕ್ಷಿತವಾಗಿದೆ. ನಾನು ಉಳಿದುಕೊಳ್ಳುವ ವಸತಿ ನಿಲಯದಲ್ಲಿ ವಿಳಾಸ ಬಹಿರಂಗಪಡಿಸುವುದಿಲ್ಲ. ನನಗೆ ಯಾವುದೇ ಪೊಲೀಸ್ ರಕ್ಷಣೆ ಸಹ ಬೇಡ ಎಂದು ತಿಳಿಸಿದರು.

ಇದಕ್ಕೆ ಒಪ್ಪಿದ್ದ ಪೀಠವು ಯುವತಿಯು ಬಯಸಿದ ಜಾಗದಲ್ಲಿ ನೆಲಸಲು ಅನುಮತಿ ನೀಡಿತು. ಅಲ್ಲದೇ, ಒಂದೊಮ್ಮೆ ಯುವತಿಗೆ ಯಾವುದೇ ಸಮಸ್ಯೆ ಎದುರಾದರೂ ಹತ್ತಿರದ ಪೊಲೀಸ್ ಠಾಣೆಯ ಮೊರೆ ಹೋಗಬಹುದು. ಸಂಬಂಧಪಟ್ಟ ಪೊಲೀಸರು ಯುವತಿಗೆ ಸೂಕ್ತ ನೆರವು ಕಲ್ಪಿಸಬೇಕು ಎಂದು ನಿರ್ದೇಶಿಸಿತು.

ಇದೇ ವೇಳೆ ಯುವತಿಯ ತಂದೆ ಪರ ವಕೀಲರು, ಅರ್ಜಿದಾರ ಯುವಕನೊಂದಿಗೆ ಚರ್ಚಿಸಿ (ಯುವತಿ ತಂದೆ) ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದ್ದರು.

ಇದಕ್ಕೆ ಒಪ್ಪಿದ ಪೀಠವು ಮೇ 22ರವರೆಗೆ ಸಮಯಾವಕಾಶ ಕಲ್ಪಿಸಿ ವಿಚಾರಣೆ ಮುಂದೂಡಿತ್ತು. ಮೇ 22ರಂದು ಪೀಠದ ಮುಂದೆ ಹಾಜರಾದ ಯುವತಿಯು ತನ್ನ ಇಚ್ಛೆಗೆ ವಿರುದ್ಧವಾಗಿ ಸದ್ಯಕ್ಕೆ ಯಾರೂ ತನ್ನನ್ನು ಬಂಧನದಲ್ಲಿ ಇರಿಸಿಲ್ಲ ಎಂದು ಹೇಳಿಕೆ ನೀಡಿದ್ದನ್ನು ಆಧರಿಸಿ, ಅರ್ಜಿ ವಿಲೇವಾರಿ ಮಾಡಿದೆ.