ಪೋಕ್ಸೊ ಪ್ರಕರಣದ ಸಂತ್ರಸ್ತೆಯ ತಾಯಿಯಾದ ದೂರುದಾರೆ ಹಾಗೂ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಡುವಿನ ಮೊಬೈಲ್ ರೆಕಾರ್ಡಿಂಗ್ ಸಂಭಾಷಣೆಯು ಆತಂಕಕಾರಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಮೌಖಿಕವಾಗಿ ಹೇಳಿತು.
ಪೋಕ್ಸೊ ಪ್ರಕರಣ ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆ ರದ್ದತಿ ಕೋರಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವೈ ಎಂ ಅರುಣ, ರುದ್ರೇಶ ಮರಳಸಿದ್ದಯ್ಯ ಮತ್ತು ಜಿ ಮರಿಸ್ವಾಮಿ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಆದೇಶವನ್ನು ಕಾಯ್ದಿರಿಸಿತು.
ಬಿಎಸ್‌ವೈ ಪರವಾಗಿ ಪ್ರತ್ಯುತ್ತರ ದಾಖಲಿಸಿದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ತನ್ನ ಪುತ್ರಿಯೊಂದಿಗೆ (ಸಂತ್ರಸ್ತೆ) ಬಂದಿದ್ದ ದೂರುದಾರೆ (ಸಂತ್ರಸ್ತೆಯ ತಾಯಿ) ಅಹವಾಲು ಕೇಳಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕರೆ ಮಾಡಿ, ಕ್ರಮಕೈಗೊಳ್ಳುವಂತೆ ಬಿಎಸ್‌ವೈ ಸೂಚಿಸಿದ್ದರು. ಒಂದೊಮ್ಮೆ ಬಿಎಸ್‌ವೈ ಸಂತ್ರಸ್ತೆಗೆ ಕಿರುಕುಳ ನೀಡಿದ್ದರೆ ಪೊಲೀಸ್ ಆಯುಕ್ತರ ಬಳಿಗೆ ತೆರಳಿದ್ದಾಗ ಅವರು ಈ ವಿಚಾರವನ್ನು ಏಕೆ ತಿಳಿಸಲಿಲ್ಲ? ಇದು ಅನುಮಾನ ಹುಟ್ಟಿಸುತ್ತದೆ” ಎಂದರು.
“ಇದಾದ ಬಳಿಕ 2024ರ ಫೆಬ್ರವರಿ 5ರಂದು ಮತ್ತೆ ಬಿಎಸ್‌ವೈ ನಿವಾಸಕ್ಕೆ ದೂರುದಾರೆ ಬಂದಿದ್ದರು. ಫೆಬ್ರವರಿ 2ರಂದು ಬಿಎಸ್‌ವೈ ಅವರು ಸಂತ್ರಸ್ತೆಗೆ ಕಿರುಕುಳ ನೀಡಿದ್ದರೆ ಮತ್ತೆ ಬಿಎಸ್‌ವೈ ಮನೆಗೆ ಬರುತ್ತಿದ್ದರೆ? ಸಂತ್ರಸ್ತೆಯನ್ನು ಕೊಠಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಬಳಿಕ ತೆರಳಿದ್ದ ಸಂತ್ರಸ್ತೆ ಮತ್ತು ಆಕೆಯ ತಾಯಿಯು ಅಂದೇ ಮತ್ತೆ ಬಿಎಸ್‌ವೈ ಮನೆಗೆ ಬಂದಿದ್ದರು. ಸಂತ್ರಸ್ತೆಯು ಬಿಎಸ್‌ವೈ ಕಿರುಕುಳ ನೀಡಿದ ವಿಚಾರವನ್ನು ತಾಯಿಗೆ ತಿಳಿಸಿದ್ದರಿಂದ ಪ್ರಶ್ನಿಸಿಲು ಬಂದಿದ್ದರು ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ಆದರೆ, ಅವರು ಬಿಎಸ್‌ವೈ ಜೊತೆ ಫೋಟೊ ತೆಗೆದುಕೊಳ್ಳಲು ಬಂದಿದ್ದರು” ಎಂದರು.
ಈ ಸಂದರ್ಭದಲ್ಲಿ ಪೀಠವು “ಸಂತ್ರಸ್ತೆ ಮತ್ತು ಆಕೆಯ ತಾಯಿ ಫೋಟೊ ತೆಗೆದುಕೊಳ್ಳಲು ಮಾತ್ರ ಬಂದಿರಲಿಲ್ಲ. ಸಂತ್ರಸ್ತೆಯ ತಾಯಿ ಮತ್ತು ಬಿಎಸ್‌ವೈ ನಡುವಿನ ಸಂಭಾಷಣೆಯ ರೆಕಾರ್ಡಿಂಗ್ ಕೇಳಬೇಕು. ತನಿಖಾಧಿಕಾರಿಯ ಪ್ರಶ್ನೆಗಳಿಗೆ ಬಿಎಸ್‌ವೈ ಉತ್ತರಿಸಿರುವುದನ್ನು ನೋಡಬೇಕು” ಎಂದಿತು. ಇದಕ್ಕೆ ನಾಗೇಶ್ ಅವರು “ಮೊಬೈಲ್ ಫೋನ್ ರೆಕಾರ್ಡಿಂಗ್ ಅನ್ನು ನಿರಾಕರಿಸುತ್ತಿಲ್ಲ. ಆದರೆ, ಫೆಬ್ರವರಿ 5ರಂದು ಸಂತ್ರಸ್ತೆ ಮತ್ತು ದೂರುದಾರೆ ಇಬ್ಬರೂ ಬಿಎಸ್‌ವೈ ಜೊತೆ ಫೋಟೊ ತೆಗೆದುಕೊಳ್ಳಲು ಬಂದಿದ್ದರು” ಎಂದು ಪುನರುಚ್ಚರಿಸಿದರು.
ಈ ಹಂತದಲ್ಲಿ ಪೀಠವು “ರೆಕಾರ್ಡಿಂಗ್‌ನಲ್ಲಿ ಧ್ವನಿ ಮತ್ತು ಬಿಎಸ್‌ವೈ ಅವರ ಧ್ವನಿ ಮಾದರಿ ಹೊಂದಾಣಿಕೆಯಾಗಿದೆ. ಒಂದೊಮ್ಮೆ ಧ್ವನಿ ಮಾದರಿ ಇತ್ಯಾದಿಯನ್ನು ನೀವು (ಬಿಎಸ್‌ವೈ) ಒಪ್ಪಿಕೊಳ್ಳುವುದಾದರೆ ದೂರುದಾರೆ ಹಾಕಿರುವ ಪ್ರಶ್ನೆಗಳು ಮತ್ತು ಅದಕ್ಕೆ ನೀವು ಉತ್ತರಿಸಿರುವುದನ್ನೂ ಒಪ್ಪಿಕೊಳ್ಳಬೇಕು” ಎಂದಿತು.
ಇನ್ನು, ಸಂತ್ರಸ್ತೆಯನ್ನು ಕೊಠಡಿಗೆ ಕರೆದೊಯ್ದು ಆಕೆಯ ಎದೆಯ ಭಾಗಕ್ಕೆ ಬಿಎಸ್‌ವೈ ಕೈಹಾಕಿ ಪರಿಶೀಲಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಇದಕ್ಕೆ ಆಕ್ಷೇಪಿಸಿದ ನಾಗೇಶ್ ಅವರು “ಹಿಂದಿನ ಅತ್ಯಾಚಾರ ಪ್ರಕರಣದ ಕುರಿತು ಪರಿಶೀಲಿಸುವಂತೆ (ಚೆಕ್) ಸಂತ್ರಸ್ತೆಯ ತಾಯಿ ಕೇಳಿದ್ದರು. ಈ ಚೆಕ್ ಎಂಬ ವಿಚಾರ ಆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ” ಎಂದರು. ಆಗ ಪೀಠವು “ನಿಮ್ಮ ಪ್ರಕಾರ ಹಿಂದಿನ ಪ್ರಕರಣ ಚೆಕ್ ಮಾಡಲು ದೂರುದಾರೆ ಕೇಳಿದ್ದಾರೆ. ನೀವು ಅದನ್ನು ಚೆಕ್ ಮಾಡಿದ್ದೀರಿ. ಅದು ಆ ಚೆಕ್” ಎಂದು ಮಾರ್ಮಿಕವಾಗಿ ನುಡಿಯಿತು.
ಮುಂದುವರಿದು ಪೀಠವು “ಲೈಂಗಿಕ ಕಿರುಕುಳ ನಡೆದಿರುವ ಸಾಧ್ಯತೆ ಅತ್ಯಂತ ಕ್ಷೀಣ ಎಂದು ನೀವು ಹೇಳುತ್ತಿದ್ದೀರಾ?” ಎಂದು ನಾಗೇಶ್ ಅವರಿಗೆ ಪ್ರಶ್ನಿಸಿತು. ಅದಕ್ಕೆ ನಾಗೇಶ್ ಅವರು “ಒಂದೂವರೆ ತಿಂಗಳು ಕಾದು ಆನಂತರ ದೂರು ನೀಡಿರುವುದನ್ನು ಗಮನಿಸಬೇಕು. ಐದು ಸಾಕ್ಷಿಗಳನ್ನು ಬಿಟ್ಟು ಸಂತ್ರಸ್ತೆಯ ಹೇಳಿಕೆಯನ್ನೇ ಏಕೆ ಆಧರಿಸಬೇಕು? ನ್ಯಾಯಾಲಯವು ತನಿಖಾಧಿಕಾರಿಯಿಂದ ಕೇಸ್ ಡೈರಿ ತರಿಸಿಕೊಂಡು ಪರಿಶೀಲಿಸಬೇಕು. ದೂರುದಾರೆ ಸಾವನ್ನಪ್ಪುವವರೆಗೆ ಕಾಯ್ದು ಪ್ರಕರಣ ವಜಾಗೆ ಅರ್ಜಿ ಹಾಕಲಾಗಿದೆ ಎಂಬುದನ್ನು ಒಪ್ಪಲಾಗದು. ಆಕೆ ಸಾಯುತ್ತಾರೆ ಎಂದು ನಮಗೆ ಗೊತ್ತಿತ್ತೇ?” ಎಂದು ಹೇಳಿ ಪ್ರತ್ಯುತ್ತರ ಪೂರ್ಣಗೊಳಿಸಿದರು.
ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್ ಅವರು “ಬಿಎಸ್‌ವೈ ನಿರ್ದೇಶನದಂತೆ ಪ್ರಕರಣದ ಇತರೆ ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಬೆದರಿಕೆ ಹಾಕಿ ಮನೆಗೆ ಕರೆಸಿಕೊಂಡು, ಅವರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಸಂಭಾಷಣೆಯ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಇದಕ್ಕೆ ಪೂರಕವಾದ ಡಿಜಿಟಲ್ ದಾಖಲೆಗಳು ಲಭ್ಯವಿದೆ” ಎಂದರು.
ದೂರುದಾರೆಯ ಪರವಾಗಿ ವಾದಿಸಲು ವಕಾಲತ್ತು ಹಾಕಿದ್ದ ವಕೀಲ ಎಸ್ ಬಾಲನ್ ಅವರು ಪ್ರೊ. ರವಿವರ್ಮಕುಮಾರ್ ಅವರ ವಾದವನ್ನೇ ಆಧರಿಸುವುದಾಗಿ ಹೇಳಿದ್ದರಿಂದ ನ್ಯಾಯಾಲಯವು ಮಧ್ಯಂತರ ಆದೇಶ ವಿಸ್ತರಿಸಿ, ಆದೇಶ ಕಾಯ್ದಿರಿಸಿತು.
ದೂರಿನ ಸಾರಾಂಶ: ಸಂತ್ರಸ್ತೆಯ ತಾಯಿ ನೀಡಿದ್ದ ದೂರಿನ ಅನ್ವಯ ಸಂತ್ರಸ್ತೆಯ ಮೇಲೆ ಈ ಹಿಂದೆ ಅತ್ಯಾಚಾರವಾಗಿದ್ದು, ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ನೆರವಾಗುವಂತೆ ಕೋರಲು ಸಂತ್ರಸ್ತೆ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರನ್ನು 2024ರ ಫೆಬ್ರವರಿ 2ರಂದು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಮ್ಮ ಜೊತೆ ಒಂಭತ್ತು ನಿಮಿಷ ಮಾತನಾಡಿ, ನಮಗೆ ಟೀ ಕುಡಿಸಿದರು. ಆನಂತರ ನನ್ನ ಮಗಳನ್ನು ಕೊಠಡಿಗೆ ಕರೆದೊಯ್ದು ಚಿಲಕ ಹಾಕಿಕೊಂಡಿದ್ದರು. ಈ ವೇಳೆ ಆಕೆಯ ಬಲಭಾಗದ ಸ್ತನವನ್ನು ಸ್ಪರ್ಶಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಆಕೆ ಹೊರಹೋಗಲು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಳು. ಆನಂತರ ಯಡಿಯೂರಪ್ಪ ಅವರೇ ಬಾಗಿಲು ತೆರೆದಿದ್ದು, ತಕ್ಷಣ ಓಡಿ ಬಂದ ನನ್ನ ಪುತ್ರಿ ಘಟನೆಯನ್ನು ವಿವರಿಸಿದಳು ಎಂದು ದೂರಲಾಗಿತ್ತು.
ಈ ಕುರಿತು ಯಡಿಯೂರಪ್ಪ ಅವರನ್ನು ಪ್ರಶ್ನಿಸಲಾಗಿ ಅದಕ್ಕೆ ಅವರು ನಿಮ್ಮ ಮಗಳಿಗೆ ರೇಪ್ ಆಗಿದೆಯೋ? ಇಲ್ಲವೋ? ಎಂಬುದನ್ನು ಚೆಕ್ ಮಾಡಲು ಹಾಗೆ ಮಾಡಿದೆ ಎಂದರು. ತಕ್ಷಣ ನಮ್ಮ ಕ್ಷಮೆಯಾಚಿಸಿದ ಯಡಿಯೂರಪ್ಪ ಅವರು ನಿಮಗೆ ಮೋಸ ಆಗಿರುವ ಬಗ್ಗೆ ಸಹಾಯ ಮಾಡುತ್ತೇನೆ ಎಂದರು. ಇದಕ್ಕೆ ನಾನು ಒಪ್ಪಲಿಲ್ಲ. ಅದಾಗ್ಯೂ, ಯಡಿಯೂರಪ್ಪ ಅವರು ಈ ವಿಚಾರವನ್ನು ಹೊರೆಗೆ ಬಾಯಿ ಬಿಡದಂತೆ ತಡೆಯಲು ತುಂಬಾ ಪ್ರಯತ್ನಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್ 354 (ಎ) ಅಡಿ (ಲೈಂಗಿಕ ಕಿರುಕುಳ) ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಆನಂತರ ಪ್ರಕರಣದ ತನಿಖೆ ನಡೆಸಿ, ಸಿಐಡಿಯು ಆರೋಪ ಪಟ್ಟಿ ಸಲ್ಲಿಸಿತ್ತು. ವಿಚಾರಣಾಧೀನ ನ್ಯಾಯಾಲಯವು ಇದರ ಸಂಜ್ಞೇ ಪರಿಗಣಿಸಿದೆ. ಇದರ ರದ್ದತಿಗೆ ಬಿಎಸ್‌ವೈ ಕೋರಿದ್ದಾರೆ.