ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ದೇಶಾದ್ಯಂತ ಪ್ರಯಾಣಿಸಲು ಕರ್ನಾಟಕ ಹೈಕೋರ್ಟ್ ಗುರುವಾರ ಅನುಮತಿಸಿದೆ. ಆದರೆ, ವಿದೇಶ ಪ್ರಯಾಣ ಮಾಡುವಾಗ ಸಕ್ಷಮ ನ್ಯಾಯಾಲಯದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ.
ವಿಚಾರಣಾ ನ್ಯಾಯಾಲಯದ ಅನುಮತಿಯಿಲ್ಲದೇ ವ್ಯಾಪ್ತಿ ತೊರೆಯುವಂತಿಲ್ಲ ಎಂದು ಜಾಮೀನು ಮಂಜೂರು ಮಾಡುವಾಗ ವಿಧಿಸಿರುವ ಐದನೇ ಷರತ್ತಿನಲ್ಲಿ ಸಡಿಲಿಕೆ ಮಾಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.
ಯಾವುದೇ ಕಾರಣಕ್ಕಾಗಿಯಾದರೂ ದರ್ಶನ್ ವಿದೇಶ ಪ್ರಯಾಣ ಮಾಡಬೇಕೆಂದಾದಲ್ಲಿ ಸಕ್ಷಮ ನ್ಯಾಯಾಲಯದ ಅನುಮತಿ ಪಡೆಯಬೇಕು. ವಿಚಾರಣಾ ನ್ಯಾಯಾಲಯದ ಅನುಮತಿ ಪಡೆಯದೇ ಅವರು ದೇಶ ತೊರೆಯುವಂತಿಲ್ಲ ಎಂಬಷ್ಟರ ಮಟ್ಟಿಗೆ ಷರತ್ತಿನಲ್ಲಿ ಮಾರ್ಪಾಡು ಮಾಡಿ ಆದೇಶಿಸಿದೆ.
ದರ್ಶನ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು "ದರ್ಶನ್ ಅವರು ವೃತ್ತಿಯಿಂದ ನಟನಾಗಿದ್ದು, ಮೈಸೂರಿನ ನಿವಾಸಿಯಾಗಿದ್ದಾರೆ. ವೈಯಕ್ತಿಕ ಮತ್ತು ಆರೋಗ್ಯದ ಕಾರಣಕ್ಕಾಗಿ ದರ್ಶನ್ ಅವರು ಆಗಾಗ್ಗೆ ಬೆಂಗಳೂರಿನಿಂದ ಹೊರಗೆ ಪ್ರಯಾಣ ಮಾಡಬೇಕಿದೆ. ಜಾಮೀನು ನೀಡುವಾಗ ಈ ನ್ಯಾಯಾಲಯವು ಸಕ್ಷಮ ನ್ಯಾಯಾಲಯದ ಅನುಮತಿ ಇಲ್ಲದೇ ವ್ಯಾಪ್ತಿ ತೊರೆಯುವಂತಿಲ್ಲ ಎಂದು ವಿಧಿಸಿರುವ ಷರತ್ತು ದರ್ಶನ್‌ಗೆ ಅನಗತ್ಯ ಸಮಸ್ಯೆ ಉಂಟು ಮಾಡಿದ್ದು, ಪ್ರತಿಯೊಂದು ಬಾರಿಯೂ ಅವರು ಸಕ್ಷಮ ನ್ಯಾಯಾಲಯಕ್ಕೆ ತೆರಳಿ ಅನುಮತಿ ಕೋರುವುದು ಕಷ್ಟವಾಗಿ ಪರಿಣಮಿಸಿದೆ. ದರ್ಶನ್ ಅವರು ರಾಜ್ಯವಲ್ಲದೇ ವಿದೇಶಕ್ಕೂ ಪ್ರಯಾಣಿಸುವ ಅಗತ್ಯವಿದೆ. ಈ ಸಂಬಂಧ ಪ್ರವಾಸ ಪಟ್ಟಿ ಮತ್ತು ಮೆಮೊ ಸಲ್ಲಿಸಿದ್ದಾರೆ" ಎಂದು ವಿವರಿಸಿದರು.
ಸರ್ಕಾರ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು “ವಿದೇಶ ಪ್ರಯಾಣ ಕೈಗೊಳ್ಳುವಾಗ ದರ್ಶನ್ ಸಕ್ಷಮ ನ್ಯಾಯಾಲಯದ ಅನುಮತಿ ಕೋರಬೇಕು ಎಂಬಷ್ಟರ ಮಟ್ಟಿಗೆ ಷರತ್ತಿನಲ್ಲಿ ಮಾರ್ಪಾಡು ಮಾಡಬಹುದು” ಎಂದರು. ಇದನ್ನು ಪುರಸ್ಕರಿಸಿ, ನ್ಯಾಯಾಲಯ ಆದೇಶ ಮಾಡಿದೆ.
2024ರ ಡಿಸೆಂಬರ್ 13ರಂದು ಹೈಕೋರ್ಟ್ ದರ್ಶನ್, ಪವಿತ್ರಾಗೌಡ ಸೇರಿ ಐವರಿಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುವ ಅರ್ಜಿಯು ವಿಚಾರಣೆಗೆ ಬಾಕಿ ಇದೆ.
ಬೊಟೀಕ್ ನಡೆಸುತ್ತಿರುವ ಮೊದಲನೇ ಆರೋಪಿ ಪವಿತ್ರಾಗೌಡ ಅವರು ಉದ್ಯಮದ ಕೆಲಸಗಳಿಗಾಗಿ ಮಾರ್ಚ್ 3ರಿಂದ 10ರವರೆಗೆ ಮತ್ತು ಮಾರ್ಚ್ 17ರಿಂದ 26ರವರೆಗೆ ದೆಹಲಿ ಮತ್ತು ಮುಂಬೈಗೆ ಪ್ರಯಾಣ ಕೈಗೊಳ್ಳಲು ಬೆಂಗಳೂರಿನ 47ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಅನುಮತಿಸಿದೆ.
ತನಿಖಾ ಹಂತದಲ್ಲಿ ಪೊಲೀಸರು ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಜಫ್ತಿ ಮಾಡಿರುವ 30 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡುವಂತೆ ಕೋರಿ ದರ್ಶನ್ ಅರ್ಜಿ ಸಲ್ಲಿಸಿದ್ದು, ಅದರ ಕುರಿತು ವಿಚಾರಣಾ ನ್ಯಾಯಾಲಯ ಇನ್ನಷ್ಟೇ ವಿಚಾರಣೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಏಪ್ರಿಲ್ 8ಕ್ಕೆ ಮುಂದೂಡಿದೆ.