
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪೋಕ್ಸೊ ಪ್ರಕರಣದ ದೂರುದಾರೆ ಸಾವನ್ನಪ್ಪಿದ ಬಳಿಕ ಅಳೆದು ತೂಗಿ ಪ್ರಕರಣ ರದ್ದತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಬುಧವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಆಕ್ಷೇಪಿಸಿತು.
ಪೋಕ್ಸೊ ಪ್ರಕರಣ ರದ್ದತಿ ಕೋರಿ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಬಿಎಸ್‌ವೈ ಮತ್ತು ದೂರುದಾರೆ (ಸಂತ್ರಸ್ತೆಯ ತಾಯಿ) ನಡುವಿನ ಸಂಭಾಷಣೆಯ ವಿಡಿಯೋ ಅಸಲಿಯಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಖಾತರಿಪಡಿಸಿದೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರ ಕುರಿತು ಸಂತ್ರಸ್ತೆಯ ತಾಯಿ ಪ್ರಶ್ನಿಸಿದಾಗ ಬಿಎಸ್‌ವೈ ಹಣ ನೀಡಿದ್ದಾರೆ” ಎಂದರು.
“ದೂರುದಾರೆ ಸಾವನ್ನಪ್ಪುವವರೆಗೆ ಬಿಎಸ್‌ವೈ ಗೌಪ್ಯವಾಗಿದ್ದರು. ಜೂನ್ 12ರಂದು ಅರ್ಜಿ ಸಲ್ಲಿಸಲಾಗಿದ್ದು, ಆ ಬಳಿಕ ಒಂದು ತಿಂಗಳ ನಂತರ ಸ್ವಯಂ ಅಫಿಡವಿಟ್ ಹಾಕಲಾಗಿದೆ. ಅರ್ಜಿಯನ್ನು ಪರಿಶೀಲಿಸಿಲ್ಲವಾದ್ದರಿಂದ ಅದನ್ನು ವಜಾ ಮಾಡಬೇಕು. ದೂರುದಾರೆ ಸತ್ತ ಬಳಿಕ ಅಳೆದು ತೂಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ” ಎಂದರು.
“ವಿಡಿಯೊದಲ್ಲಿನ ದೂರುದಾರೆ ಮತ್ತು ಬಿಎಸ್‌ವೈ ಧ್ವನಿ ಮಾದರಿ ಹೊಂದಾಣಿಕೆಯಾಗಿದೆ. ಮೊಬೈಲ್ ಅನ್ನು ಗುಜರಾತ್‌ನ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ಖಾತರಿಪಡಿಸಲಾಗಿದೆ” ಎಂದರು.
“ದೂರುದಾರೆಗೆ 9,000 ರೂಪಾಯಿ ಪಾವತಿಸಿದ್ದೇನೆ ಎಂದು ಬಿಎಸ್‌ವೈ ಹೇಳಿದ್ದಾರೆ. ಪುತ್ರಿಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಸಂತ್ರಸ್ತೆಯ ತಾಯಿ ವಕೀಲ ಹಿರೇಮಠ ಅವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಯಡಿಯೂರಪ್ಪ ಸಂತ್ರಸ್ತೆಯನ್ನು ಕರೆದೊಯ್ದ ರೂಮಿನ ಚಿತ್ರಣವನ್ನು ಸಂತ್ರಸ್ತೆ ನೀಡಿದ್ದು, ಅದನ್ನು ಬಿಎಸ್‌ವೈ ಖಾತರಿಪಡಿಸಿದ್ದಾರೆ. ಯಡಿಯೂರಪ್ಪ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರೆ ಇನ್ನಷ್ಟು ಮಾಹಿತಿ ಹೊರಗೆ ಬರುತ್ತಿತ್ತು” ಎಂದರು.
ಆಗ ಪೀಠವು “ನಿಮ್ಮ ಪ್ರಕಾರ ಕನಿಷ್ಠ ವಿಚಾರಣೆ ನಡೆಯಬೇಕು” ಎಂಬುದಾಗಿದೆ ಎಂದಿತು. ಅದಕ್ಕೆ ಪ್ರೊ. ಕುಮಾರ್ ಅವರು ಹೌದು ಎಂದರು. ಅಂತಿಮವಾಗಿ ಪೀಠವು ಫೆಬ್ರವರಿ 25ರ ಒಳಗೆ ವಿಚಾರಣೆ ನಡೆಸಿ, ಆದೇಶ ಮಾಡಲಾಗುವುದು ಎಂದು ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಿತು.
ಅಡ್ವೊಕೇಟ್ ಜನರಲ್ ಅವರ ವಾದ ಆಲಿಸಿ ಬಿಎಸ್‌ವೈ ಬಂಧಿಸದಂತೆ ಮಧ್ಯಂತರ ಆದೇಶ ಮಾಡಲಾಗಿದೆ. ಅರ್ಜಿದಾರರು ಟಾಮ್ ಡಿಕ್ ಅಂಡ್ ಹ್ಯಾರಿಯೇ ಎಂದು ನ್ಯಾಯಮೂರ್ತಿಗಳು (ನ್ಯಾ. ಕೃಷ್ಣ ದೀಕ್ಷಿತ್) ಪ್ರಶ್ನಿಸಿದ್ದಾರೆ. ನಾನು 50 ವರ್ಷಗಳಿಂದ ವಕೀಲನಾಗಿದ್ದು, ಈ ನ್ಯಾಯತತ್ವವು ಕಾನೂನಿಗೆ ಹೊಸತು... ನ್ಯಾಯಮೂರ್ತಿಗಳ ಇಂಥ ಅಭಿಪ್ರಾಯದಿಂದ ನನಗೆ ಬೇಸರವಾಗಿದೆ. ಇಂಥ ಅಭಿಪ್ರಾಯಗಳು ಸಾಂವಿಧಾನಿಕ ನ್ಯಾಯಾಲಯದಿಂದ ಬರಬಾರದಿತ್ತು. ಅದು ತಪ್ಪು ಸಂದೇಶಕ್ಕೆ ಎಡೆ ಮಾಡಿಕೊಡುತ್ತದೆ” ಎಂದರು.
ಇದಕ್ಕೆ ನ್ಯಾ. ನಾಗಪ್ರಸನ್ನ ಅವರು “ಹಿಂದಿನ ಪೀಠ. ನೀವು ಎಷ್ಟೇ ದೊಡ್ಡವರಾದರೂ ನನಗೆ ಕಾನೂನಿಗಿಂತ ಯಾರೂ ಮೇಲಲ್ಲ. ಕೆಲವೊಮ್ಮೆ ಹೀಗಾಗುತ್ತದೆ. ನ್ಯಾ. ದೀಕ್ಷಿತ್ ಅವರು ಈ ನ್ಯಾಯಾಲಯದ ಪಾಂಡಿತ್ಯಪೂರ್ಣ ನ್ಯಾಯಮೂರ್ತಿಗಳು” ಎಂದರು.