Karnataka High Court and Indian Army's JAG entry scheme 
ಸುದ್ದಿಗಳು

ಭಾರತೀಯ ಸೇನೆಯ ಜೆಎಜಿ ವಿಭಾಗದ ಹುದ್ದೆಗೆ ಸಿಎಲ್‌ಎಟಿ-ಪಿಜಿ ಕಡ್ಡಾಯ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಹೈಕೋರ್ಟ್‌ ನಕಾರ

“ಸೇವೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ರೂಪದ ಮನವಿ ಮಾನ್ಯವಾಗುವುದಿಲ್ಲ. ನೇಮಕಾತಿ ಸಂಸ್ಥೆಯು ಅಭ್ಯರ್ಥಿ ನಿರ್ದಿಷ್ಟ ಅರ್ಹತೆ ಹೊಂದಿರಬೇಕು ಎಂದು ಹೇಳುವಾಗ ಪೀಠವು ಆ ನಿರ್ಧಾರವನ್ನು ತಿರಸ್ಕರಿಸಲಾಗದು” ಎಂದ ಪೀಠ.

Bar & Bench

ಭಾರತೀಯ ಸೇನೆಯ ನ್ಯಾಯಾಧೀಶ ಅಡ್ವೊಕೇಟ್‌ ಜನರಲ್‌ (ಜೆಎಜಿ) ವಿಭಾಗದ ಅಧಿಕಾರಿ ಹುದ್ದೆಗೆ ಆಯ್ಕೆಯಾಗಲು ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ (ಸಿಎಲ್‌ಎಟಿ) ಕಡ್ಡಾಯವಾಗಿ ಬರೆದಿರಬೇಕು ಎಂಬ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿಂಪಡೆಯಲು ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಅನುಮತಿಸಿದೆ.

ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಯಾದ ಪುರ್ಬಯಾನ್‌ ಚಕ್ರಬೊರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಸೇವೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ರೂಪದ ಮನವಿಯು ಮಾನ್ಯವಾಗುವುದಿಲ್ಲ. ನೇಮಕಾತಿ ಸಂಸ್ಥೆಯು ಅಭ್ಯರ್ಥಿಗಳು ನಿರ್ದಿಷ್ಟ ಅರ್ಹತೆ ಹೊಂದಿರಬೇಕು ಎಂದು ಹೇಳುವಾಗ ನ್ಯಾಯಾಲಯವು ಆ ನಿರ್ಧಾರವನ್ನು ತಿರಸ್ಕರಿಸಲಾಗದು” ಎಂದು ಪೀಠವು ಮೌಖಿಕವಾಗಿ ಹೇಳಿತು.

ಅರ್ಜಿದಾರ ವಿದಾರ್ಥಿಯನ್ನು ಪ್ರತಿನಿಧಿಸಿದ್ದ ವಕೀಲೆ ಮೈತ್ರೇಯಿ ಹೆಗಡೆ ಅವರು “ಭಾರತೀಯ ಸೇನೆಯ ನ್ಯಾಯಾಧೀಶರ ಅಡ್ವೊಕೇಟ್‌ ಜನರಲ್‌ ವಿಭಾಗದ ಅಧಿಕಾರಿ ಹುದ್ದೆಗೆ ವಿಧಿಸಲಾಗಿರುವ ಷರತ್ತು ಕಡಿಮೆ ಶುಲ್ಕ ಪಾವತಿಸಿ ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎರವಾಗಲಿದೆ. ಈ ವಿದ್ಯಾರ್ಥಿಗಳು ರೂ. 4,000 ದುಬಾರಿ ಶುಲ್ಕ ಪಾವತಿಸಿ ಸಿಎಲ್‌ಎಟಿ ಪರೀಕ್ಷೆ ಬರೆಯುವಷ್ಟು ಶಕ್ತರಲ್ಲ” ಎಂದರು.

ಇದಕ್ಕೆ ಪೀಠವು “ನಿಮ್ಮ ಅಹವಾಲನ್ನು ಸೂಕ್ತ ಪ್ರಾಧಿಕಾರದ ಮುಂದೆ ಇಡಬಹುದು. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಸಿಎಲ್‌ಎಟಿಗೆ ಅರ್ಜಿ ಸಲ್ಲಿಸುವುದಿಲ್ಲವೇ” ಎಂದು ಮೌಖಿಕವಾಗಿ ಪ್ರಶ್ನಿಸಿತು.

ಅಂತಿಮವಾಗಿ ಅರ್ಜಿದಾರರ ಪರ ವಕೀಲೆಯು ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸಲಾಗುವುದು. ಹೀಗಾಗಿ, ಅರ್ಜಿ ಹಿಂಪಡೆಯಲು ಅನುಮತಿಸಬೇಕು ಎಂದು ಕೋರಿದರು. ಇದಕ್ಕೆ ಪೀಠವು ಸಮ್ಮತಿಸಿ, ಅರ್ಜಿ ಇತ್ಯರ್ಥಪಡಿಸಿತು.