Vishal Raghu H L, Chairman and Vinay Mangalekar, Vice Chairman 
ಸುದ್ದಿಗಳು

ಕೆಎಸ್‌ಬಿಸಿ ಹಣ ದುರ್ಬಳಕೆ: ವಿಶಾಲ್‌ ರಘು, ವಿನಯ್‌ ಮಂಗಳೇಕರ್‌ ವಿರುದ್ಧದ ಎಫ್‌ಐಆರ್‌ ರದ್ದತಿಗೆ ಹೈಕೋರ್ಟ್‌ ನಕಾರ

Bar & Bench

ಮೈಸೂರಿನಲ್ಲಿ ಕಳೆದ ವರ್ಷ ಜರುಗಿದ ರಾಜ್ಯ ವಕೀಲರ ಸಮ್ಮೇಳನದ ವೇಳೆ ಹಣಕಾಸು ದುರ್ಬಳಕೆ ನಡೆದಿದ್ದು, ₹50 ಲಕ್ಷಕ್ಕೂ ಹೆಚ್ಚಿನ ಮೊತ್ತದ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಅಧ್ಯಕ್ಷ ಎಚ್‌ ಎಲ್‌ ವಿಶಾಲ್‌ ರಘು ಮತ್ತು ಉಪಾಧ್ಯಕ್ಷ ವಿನಯ್‌ ಮಂಗ್ಳೇಕರ್‌ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ತಮ್ಮ ವಿರುದ್ಧ ಹಿರಿಯ ವಕೀಲ ಎಸ್‌ ಬಸವರಾಜ್‌ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ವಿಶಾಲ್‌ ರಘು ಮತ್ತು ವಿನಯ್‌ ಮಂಗಳೇಕರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿತು.

“ಅರ್ಜಿಯಲ್ಲಿ ಮೆರಿಟ್‌ ಇಲ್ಲಿದಿರುವುದರಿಂದ ಅದನ್ನು ವಜಾ ಮಾಡಲಾಗಿದೆ. ಆದೇಶದಲ್ಲಿನ ಅವಲೋಕನವು ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಅರ್ಜಿದಾರರ ಪರಿಗಣನೆಯ ಉದ್ದೇಶಕ್ಕಾಗಿ ಮಾತ್ರ. ಇದು ಅರ್ಜಿದಾರರ ವಿರುದ್ಧದ ತನಿಖಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವುದಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ದೂರಿನ ವಿವರ: ರಾಜ್ಯ ವಕೀಲರ ಪರಿಷತ್‌ ವತಿಯಿಂದ ಮೈಸೂರಿನಲ್ಲಿ 2023ರ ಆಗಸ್ಟ್‌ 12 ಮತ್ತು 13ರಂದು ಎರಡು ದಿನಗಳ ಕಾಲ ರಾಜ್ಯ ವಕೀಲರ ಸಮ್ಮೇಳನ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಸಮ್ಮೇಳನದ ಪ್ರತಿನಿಧಿ ವಕೀಲರಿಂದ ತಲಾ ₹1 ಸಾವಿರದಂತೆ ಒಟ್ಟು ₹1,16,33,000 ಮೊತ್ತವನ್ನು ದೇಣಿಗೆಯಾಗಿ ಸಂಗ್ರಹಿಸಲಾಗಿತ್ತು. ರಾಜ್ಯ ಸರ್ಕಾರ ₹1.8 ಲಕ್ಷ ಅನುದಾನ ನೀಡಿತ್ತು ಮತ್ತು ರಾಜ್ಯ ವಕೀಲರ ಪರಿಷತ್‌ನಿಂದ ₹75 ಲಕ್ಷ ಬಿಡುಗಡೆಯಾಗಿತ್ತು. ಒಟ್ಟು ಮೊತ್ತ ₹3,30,33,000 ಸಂಗ್ರಹವಾಗಿತ್ತು. ಈ ಹಣ ಪರಿಷತ್‌ನ ಬ್ಯಾಂಕ್‌ ಖಾತೆಗೆ ಜಮೆ ಆಗಿದ್ದು, ಈ ಹಣದ ಬಳಕೆಯಲ್ಲಿ ದುರುಪಯೋಗ ನಡೆದಿದೆ ಎಂದು ಆರೋಪಿಸಲಾಗಿದೆ.

ಅಧ್ಯಕ್ಷರು ಮತ್ತು ಇತರರು ಸೇರಿಕೊಂಡು ಪರಿಷತ್‌ನ ₹50 ಲಕ್ಷ ಮೊತ್ತವನ್ನು ಬ್ಯಾಂಕ್‌ನಿಂದ ನಗದೀಕರಿಸಿಕೊಂಡಿದ್ದಾರೆ. ಸುಳ್ಳು ಲೆಕ್ಕಪತ್ರ ಸೃಷ್ಟಿಸಿ, ವಕೀಲರ ಸಮುದಾಯಕ್ಕೆ ಸೇರಿದ ಕೋಟ್ಯಂತರ ರೂಪಾಯಿಯನ್ನು, ನಕಲಿ ಬಿಲ್‌ ತಯಾರಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಸರ್ಕಾರಕ್ಕೆ ಸಲ್ಲಿಸಬೇಕಾದ ಜಿಎಸ್‌ಟಿ ಹಣವನ್ನು ಸಲ್ಲಿಸದೇ ಮೋಸ ಮಾಡಿದ್ದು ಪರಿಷತ್ತಿನ ಸಮುದಾಯಕ್ಕೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ದೂರಿನಲ್ಲಿ ಬಸವರಾಜ್‌ ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ವಿಧಾನ ಸೌಧದ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 420 (ವಂಚನೆ), 406 (ನಂಬಿಕೆ ದ್ರೋಹ), 409 (ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹ), 468 (ಫೋರ್ಜರಿ), 471 (ನಕಲಿ ದಾಖಲೆಯನ್ನು ಅಪರಾಧದಲ್ಲಿ ಬಳಸುವುದು), 477–ಎ (ಬ್ಯಾಂಕ್‌ ಖಾತೆ ದುರುಪಯೋಗ) 34 (ಸಮಾನ ಉದ್ದೇಶ) ಮತ್ತು 120–ಬಿ (ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.