CM Siddaramaiah and Karnataka HC 
ಸುದ್ದಿಗಳು

[ಮುಡಾ ಪ್ರಕರಣ] ಸಿಎಂ ಸಿದ್ದು, ದೇವರಾಜು ಮೇಲ್ಮನವಿಗಳ ವಿಚಾರಣೆ ಡಿ.5ಕ್ಕೆ ಮರು ನಿಗದಿಗೊಳಿಸಿದ ಹೈಕೋರ್ಟ್‌

ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಸಿಎಂ ಮೇಲ್ಮನವಿ ವಿಚಾರಣೆ ಮುಂದೂಡಿಕೆಗೆ ಆಕ್ಷೇಪವಿಲ್ಲ. ಆದರೆ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು” ಎಂದು ಕೋರಿದರು. ಇದಕ್ಕೆ ನ್ಯಾಯಾಲಯ ಒಪ್ಪಲಿಲ್ಲ.

Bar & Bench

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭೂ ಮಾಲೀಕ ಜೆ ದೇವರಾಜು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಡಿಸೆಂಬರ್‌ 5ಕ್ಕೆ ಮುಂದೂಡಿದೆ. ಹಿರಿಯ ವಕೀಲರಾದ ಡಾ. ಅಭಿಷೇಕ್‌ ಮನು ಸಿಂಘ್ವಿ ಮತ್ತು ದುಷ್ಯಂತ್‌ ದವೆ ಅವರ ಕೋರಿಕೆಯ ಹಿನ್ನೆಲೆಯಲ್ಲಿ ಮೇಲ್ಮನವಿಗಳ ವಿಚಾರಣೆಯನ್ನು ನವೆಂಬರ್‌ 23ಕ್ಕೆ ನ್ಯಾಯಾಲಯ ನಿಗದಿಪಡಿಸಿತ್ತು.

ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠದ ಮುಂದೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಪ್ರಕರಣ ಉಲ್ಲೇಖಿಸಿದರು. ‌

“ವೈಯಕ್ತಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲ್ಮನವಿಯ ವಿಚಾರಣೆಯನ್ನು ಮುಂದೂಡಬೇಕು. ಈ ವಿಚಾರವನ್ನು ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರ ಗಮನಕ್ಕೆ ತಂದಿದ್ದೇನೆ” ಎಂದು ಮೆಹ್ತಾ ಪೀಠಕ್ಕೆ ವಿವರಿಸಿದರು. ಇದಕ್ಕೆ ಸಿಂಘ್ವಿ ಸಹಮತ ವ್ಯಕ್ತಪಡಿಸಿದರು.

ಈ ಮಧ್ಯೆ, ಭೂ ಮಾಲೀಕ ದೇವರಾಜು ಪ್ರತಿನಿಧಿಸಿರುವ ಹಿರಿಯ ವಕೀಲ ದುಷ್ಯಂತ್‌ ದವೆ ಅವರು “ನಮ್ಮ ಮೇಲ್ಮನವಿಗಳ ವಿಚಾರಣೆಯನ್ನು ನಿಗದಿಯಂತೆ ನಾಳೆಯೇ ನಡೆಸಬೇಕು. ಏಕೆಂದರೆ ಸಿಬಿಐ ತನಿಖೆಗೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯು ಏಕಸದಸ್ಯ ಪೀಠದ (ನ್ಯಾ. ಎಂ ನಾಗಪ್ರಸನ್ನ) ಮುಂದೆ ನವೆಂಬರ್‌ 26ಕ್ಕೆ ವಿಚಾರಣೆಗೆ ನಿಗದಿಯಾಗಿದೆ. ಅಲ್ಲಿನ ಆದೇಶವು ನಮಗೆ ಬಾಧಕವಾಗುತ್ತದೆ” ಎಂದರು.

ಆಗ ಪೀಠವು “ಡಾ. ಸಿಂಘ್ವಿ, ಮೆಹ್ತಾ ಮತ್ತು ಹಿರಿಯ ವಕೀಲ ಮಣೀಂದರ್‌ ಸಿಂಗ್‌ ಎಲ್ಲರೂ ಸ್ನೇಹಿತರಿದ್ದೀರಿ. ಚರ್ಚಿಸಿ, ಹೊಂದಾಣಿಕೆ ಮಾಡಿಕೊಳ್ಳಿ” ಎಂದು ಸೂಚಿಸಿ, ವಿಚಾರಣೆಯನ್ನು ಡಿಸೆಂಬರ್‌ 5ಕ್ಕೆ ಮರು ನಿಗದಿಗೊಳಿಸಿತು.

ಈ ನಡುವೆ, ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಸಿಎಂ ಮೇಲ್ಮನವಿ ವಿಚಾರಣೆ ಮುಂದೂಡಿಕೆಗೆ ಆಕ್ಷೇಪವಿಲ್ಲ. ಆದರೆ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು” ಎಂದು ಕೋರಿದರು. “ವಾದ ಆಲಿಸದೇ ಮಧ್ಯಂತರ ಆದೇಶ ಮಾಡುವುದಿಲ್ಲ” ಎಂದು ನ್ಯಾಯಾಲಯವು ಕೋರಿಕೆ ತಿರಸ್ಕರಿಸಿತು.

ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಮೇಲ್ಮನವಿಗಳು ಶನಿವಾರಕ್ಕೆ ವಿಚಾರಣೆಗೆ ನಿಗದಿಯಾಗಿವೆ. ತಾಂತ್ರಿಕ ಕಾರಣಗಳಿಂದ ಮೇಲ್ಮನವಿಗಳು ವಿಚಾರಣೆ ಪಟ್ಟಿಯಾಗಿವೆ. ಯಾವುದೇ ಬೆಳವಣಿಗೆಯಾಗುವುದಿಲ್ಲ ಎಂದು ಹೈಕೋರ್ಟ್‌ ಮೂಲಗಳು ತಿಳಿಸಿವೆ.