ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್) ಹಣ ದುರ್ಬಳಕೆ ಪ್ರಕರಣದ ಜೊತೆಗೆ ಸರ್ಕಾರದ ಇತರೆ ಇಲಾಖೆಗಳಲ್ಲಿನ ಹಣವನ್ನು ಮಾಜಿ ಸಚಿವ ಬಿ ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್ ಖಾತೆಗೆ ವರ್ಗಾಯಿಸಿರುವುದರ ಕುರಿತು ಸಿಬಿಐ ತನಿಖೆಗೆ ವಹಿಸಿರುವ ಮಧ್ಯಂತರ ಆದೇಶವನ್ನು ಹಿಂಪಡೆಯಬೇಕು ಎಂದು ಕೋರಿರುವ ಮಧ್ಯಂತರ ಅರ್ಜಿಯ ಆದೇಶವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ.
ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿಯ ನಾಯಕರಾದ ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅವರು ವಾಲ್ಮೀಕಿ ಹಗರಣದ ಸಂಬಂಧ ಸಿಬಿಐ ದಾಖಲಿಸಿರುವ ದೂರನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂತೆ ಕೋರಿದ್ದ ಅರ್ಜಿಯ ಸಂಬಂಧ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು 2025ರ ಜುಲೈ 2ರಂದು ಮಧ್ಯಂತರ ಆದೇಶ ಮಾಡಿತ್ತು.
ಇದರಲ್ಲಿ ಸಿಬಿಐ ತನಿಖೆಗೆ ಅಸ್ತು ಎಂದಿದ್ದ ನ್ಯಾಯಾಲಯವು ಸರ್ಕಾರದ ಇತರೆ ಸಂಸ್ಥೆಗಳ ಹಣವನ್ನು ವರ್ಗಾವಣೆ ಮಾಡಿರುವುದು ಪತ್ತೆಯಾಗಿದ್ದು, ಬೆಂಗಳೂರಿನ ಕೆನರಾ ಬ್ಯಾಂಕ್‌ನಲ್ಲಿನ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ (ಕೆಜಿಟಿಟಿಐ) ₹95 ಲಕ್ಷವನ್ನು ಮಧ್ಯಸ್ಥಿಕೆ ಖಾತೆಗಳ ಮೂಲಕ ಮಾಜಿ ಸಚಿವ ಬಿ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಖಾತೆಗೆ ವರ್ಗಾಯಿಸಲಾಗಿದೆ. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ₹2.17 ಕೋಟಿಯನ್ನು ವಾಲ್ಮೀಕಿ ನಿಗಮದ ಬೆಂಗಳೂರಿನ ಸಿದ್ದಯ್ಯ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಮೂಲಕ ನೆಕ್ಕಂಟಿ ನಾಗರಾಜ್ ಖಾತೆಗೆ ವರ್ಗಾಯಿಸಲಾಗಿದೆ ಎಂಬ ಆರೋಪದ ಕುರಿತೂ ತನಿಖೆಗೆ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ನೆಕ್ಕಂಟಿ ನಾಗರಾಜ್ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ನೆಕ್ಕಂಟಿ ಪರವಾಗಿ ಇಂದು ವಾದಿಸಿದ ಹಿರಿಯ ವಕೀಲ ಹಷ್ಮತ್ ಪಾಷಾ ಅವರು “ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಈ ಪ್ರಕರಣಕ್ಕೆ ಸೀಮಿತವಾಗಿ ಸಿಬಿಐ ತನಿಖೆ ನಡೆಸಬೇಕು. ಕೆಜಿಟಿಟಿಐನ ₹95 ಲಕ್ಷ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ₹2.17 ಕೋಟಿಯು ಬೇರೆ ಖಾತೆಗಳಿಂದ ಬಿ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬ ಆರೋಪದ ಕುರಿತು ಸಿಬಿಐ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಬೇಕು” ಎಂದರು.
“ಹೀಗೆ ಮಾಡುವುದರಿಂದ ನೆಕ್ಕಂಟಿ ನಾಗರಾಜ್ ಅವರಿಗೆ ಎಫ್‌ಐಆರ್ ಪ್ರಶ್ನಿಸಲು ಅವಕಾಶ ಸಿಗಲಿದೆ. ಆದರೆ, ಈಗ ಪ್ರತಿದಿನ ನೆಕ್ಕಂಟಿ ಮತ್ತು ಅವರ ಸಂಬಂಧಿಗಳಿಗೆ ತನಿಖೆಯ ನೆಪದಲ್ಲಿ ಸಿಬಿಐ ಕಿರುಕುಳ ನೀಡುತ್ತಿದೆ. ಎಫ್‌ಐಆರ್‌ನಲ್ಲಿ ನೆಕ್ಕಂಟಿ ಸೇರಿ ಬೇರೆ ಯಾರ ಹೆಸರು ಇಲ್ಲದಿದ್ದರೂ ತನಿಖೆಯ ನೆಪದಲ್ಲಿ ಸಮಸ್ಯೆ ಉಂಟು ಮಾಡಲಾಗುತ್ತಿದೆ. ಎಫ್‌ಐಆರ್ ವ್ಯಾಪ್ತಿ ಮೀರಿ ಸಿಬಿಐ ವರ್ತಿಸುತ್ತಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ನಮ್ಮ ಮಧ್ಯಂತರ ಅರ್ಜಿ ಪುರಸ್ಕರಿಸಿ, ನ್ಯಾಯಾಲಯವು ಜುಲೈ 2ರ ತನ್ನ ಆದೇಶ ಹಿಂಪಡೆಯಬೇಕು” ಎಂದು ಕೋರಿದರು.
ಅದಕ್ಕೆ ಪೀಠವು “ಎಫ್‌ಐಆರ್ ಬ್ಯಾಂಕ್ ಅಧಿಕಾರಿಗಳಿಗೆ ಸೀಮಿತವಾಗಿದೆ. ಆದರೆ, ಆರೋಪ ಪಟ್ಟಿಯೂ ಬ್ಯಾಂಕ್ ಅಧಿಕಾರಿಗಳಿಗೆ ಸೀಮಿತವಾಗಿರಬೇಕಿಲ್ಲ. ತನಿಖೆಯ ನೆಪದಲ್ಲಿ ನಿಮ್ಮ ಬಳಿ ಸಿಬಿಐ ಬಾರಬಾರದೇ? ಇದು ಮಾತ್ರ ತನಿಖೆ ಮಾಡಿ, ಅದನ್ನು ಮಾಡಿ ಎಂದು ನೀವೆ ಹೇಳಬೇಕೆ? ತನಿಖೆಯ ಸಂದರ್ಭದಲ್ಲಿ ಬೇರೆಬೇರೆ ವಿಚಾರಗಳು ಪತ್ತೆಯಾದರೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕೆ?” ಎಂದಿತು.
ಈ ಮಧ್ಯೆ, ಮೂಲ ಅರ್ಜಿದಾರರಾದ ಬಿಜೆಪಿ ನಾಯಕರ ಪರ ವಕೀಲ ವೆಂಕಟೇಶ್ ದಳವಾಯಿ ಅವರು “ಎಫ್‌ಐಆರ್ ಎನ್‌ಸೈಕ್ಲೋಪಿಡಿಯಾವಲ್ಲ. ಅದರಲ್ಲಿ ಎಲ್ಲವನ್ನೂ ಉಲ್ಲೇಖಿಸಲಾಗುವುದಿಲ್ಲ. ತನಿಖೆಯ ಸಂದರ್ಭದಲ್ಲಿ ಪತ್ತೆಯಾಗುವ ಅಂಶಗಳ ಜಾಡನ್ನು ತನಿಖಾ ಸಂಸ್ಥೆ ಹಿಡಿಯುತ್ತದೆ. ಇದು ಹಣ ವರ್ಗಾವಣೆ ಪ್ರಕರಣವಾಗಿದ್ದು, ಯಾರೆಲ್ಲರ ಬಳಿ ಹಣ ಹೋಗಿದೆ ಎಂಬುದನ್ನು ನೋಡಬೇಕು. ಇಲ್ಲಿ, ಪ್ರತ್ಯೇಕ ಎಫ್‌ಐಆರ್ ಅಗತ್ಯವಿಲ್ಲ” ಎಂದು ಸಮರ್ಥಿಸಿದರು.
ಸಿಬಿಐ ಪ್ರತಿನಿಧಿಸಿದ್ದ ವಕೀಲ ರಾಹುಲ್ ರೆಡ್ಡಿ ಅವರು ಆಕ್ಷೇಪಣೆ ಸಲ್ಲಿಸಲಾಗುವುದು ಎಂದರು. ಎಲ್ಲರ ವಾದ ಆಲಿಸಿದ ನ್ಯಾಯಾಲಯವು ಮಧ್ಯಂತರ ಅರ್ಜಿಯ ಆದೇಶ ಕಾಯ್ದಿರಿಸಿತು.