ಕಾನೂನುಬಾಹಿರವಾಗಿ ಕ್ಲಿನಿಕ್ ನಡೆಸುತ್ತಾ, ಜನರಿಗೆ ವಂಚಿಸಿದ ಆರೋಪದ ಮೇಲೆ ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಜಯನಗರದ ನಯನಾ ಕ್ಲಿನಿಕ್‌ನ ಡಾ.ಎಂ ಕೆ ಮಂಡಲ್ (ಮಿಲನ್ ಮಂಡಲ್) ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ಚಿತ್ರದುರ್ಗದ ಹಿರಿಯೂರಿನ ಟೌನ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಡಾ.ಎಂ ಕೆ ಮಂಡಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಅರ್ಜಿಯ ಹಿಂದಿನ ವಿಚಾರಣೆ ವೇಳೆ ಅರ್ಜಿದಾರರ ಕಾರ್ಯವೈಖರಿಗೆ ಪೀಠ ಚಾಟಿ ಬೀಸಿತ್ತು. ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರ ಸಂಘ’ದಿಂದ ತಾವು ಸರ್ಟಿಫಿಕೇಟ್ ಪಡೆದಿರುವುದಾಗಿ ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಹಾಗಾದರೆ, ಅರ್ಜಿದಾರರಿಗೆ ಡಾಕ್ಟರೇಟ್ ನೀಡಿದ್ದು ಯಾರು, ಯಾರು ಬೇಕಾದರೂ ವೈದ್ಯರು ಎಂದು ಕರೆದುಕೊಳ್ಳಬಹುದೇ? ಅರ್ಹತೆ ಇಲ್ಲದೇ ಸಾರ್ವಜನಿಕರಿಗೆ ಪಿಸ್ತುಲ್ಲಾ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದು ವಂಚನೆಯಲ್ಲದೇ ಇನ್ನೇನು? ಎಂದು ಅರ್ಜಿದಾರರನ್ನು ಪೀಠ ಖಾರವಾಗಿ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.
ಪ್ರಕರಣದ ಹಿನ್ನೆಲೆ: ಹುಳಿಯಾರು ರಸ್ತೆಯ ಎಸ್‌ಬಿಐ ಬ್ಯಾಂಕ್ ಪಕ್ಕದಲ್ಲಿರುವ ನಯನಾ ಕ್ಲಿನಿಕ್‌ನ ವೈದ್ಯ ಡಾ. ಎಂ ಕೆ ಮಂಡಲ್ ಅವರು ಯಾವುದೇ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆಯದೇ ಕೆಪಿಎಂಇ ಪ್ರಾಧಿಕಾರದಿಂದ ನೋಂದಣಿಯಾಗದೆ, ವೈದ್ಯಕೀಯ ನಿಪುಣತೆಯಿಲ್ಲದೆ ಆರೋಗ್ಯ ಇಲಾಖೆಯಿಂದ ಪರವಾನಗಿ ಪಡೆಯದೆ ಸಾರ್ವಜನಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯ ಪಾಂಡುರಂಗಪ್ಪ ಶನಿದೇವರಹಟ್ಟಿ ಅವರಿಗೆ 21-01-2021ರಂದು ಪಿಸ್ತೂಲ್ ಕಾಯಿಲೆಗೆ ಆಪರೇಷನ್ ಮಾಡಿರುವುದರಿಂದ ರೋಗಿಗೆ ಆಂತರಿಕ ಸ್ಪಿಂಕ್ಟರ್ಗೆ ಹಾನಿಯಾಗಿದೆ ಎಂದು ಅವರ ಪುತ್ರ 25.11.2025ರಂದು ದೂರು ನೀಡಿದ್ದರು.
ಇದನ್ನು ಆಧರಿಸಿ ಎಂ ಕೆ ಮಂಡಲ್ ವಿರುದ್ಧ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ ಸೆಕ್ಷನ್ 19, ಬಿಎನ್‌ಎಸ್ ಸೆಕ್ಷನ್‌ಗಳಾದ -318(2), 319(2)ರ ಅಡಿ ಹಿರಿಯೂರು ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.