ವಾಲ್ಮೀಕಿ ನಿಗಮ ಹಗರಣ: ಸಿಬಿಐಗೆ ವಿಧಿ ವಿಜ್ಞಾನ ಮಾಹಿತಿ, ದಾಖಲೆ ಒದಗಿಸಲು ಸಿಐಡಿ, ಇಡಿಗೆ ನಿರ್ದೇಶನ

ಕೆಜಿಟಿಟಿಐನ ₹95 ಲಕ್ಷ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ₹2.17 ಕೋಟಿಯು ಬೇರೆ ಖಾತೆಗಳಿಂದ ಬಿ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್‌ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಸಿಬಿಐ ತನ್ನ ವಸ್ತುಸ್ಥಿತಿ ವರದಿಯಲ್ಲಿ ಉಲ್ಲೇಖಿಸಿದೆ.
ವಾಲ್ಮೀಕಿ ನಿಗಮ ಹಗರಣ: ಸಿಬಿಐಗೆ ವಿಧಿ ವಿಜ್ಞಾನ ಮಾಹಿತಿ, ದಾಖಲೆ ಒದಗಿಸಲು ಸಿಐಡಿ, ಇಡಿಗೆ ನಿರ್ದೇಶನ
Published on

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಹಣ ದುರ್ಬಳಕೆ ಪ್ರಕರಣದಲ್ಲಿನ ಹಣ ವರ್ಗಾವಣೆಯ ಒಳಸುಳಿ ಮತ್ತು ಪಿತೂರಿಯನ್ನು ಬಯಲುಗೊಳಿಸಲು ಕೇಂದ್ರೀಯ ತನಿಖಾ ದಳ (ಸಿಬಿಐ) ಕೋರಿರುವ ದಾಖಲೆಗಳು ಮತ್ತು ವಿಧಿವಿಜ್ಞಾನ ಮಾಹಿತಿಗಳನ್ನು (ಫೋರೆನ್ಸಿಕ್‌ ಇಮೇಜಸ್‌) ಒದಗಿಸಲು ಸಿಐಡಿ ಮತ್ತು ಜಾರಿ ನಿರ್ದೇಶನಾಲಯಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿಯ ನಾಯಕರಾದ ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್‌ ಬಂಗಾರಪ್ಪ ಸಲ್ಲಿಸಿರುವ ಅರ್ಜಿಯ ಭಾಗವಾಗಿ ಮಧ್ಯಂತರ ಅರ್ಜಿಯ ಮೂಲಕ ನಿರ್ದಿಷ್ಟ ಮನವಿ ಮಾಡಿದ್ದ ಸಿಬಿಐ ಕೋರಿಕೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice M Nagaprasanna
Justice M Nagaprasanna

“ಸಮಗ್ರ ತನಿಖೆ ನಡೆಸುವ ದೃಷ್ಟಿಯಿಂದ ಕ್ರಿಮಿನಲ್‌ ತನಿಖಾ ದಳ (ಸಿಐಡಿ), ಜಾರಿ ನಿರ್ದೇಶನಾಲಯ (ಇ ಡಿ), ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ (ಸಿಎಫ್‌ಎಸ್‌ಎಲ್‌), ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯ (ಎಸ್‌ಎಫ್‌ಎಸ್‌ಎಲ್‌) ಮತ್ತು ಸಕ್ಷಮ ನ್ಯಾಯಾಲಯಗಳು ಸಂಬಂಧಿತ ದಾಖಲೆಗಳು ಮತ್ತು ಸಿಬಿಐ ಕೋರಿರುವ ವಿಧಿವಿಜ್ಞಾನ ಮಾಹಿತಿಗಳನ್ನು ಲಭ್ಯವಾಗಿಸುವ ಮೂಲಕ ತನಿಖೆ ನಡೆಸಿ, ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು” ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

“ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಇತರರು ಭಾಗಿಯಾಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ₹89.63 ಕೋಟಿಯನ್ನು ವಾಲ್ಮೀಕಿ ನಿಗಮದಿಂದ 700 ಫಲಾನುಭವಿಗಳ ಖಾತೆಗೆ ವರ್ಗಾಯಿಸಿ, ದಾಖಲೆಗಳನ್ನು ತಿರುಚಿ, ಅದನ್ನು ಅಲ್ಲಿಂದ ಬೇರೆ ಖಾತೆಗಳಿಗೆ ವರ್ಗಾಯಿಸಿ, ಐಷಾರಾಮಿ ಕಾರುಗಳನ್ನು ಖರೀದಿಸಲು ಬಳಕೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ” ಎಂದು ಸಿಬಿಐ ವಸ್ತುಸ್ಥಿತಿ ವರದಿಯಲ್ಲಿ ವಿವರಿಸಿರುವುದನ್ನು ಹೈಕೋರ್ಟ್‌ ಆದೇಶದಲ್ಲಿ ಅಡಕಗೊಳಿಸಿದೆ.

Also Read
ವಾಲ್ಮೀಕಿ ನಿಗಮ ಹಗರಣ: ಸಿಬಿಐ ವಸ್ತುಸ್ಥಿತಿ ವರದಿ ಉಲ್ಲೇಖಿಸಿ ವಿಸ್ತೃತ ಆದೇಶ ಮಾಡುವ ಇಂಗಿತ ವ್ಯಕ್ತಪಡಿಸಿದ ಹೈಕೋರ್ಟ್‌

“700 ಖಾತೆಗಳ ಮೂಲಕ ಹಣಕಾಸು ದಾಖಲೆಗಳನ್ನು ತಿರುಚಿ, ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ದೊಡ್ಡ ಹಗರಣ ಇದಾಗಿದ್ದು, ಇಲ್ಲಿ ಬಹುದೊಡ್ಡ ಕ್ರಿಮಿನಲ್‌ ಪಿತೂರಿ ನಡೆದಿದೆ. ಇದನ್ನು ಬಯಲಿಗೆ ಎಳೆಯಲು ಸಮಗ್ರ ತನಿಖೆಯ ಅಗತ್ಯವಾಗಿದೆ. ಪಿತೂರಿಯನ್ನು ಬಯಲಿಗೆಳೆಯಲು ಸಿಐಡಿ ಮತ್ತು ಜಾರಿ ನಿರ್ದೇಶನಾಲಯವು ಸಂಗ್ರಹಿಸಿರುವ ಡಿಜಿಟಲ್‌ ಸಾಧನಗಳ ವಿಧಿವಿಜ್ಞಾನ ಚಿತ್ರಗಳು ಬೇಕಿದೆ. ಇದನ್ನು ನೀಡುವಂತೆ ಸಿಐಡಿ ಮತ್ತು ಇ ಡಿಗೆ ಮಾರ್ಚ್‌ 3ರಂದು ಕೋರಲಾಗಿದೆ. ಹೀಗಾಗಿ, ಸಿಐಡಿ, ಇಡಿ, ಸಿಎಫ್‌ಎಸ್‌ಎಲ್‌, ಎಸ್‌ಎಫ್‌ಎಸ್‌ಎಲ್‌ ಮತ್ತು ಸಕ್ಷಮ ನ್ಯಾಯಾಲಯಕ್ಕೆ ಪ್ರಮಾಣೀಕೃತ ದಾಖಲೆಗಳು ಮತ್ತು ಸಂಬಂಧಿತ ಜಫ್ತಿ ಮಾಡಿರುವ ಎಲ್ಲಾ ಡಿಜಿಟಲ್‌ ಸಾಧನಗಳ ವಿಧಿವಿಜ್ಞಾನ ಚಿತ್ರಗಳನ್ನು ನೀಡಲು ನಿರ್ದೇಶನ ನೀಡಬೇಕು” ಎಂದು ಸಿಬಿಐ ಕೋರಿತ್ತು.

“ತನಿಖೆಯ ಸಂದರ್ಭದಲ್ಲಿ ಸರ್ಕಾರದ ಇತರೆ ಸಂಸ್ಥೆಗಳ ಹಣವನ್ನು ವರ್ಗಾವಣೆ ಮಾಡಿರುವುದು ಪತ್ತೆಯಾಗಿದ್ದು, ಬೆಂಗಳೂರಿನ ಕೆನರಾ ಬ್ಯಾಂಕ್‌ನಲ್ಲಿನ ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆಯ (ಕೆಜಿಟಿಟಿಐ) ₹95 ಲಕ್ಷವನ್ನು ಮಧ್ಯಸ್ಥಿಕೆ ಖಾತೆಗಳ ಮೂಲಕ ಮಾಜಿ ಸಚಿವ ಬಿ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್‌ ಖಾತೆಗೆ ವರ್ಗಾಯಿಸಲಾಗಿದೆ. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ₹2.17 ಕೋಟಿಯನ್ನು ವಾಲ್ಮೀಕಿ ನಿಗಮದ ಬೆಂಗಳೂರಿನ ಸಿದ್ದಯ್ಯ ರಸ್ತೆಯಲ್ಲಿರುವ ಬ್ಯಾಂಕ್‌ ಆಫ್‌ ಬರೋಡಾದ ಮೂಲಕ ನೆಕ್ಕಂಟಿ ನಾಗರಾಜ್‌ ಖಾತೆಗೆ ವರ್ಗಾಯಿಸಲಾಗಿದೆ ಎಂದು ಸಿಬಿಐ ವಸ್ತುಸ್ಥಿತಿ ವರದಿಯಲ್ಲಿ ವಿವರಿಸಲಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

“ಈ ಅಂಶಗಳು ಪತ್ತೆಯಾಗಿರುವುದರಿಂದ ಕೆಜಿಟಿಟಿಐ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲು ನ್ಯಾಯಾಲಯ ಅನುಮತಿಸಬೇಕಿದೆ. ಸದ್ಯ ತನಿಖೆಯು ಪ್ರಾಥಮಿಕ ಹಂತದಲ್ಲಿದ್ದು, ಸಿಆರ್‌ಪಿಸಿ ಸೆಕ್ಷನ್‌ 173ರ ಅಡಿ ಸರ್ಕಾರಿ ಅಧಿಕಾರಿಗಳು ಮತ್ತು ಆರೋಪಿಗಳ ವಿರುದ್ಧ ಅಂತಿಮ ವರದಿಯನ್ನು ಸಲ್ಲಿಸಲಾಗುವುದು. ಇದಕ್ಕೆ ಅನುಮತಿಸಬೇಕು” ಎಂದು ಸಿಬಿಐ ಕೋರಿತ್ತು. ಇದಕ್ಕೆ ಹೈಕೋರ್ಟ್‌ ಅನುಮತಿಸಿದೆ.

ಪ್ರಕರಣದ ಹಿನ್ನೆಲೆ: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ ಸದ್ದು ಮಾಡುತ್ತಿದ್ದಂತೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು 1-6-2024ರಂದು ಸಿಬಿಐಗೆ ತನಿಖೆ ವಹಿಸುವಂತೆ ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿದ್ದರು. 3-6-2024ರಂದು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೆಲವು ಅಧಿಕಾರಿಗಳ ವಿರುದ್ಧ ದೂರು ನೀಡಿತ್ತು. ಇದನ್ನು ಆಧರಿಸಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಮತ್ತೊಂದೆಡೆ ಎಸ್‌ಐಟಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು 13-11-2024ರಂದು ಹೈಕೋರ್ಟ್‌ ವಜಾಗೊಳಿಸಿತ್ತು.

ಈ ನಡುವೆ, ಹಲವು ತಿಂಗಳಾದರೂ ಸಿಬಿಐ ತನಿಖೆ ಆರಂಭಿಸಿಲ್ಲ ಎಂದು ಯತ್ನಾಳ್‌, ರಮೇಶ ಜಾರಕಿಹೊಳಿ, ಅರವಿಂದ್‌ ಲಿಂಬಾವಳಿ ಮತ್ತು ಕುಮಾರ್‌ ಬಂಗಾರಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಹೈಕೋರ್ಟ್‌, ವಸ್ತುಸ್ಥಿತಿ ವರದಿ ಸಲ್ಲಿಸಲು ಸಿಬಿಐಗೆ ನಿರ್ದೇಶಿಸಿತ್ತು. ಇದರ ಭಾಗವಾಗಿ ನಾಲ್ಕು ವಸ್ತುಸ್ಥಿತಿ ವರದಿಗಳನ್ನು ಹೈಕೋರ್ಟ್‌ಗೆ ಸಿಬಿಐ ಸಲ್ಲಿಸಿದ್ದು, ಮಧ್ಯಂತರ ಅರ್ಜಿಯ ಮೂಲಕ ನಿರ್ದಿಷ್ಟ ದಾಖಲೆಗಳನ್ನು ನೀಡಲು ಕೋರಿತ್ತು. ಇದರ ಆಧಾರದಲ್ಲಿ ಹೈಕೋರ್ಟ್‌ ಮಂಗಳವಾರ ಆದೇಶ ಮಾಡಿದೆ.

ಬಿಜೆಪಿ ಮುಖಂಡರು ಸಿಬಿಐ ತನಿಖೆ ನಡೆಸಿ ಅಂತಿಮ ವರದಿಯನ್ನು ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಲು ಆದೇಶಿಸಬೇಕು. ಆನಂತರ ತುರ್ತು ವಿಚಾರಣೆಗೆ ಆದೇಶಿಸಬೇಕು ಎಂದು ಕೋರಿದ್ದಾರೆ.

ಅರ್ಜಿದಾರರ ಪರವಾಗಿ ವಕೀಲ ವೆಂಕಟೇಶ್‌ ದಳವಾಯಿ, ಸಿಬಿಐ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ವಾದಿಸಿದ್ದರು.

Kannada Bar & Bench
kannada.barandbench.com