ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ಗೆ ಜಾಮೀನು ನೀಡುವ ವೇಳೆ ನ್ಯಾಯಾಲಯ ಪರಿಗಣಿಸಿದ ಅಂಶಗಳೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿನ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾಗೌಡ ಸೇರಿ ಏಳು ಮಂದಿಯು ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು ಎಂಬುದು ಸೇರಿ ಆರು ಷರತ್ತುಗಳನ್ನು ವಿಧಿಸಿ ಕರ್ನಾಟಕ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಅಧೀನ ನ್ಯಾಯಾಲಯ ವಿನಾಯಿತಿ ನೀಡದ ಹೊರತು ಪ್ರಕರಣದ ವಿಚಾರಣೆಯ ಎಲ್ಲಾ ದಿನಗಳಂದು ವಿಚಾರಣೆಗೆ ಹಾಜರಾಗಬೇಕು. ಅರ್ಜಿದಾರರು ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆ ಹಾಕಬಾರದು. ಇಂಥದ್ದೇ ಆರೋಪಗಳಲ್ಲಿ ಅರ್ಜಿದಾರರು ಭಾಗಿಯಾಗಬಾರದು ಮತ್ತು ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾಲಯದ ಅನುಮತಿ ಪಡೆಯದೇ ಆರೋಪಿಗಳು ನ್ಯಾಯಾಲಯದ ವ್ಯಾಪ್ತಿ ತೊರೆಯುವಂತಿಲ್ಲ ಎಂಬ ಸಾಮಾನ್ಯ ಷರತ್ತುಗಳನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ವಿಧಿಸಿದೆ.
ಅರ್ಜಿದಾರರಿಗೆ ಯಾವುದೇ ಗಂಭೀರ ಎನ್ನುವಂಥ ಕ್ರಿಮಿನಲ್ ಹಿನ್ನೆಲೆ ಇಲ್ಲ. ಅವರೆಲ್ಲರೂ ಸಮಾಜದಲ್ಲಿ ಆಳವಾದ ಬೇರುಗಳನ್ನು ಹೊಂದಿದ್ದಾರೆ. ಅರ್ಜಿದಾರರೆಲ್ಲರೂ ಆರು ತಿಂಗಳುಗಳಿಂದ ಜೈಲಿನಲ್ಲಿದ್ದಾರೆ. ಪ್ರಾಸಿಕ್ಯೂಷನ್ 13 ಸಂಪುಟಗಳ ಆರೋಪ ಪಟ್ಟಿಯಲ್ಲಿ 262 ಸಾಕ್ಷಿಗಳು ಮತ್ತು 587 ದಾಖಲೆಗಳನ್ನು ಉಲ್ಲೇಖಿಸಿದೆ. ಹೀಗಾಗಿ, ಸದ್ಯಕ್ಕೆ ಪ್ರಕರಣದ ವಿಚಾರಣೆ ಮುಗಿಯುವ ಸಾಧ್ಯತೆ ಕ್ಷೀಣ. ಲಭ್ಯವಿರುವ ದಾಖಲೆಗಳನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸಿದರೆ ಅರ್ಜಿದಾರರ ಜಾಮೀನು ಕೋರಿಕೆ ಮನ್ನಿಸಬೇಕಿದೆ. ಪ್ರಕರಣದ ಮೆರಿಟ್ ಆಧಾರದಲ್ಲಿ ಮತ್ತು ಆರೋಪಿಗಳನ್ನು ಬಂಧಿಸಿದ ತಕ್ಷಣ ಅವರಿಗೆ ಬಂಧನಕ್ಕೆ ಕಾರಣವಾದ ಅಂಶಗಳನ್ನು ವಿವರಿಸುವ ಮೆಮೊ ನೀಡದಿರುವುದೂ ಜಾಮೀನು ನೀಡಲು ಕಾರಣವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಲಭ್ಯವಿರುವ ದಾಖಲೆಗಳು ಸಂಕ್ಷಿಪ್ತ ವಿಶ್ಲೇಷಣೆ ಮತ್ತು ಯಾವ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಆರೋಪಿಗಳಿಗೆ ನೀಡಿಲ್ಲ. ಸಿಆರ್‌ಪಿಸಿ ಸೆಕ್ಷನ್ 50(1) (ಬಿಎನ್‌ಎಸ್‌ಎಸ್ 47) ಮತ್ತು ಸಂವಿಧಾನದ 22(1)ನೇ ವಿಧಿಯ ಅನುಸಾರ ಪಂಕಜ್ ಬನ್ಸಲ್ ಮತ್ತು ಪ್ರಬೀರ್ ಪುರಕಾಯಸ್ಥ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ 03.10.2023ರಂದು ಆದೇಶಿಸಿರುವಂತೆ ಬಂಧಿತ ಆರೋಪಿಗಳಿಗೆ ಬಂಧನಕ್ಕೆ ಕಾರಣಗಳನ್ನು ಒಳಗೊಂಡ ಮೆಮೊವನ್ನು ಬಂಧನವಾದ ತಕ್ಷಣ ಒದಗಿಸಬೇಕು. ಆದರೆ, ಇದರ ಅನುಪಾಲನೆಯಾಗಿಲ್ಲದಿರುವುದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡುತ್ತಿರುವುದಾಗಿ ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಮ್ಯಾಜಿಸ್ಟ್ರೇಟ್, ಜಿಲ್ಲಾ ನ್ಯಾಯಾಧೀಶರು, ಡಿಜಿಪಿಗೆ ನಿರ್ದೇಶನ
ಬಂಧಿತರನ್ನು ರಿಮ್ಯಾಂಡ್ ಕೋರಲು ಮ್ಯಾಜಿಸ್ಟ್ರೇಟ್ ಮುಂದೆ ವರದಿ ಸಲ್ಲಿಸುವಾಗ ಪೊಲೀಸರು ಬಂಧಿತರಿಗೆ ಯಾವ ಕಾರಣಗಳಿಗಾಗಿ ಅವರನ್ನು ಬಂಧಿಸಲಾಗುತ್ತಿದೆ ಎಂಬುದು ಹಾಗೂ ಅದಕ್ಕೆ ಪೂರಕವಾಗಿ ಅದರ ಪ್ರತಿಯನ್ನು ಸಲ್ಲಿಸಬೇಕು. ಆರೋಪಿಯನ್ನು ರಿಮ್ಯಾಂಡ್‌ಗೆ ನೀಡಲು ಅಧಿಕಾರ ಚಲಾಯಿಸುವ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರು ಸಿಆರ್‌ಪಿಸಿ ಸೆಕ್ಷನ್ 50(1) (ಬಿಎನ್‌ಎಸ್‌ಎಸ್ 47) ಮತ್ತು ಸಂವಿಧಾನದ 22(1)ನೇ ವಿಧಿಯನ್ನು ಪಾಲಿಸಲಾಗಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ತಪ್ಪದೇ ತಮ್ಮ ತೃಪ್ತಿಯನ್ನು ದಾಖಲಿಸಬೇಕು. ಆರೋಪಿಗೆ ಬಂಧನ ಆಧಾರ ತಿಳಿಸುವ ಕುರಿತು ಏಕರೂಪದ ವಿಧಾನ (ಫಾರ್ಮ್ಯಾಟ್) ಪಾಲಿಸಲು ಪೊಲೀಸ್ ಮಹಾನಿರ್ದೇಶಕರು ಅಗತ್ಯ ಕ್ರಮಕೈಗೊಳ್ಳಬೇಕು. ಈ ಆದೇಶದ ಪ್ರತಿಯನ್ನು ರಾಜ್ಯದ ಎಲ್ಲಾ ಮ್ಯಾಜಿಸ್ಟ್ರೇಟ್/ಜಿಲ್ಲಾ ನ್ಯಾಯಾಂಗ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ರಿಜಿಸ್ಟ್ರಾರ್ ಜನರಲ್ ಕಳುಹಿಸಿಕೊಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಆದೇಶದಲ್ಲಿನ ಪ್ರಮುಖ ಅಂಶಗಳು
ಆರೋಪಿಗಳ ಕರೆ ದಾಖಲೆ, ಮೊಬೈಲ್ ಫೋನ್‌ಗಳ ಲೊಕೇಷನ್ ಇತ್ಯಾದಿ ಮಾಹಿತಿಯನ್ನು ಪ್ರಾಸಿಕ್ಯೂಷನ್ ಸಲ್ಲಿಸಿದೆ. ಆದರೆ, ಈ ನ್ಯಾಯಾಲಯವು ಪ್ರಾಸಿಕ್ಯೂಷನ್ ಸಲ್ಲಿಸಿರುವ ಸಾಂದರ್ಭಿಕ ಸಾಕ್ಷ್ಯಗಳ ವಿಸ್ತೃತ ವಿಶ್ಲೇಷಣೆಯನ್ನು ಈ ಹಂತದಲ್ಲಿ ಮಾಡಲಾಗದು. ಇದು ಪ್ರಕರಣದ ವಿಚಾರಣೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಾಸಿಕ್ಯೂಷನ್ ಸಾಕ್ಷಿಗಳಾದ 80, 98 & 99ರ ಹೇಳಿಕೆಗಳನ್ನು ಓದಿದರೆ ಆರೋಪಿಗಳು ರೇಣುಕಾಸ್ವಾಮಿಯನ್ನು ಕೊಲೆ ಮಾಡುವ ಪಿತೂರಿ ಹೊಂದಿದ್ದರು ಎಂಬುದನ್ನು ಮೇಲ್ನೋಟಕ್ಕೆ ತಿಳಿಸುವುದಿಲ್ಲ. ಆರೋಪಿಗಳ ಕೃತ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು ವಿರೋಧಾಭಾಸದಿಂದ ಕೂಡಿದೆ. ಉಳಿದೆಲ್ಲಾ ವಿಚಾರಗಳು ಸಂಪೂರ್ಣ ವಿಚಾರಣೆಯಿಂದ ಹೊರಬರಬೇಕಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಆರೋಪಿಗಳನ್ನು ಬೇರೆ ಬೇರೆ ದಿನಾಂಕದಂದು ಬಂಧಿಸಲಾಗಿದೆ. ಆದರೆ, ಅವರ ಬಂಧನದ ಆಧಾರ ಒಂದೇ ರೀತಿಯಾಗಿದೆ. ಇದು ಸುಪ್ರೀಂ ಕೋರ್ಟ್ ಪ್ರಬೀರ್ ಪುರಕಾಯಸ್ಥ ಪ್ರಕರಣದಲ್ಲಿ ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ.
ಒಂದೊಮ್ಮೆ ಬಂಧನ ಆಧಾರದ ಮೆಮೊವನ್ನು ಆರೋಪಿಗಳಿಗೆ ನೀಡಲಾಗಿದೆ ಎಂಬುದನ್ನು ಒಪ್ಪಿಕೊಂಡರೂ ಮುಖ್ಯವಾದ ಪ್ರತ್ಯಕ್ಷ ಸಾಕ್ಷಿ ಕಿರಣ್ (ಸಿಡಬ್ಲ್ಯ 76) ಹೇಳಿಕೆಯನ್ನು ತಡವಾಗಿ ಏಕೆ ರೆಕಾರ್ಡ್ ಮಾಡಲಾಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕಿರಣ್ ಅವರು ಆರೋಪಿಗಳ ಬಂಧನ ಸಂದರ್ಭದಲ್ಲಿ ಉಪಸ್ಥಿತವಾಗಿದ್ದರ ಕುರಿತು ತನ್ನ ಹೇಳಿಕೆಯಲ್ಲಿ ಎಲ್ಲಿಯೂ ಹೇಳಿಲ್ಲ. ಅಲ್ಲದೇ, ಬಂಧನ ಆಧಾರ ಮೆಮೊದಲ್ಲಿ ಸಹಿ ಮಾಡಿರುವುದರ ಕುರಿತೂ ಹೇಳಿಲ್ಲ. ಹೀಗಾಗಿ, ಆರೋಪಿಗಳ ಬಂಧನದ ತಕ್ಷಣ ಅವರಿಗೆ ಬಂಧನದ ಆಧಾರದ ಮೆಮೊ ನೀಡಲಾಗಿದೆ ಎಂದು ಪ್ರಾಸಿಕ್ಯೂಷನ್ ಹೇಳಿರುವುದರ ಕುರಿತು ಗಂಭೀರ ಅನುಮಾನ ಉದ್ಭವವಾಗುತ್ತದೆ. ಏಕೆಂದರೆ ವಿಚಾರಣಾಧೀನ ನ್ಯಾಯಾಲಯದ ಆದೇಶದಲ್ಲಿಯೂ ಆರೋಪಿಗಳಿಗೆ ಬಂಧನ ಆಧಾರದ ಮೆಮೊ ನೀಡಿರುವ ಕುರಿತು ಉಲ್ಲೇಖವಾಗಿಲ್ಲ. 03.10.2023ರ ನಂತರ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಆರೋಪಿ ಬಂಧನವಾದ ತಕ್ಷಣ ಬಂಧನದ ಆಧಾರವನ್ನು ಒಳಗೊಂಡ ಮೆಮೊವನ್ನು ಆರೋಪಿಗೆ ನೀಡುವುದು ಕಡ್ಡಾಯವಾಗಿದೆ. ಇದನ್ನು ಪಾಲಿಸದಿದ್ದರೆ ಆರೋಪಿಯು ಜಾಮೀನು ಪಡೆಯಲು ಅರ್ಹನಾಗುತ್ತಾನೆ ಎಂದು ನ್ಯಾಯಾಲಯ ಹೇಳಿದೆ.
ಬಂಧನ ಆಧಾರ ಮೆಮೊದಲ್ಲಿ ಆರೋಪಿಯನ್ನು ಬಂಧಿಸುವ ಅಗತ್ಯ ಏಕೆ ನಿರ್ಮಾಣವಾಯಿತು ಎಂಬ ಅಂಶಗಳನ್ನು ತನಿಖಾಧಿಕಾರಿ ವಿವರಿಸಿರಬೇಕು. ಇದು ಆತನ ಕಸ್ಟಡಿ ರಿಮ್ಯಾಂಡ್ ವಿರುದ್ಧ ತನ್ನ ವಾದ ಮಂಡಿಸಿ, ರಕ್ಷಿಸಿಕೊಳ್ಳಲು ನೆರವಾಗುತ್ತದೆ ಎಂದು ಎಂದು ಪ್ರಬೀರ್ ಪುರಕಾಯಸ್ಥ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ಪವಿತ್ರಾಗೌಡ ಮತ್ತು ಪ್ರದೋಶ್ ರಾವ್ ಬಂಧನ ಆಧಾರ ಮೆಮೊದಲ್ಲಿ ನಾಗೇಶ್ (ಸಿಡಬ್ಲ್ಯು 73) ಸಹಿ ಮಾಡಿದ್ದು, ಆತನ ಸಿಆರ್‌ಪಿಸಿ ಸೆಕ್ಷನ್ 161 ಹೇಳಿಕೆಯನ್ನು 14.06.2024ರಂದು ದಾಖಲಿಸಲಾಗಿದೆ. ಆದರೆ, 11.06.2024ರಂದು ಪವಿತ್ರಾ ಮತ್ತು ಪ್ರದೋಶ್‌ನನ್ನು ಬಂಧಿಸಿದ ದಿನ ನಾಗೇಶ್ ಖುದ್ದು ಉಪಸ್ಥಿತಿ ಇದ್ದು, ಬಂಧನ ಆಧಾರದಲ್ಲಿ ಸಹಿ ಮಾಡಿರುವುದರ ಬಗ್ಗೆ ತನ್ನ ಹೇಳಿಕೆಯಲ್ಲಿ ಹೇಳಿಲ್ಲ.
12ನೇ ಆರೋಪಿ ಆರ್ ನಾಗರಾಜುರನ್ನು 11.06.2024ರಂದು ಬಂಧಿಸಲಾಗಿದ್ದು, ಅವರ ಬಂಧನ ಆಧಾರ ಮೆಮೊದಲ್ಲಿ ಮುಖ್ಯ ಸಾಕ್ಷಿಯಾಗಿರುವ ಕಿರಣ್ ಸಹಿ ಮಾಡಿದ್ದಾರೆ. 15.06.2024ರಂದು ಕಿರಣ್ ಅವರ ಸಿಆರ್‌ಪಿಸಿ ಸೆಕ್ಷನ್ 161 ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. 22.06.2024ರಂದು ಸಿಆರ್‌ಪಿಸಿ ಸೆಕ್ಷನ್ 164 ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆದರೆ, ನಾಗರಾಜು ಬಂಧನ ಆಧಾರದಲ್ಲಿ ಸಹಿ ಮಾಡಿರುವ ಕುರಿತು ಅಥವಾ ಬಂಧನದ ಸಂದರ್ಭದಲ್ಲಿ ಉಪಸ್ಥಿತನಿದ್ದ ಕುರಿತು ಹೇಳಿಕೆಯಲ್ಲಿ ತಿಳಿಸಿಲ್ಲ.
11ನೇ ಆರೋಪಿಯಾಗಿರುವ ದರ್ಶನ್ ಕಾರು ಚಾಲಕ ಲಕ್ಷ್ಮಣ್‌ನನ್ನು 11.06.2024ರಂದು ಬಂಧಿಸಲಾಗಿದೆ. ಈತನ ಬಂಧನ ಆಧಾರಕ್ಕೆ ಸಿಡಬ್ಲ್ಯು 79 ಆಗಿರುವ ಮಧುಸೂದನ್ ಸಹಿ ಮಾಡಿದ್ದಾರೆ. ಈತನ ಸಿಆರ್‌ಪಿಸಿ ಸೆಕ್ಷನ್ 161 ಹೇಳಿಕೆಯನ್ನು 15.06.2024ರಂದು ದಾಖಲಿಸಲಾಗಿದೆ. ಆದರೆ, ತನ್ನ ಹೇಳಿಕೆಯಲ್ಲಿ ಮಧುಸೂದನ್ ಅವರು ಲಕ್ಷ್ಮಣ್ ಬಂಧನದ ಸಂದರ್ಭದಲ್ಲಿ ಉಪಸ್ಥಿತವಾಗಿದ್ದ ಕುರಿತು ಅಥವಾ ಬಂಧನ ಆಧಾರದಲ್ಲಿ ಸಹಿ ಮಾಡಿರುವ ಕುರಿತು ಹೇಳಿಲ್ಲ.
ದರ್ಶನ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ಪ್ರಕರಣದ ಮೆರಿಟ್ ಮೇಲೆ ಸುದೀರ್ಘವಾಗಿ ವಾದಿಸಿದ್ದರು. ದರ್ಶನ್ ವ್ಯವಸ್ಥಾಪಕ, 12ನೇ ಆರೋಪಿ ಆರ್ ನಾಗರಾಜು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರು ಬಂಧನ ಆಧಾರ ಒದಗಿಸುವುದರ ಅಗತ್ಯ, ಪ್ರಾಮುಖ್ಯತೆ ಮತ್ತು ಈ ಪ್ರಕರಣದಲ್ಲಿನ ಅದನ್ನು ಪಾಲಿಸದಿರುವುದು ಮತ್ತು ತಾಂತ್ರಿಕ ವಿಫಲತೆಗಳ ಬಗ್ಗೆ ವಿಸ್ತೃತವಾಗಿ ವಾದಿಸಿದ್ದರು.