Rahul Gandhi, Siddaramaiah and D K Shivakumar 
ಸುದ್ದಿಗಳು

ಬಿಜೆಪಿ ವಿರುದ್ಧ ಶೇ.40 ಕಮಿಷನ್ ಆರೋಪ: ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

“ಏನು ಶೇ.40 ಎಂದು ಹೇಳಿದ್ದಾರಾ? ಇದರಿಂದ 40 ಸೀಟು ಬಿಜೆಪಿಗೆ ಹೋದವೇ? ಅಲ್ಲಿಯವರೆಗೆ ಭ್ರಷ್ಟಾಚಾರದ ಆರೋಪ ಇರಲಿಲ್ಲವೇ? ಇದೇ ಮೊದಲ ಬಾರಿಗೆ ಬಂದಿತೇ? ಶೇ.40ರಷ್ಟು ಭ್ರಷ್ಟಾಚಾರ ಆರೋಪ ಮೊದಲ ಬಾರಿಗೆ ಮಾಡಲಾಯಿತೇ?” ಎಂದು ಪ್ರಶ್ನಿಸಿದ ಹೈಕೋರ್ಟ್‌.

Bar & Bench

ಬಿಜೆಪಿ ನೇತೃತ್ವದ ಈ ಹಿಂದಿನ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ನೀಡುವ ಮೂಲಕ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ದಾಖಲಿಸಲಾಗಿರುವ ಮಾನಹಾನಿ ಮೊಕದ್ದಮೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶ ಕಾಯ್ದಿರಿಸಿದೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿತು.

Justice M Nagaprasanna

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಕೆಸರು ಎರಚುವುದನ್ನು ನಿಲ್ಲಿಸಿ, ರಾಜಕಾರಣಿಗಳೆಲ್ಲರೂ ನೀತಿ-ನಿರೂಪಣೆ ಮಾಡುವ ಮೂಲಕ ಜನರ ಕಲ್ಯಾಣಕ್ಕೆ ಸಮಯ ವಿನಿಯೋಗಿಸಿದರೆ ಏನೇನೋ ಆಗುತ್ತಿತ್ತು. ಅದು ಬಿಟ್ಟು, ಇದು ಅವರಿಗೆ ಹೇಳಿದರು, ಅದು ಇವರಿಗೆ ಹೇಳಿದರು. ಕೋಮು ಭಾಷಣ ಬರೀ ಇದೆ ಆಯ್ತು” ಎಂದು ಬೇಸರಿಸಿತು.

“ಏನು ಶೇ.40 ಎಂದು ಹೇಳಿದ್ದಾರಾ? ಇದರಿಂದ 40 ಸೀಟು ಬಿಜೆಪಿಗೆ ಹೋದವೇ? ಅಲ್ಲಿಯವರೆಗೆ ಭ್ರಷ್ಟಾಚಾರದ ಆರೋಪ ಇರಲಿಲ್ಲವೇ? ಇದೇ ಮೊದಲ ಬಾರಿಗೆ ಬಂದಿತೇ? ಶೇ.40ರಷ್ಟು ಭ್ರಷ್ಟಾಚಾರ ಆರೋಪ ಮೊದಲ ಬಾರಿಗೆ ಮಾಡಲಾಯಿತೇ? ಪೋಸ್ಟರ್‌ ಹಾಕಿದ್ದಕ್ಕೆ ಸೀಟುಗಳು ಹೋದವೇ?” ಎಂದು ಲಘು ದಾಟಿಯಲ್ಲಿ ಪ್ರಶ್ನಿಸಿತು.

ದೂರುದಾರರ ಪರ ವಕೀಲ ಎಂ ವಿನೋದ್‌ ಕುಮಾರ್‌ ಅವರು “2023ರ ವಿಧಾನಸಭಾ ಚುನಾವಣೆಗೆ ಮೂರು ದಿನ ಬಾಕಿ ಇರುವಾಗ ಭ್ರಷ್ಟಾಚಾರದ ದರ ನಿಗದಿಪಡಿಸಿರುವ ಪಟ್ಟಿಯನ್ನು ಪತ್ರಿಕೆಗಳಿಗೆ ಸರಣಿ ಜಾಹೀರಾತು ನೀಡಲಾಗಿದೆ. ಇದರಲ್ಲಿ ಒಂದೇ ಒಂದು ಪರ್ಸೆಂಟ್‌ ಸತ್ಯವಿಲ್ಲ. ಇದರಿಂದ ಬಿಜೆಪಿಗೆ 40 ಸೀಟುಗಳಲ್ಲಿ ಸೋಲಾಗಿದೆ. ಇಲ್ಲವಾದಲ್ಲಿ ನಾವು 144 ಸೀಟು ಗೆಲ್ಲುತ್ತಿದ್ದೆವು. ಇದು ಸುದ್ದಿ ಎನ್ನುವ ರೀತಿ ಬಿಂಬಿಸಿದ್ದಾರೆ. ಇದರಿಂದ ಜನರಲ್ಲಿ ಬಿಜೆಪಿಗೆ ಓಟು ಹಾಕಬಾರದು ಎಂಬ ಭಾವನೆ ಬಂದಿದೆ. ಇದರಿಂದಾಗಿ ಬಿಜೆಪಿಗೆ ಬರಬೇಕಾದ ಶೇ.10ರಷ್ಟು ಮತಗಳು ಕಾಂಗ್ರೆಸ್‌ಗೆ ಹೋಗಿವೆ. ಕಾಂಗ್ರೆಸ್‌ ಜಾಹೀರಾತು ಸುಳ್ಳು ಎಂದು ಹೇಳಲು ನಮಗೆ ಸಮಯವೇ ಸಿಗಲಿಲ್ಲ. ಪೋಸ್ಟರ್‌ ಸಂಬಂಧ ಚುನಾವಣಾ ಆಯೋಗ ಕ್ರಮಕೈಗೊಂಡಿದೆ. ಈ ಮಾನಹಾನಿ ಜಾಹೀರಾತಿನಿಂದ ಸರ್ಕಾರ ಬದಲಾಯಿತು. ಇದು ಪುನರಾವರ್ತನೆಯಾಗಬಾರದು. ಇದು ವಿಚಾರಣೆ ನಡೆಯಲೇಬೇಕಾದ ಪ್ರಕರಣವಾಗಿದೆ” ಎಂದರು.

ಹಿರಿಯ ವಕೀಲ ಕೆ ಶಶಿಕಿರಣ್‌ ಶೆಟ್ಟಿ ಅವರು “ಈ ಅರ್ಜಿ ಸಲ್ಲಿಸಲು ರಾಷ್ಟ್ರೀಯ ಪಕ್ಷವಾದ ಬಿಜೆಪಿಯು ಯಾವುದೇ ಒಪ್ಪಿಗೆ ನೀಡಿಲ್ಲ. ಇದೇ ಪ್ರಕರಣದಲ್ಲಿ ರಾಹುಲ್‌ ಗಾಂಧಿ ವಿರುದ್ಧದ ಆರೋಪ ರದ್ದುಪಡಿಸಲಾಗಿದೆ. ಆ ತೀರ್ಪು ಇಲ್ಲಿಗೂ ಅನ್ವಯಿಸಲಿದೆ. ಇದೊಂದು ಮಾನಹಾನಿ ಪ್ರಕರಣವಾಗಿದ್ದು, ನ್ಯಾಯಾಲಯಗಳ ಮುಂದೆ ಬರುವ ಬದಲು ಜನರ ಮುಂದೆ ಹೋಗಿ ಎಂದು ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ” ಎಂದರು.

ಪ್ರಕರಣದ ಹಿನ್ನೆಲೆ: ಕಳೆದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಭ್ರಷ್ಟಾಚಾರವನ್ನು ಪ್ರಧಾನ ಅಸ್ತ್ರವಾಗಿಸಿದ್ದ ಕಾಂಗ್ರೆಸ್‌ 2023ರ ಮೇ 5ರಂದು ಎಲ್ಲಾ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಭ್ರಷ್ಟಾಚಾರ ದರ ಪಟ್ಟಿ ಎಂಬ ಹೆಸರಿನ ಅಡಿ ವಿವಿಧ ಹುದ್ದೆಗಳಿಗೆ ಬಿಜೆಪಿ ಲಂಚ ನಿಗದಿಪಡಿಸಿದೆ ಎಂದು ಆರೋಪಿಸಿ ಜಾಹೀರಾತು ನೀಡಿತ್ತು. ಅಲ್ಲದೇ, ಕೋವಿಡ್‌ ಸಾಮಗ್ರಿಗಳ ಪೂರೈಕೆ, ಲೋಕೋಪಯೋಗಿ ಗುತ್ತಿಗೆಗಳು, ಮಠಗಳಿಗೆ ಅನುದಾನ, ಶಾಲೆಗಳಿಗೆ ಮೊಟ್ಟೆ ಪೂರೈಕೆ, ರಸ್ತೆ ಕಾಮಗಾರಿಗಳಲ್ಲಿ ಶೇ 25-30% ಕಮಿಷನ್‌ ಪಡೆಯಲಾಗುತ್ತಿದೆ. ಪತ್ರಿಕೆಗಳಿಗೆ ನೀಡಿದ ಜಾಹೀರಾತಿನ ಕೊನೆಯಲ್ಲಿ ಶೇ. 40 ಕಮಿಷನ್ ನ (ಬಿಜೆಪಿ) ಸರ್ಕಾರವು ರೂ.1.5 ಲಕ್ಷ ಕೋಟಿಯನ್ನು ಕಳೆದ ನಾಲ್ಕು ವರ್ಷಗಳಲ್ಲಿ ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಇದರ ವಿರುದ್ಧ ದೂರು ದಾಖಲಿಸಿದ್ದ ಬಿಜೆಪಿಯು, ಡಬಲ್‌ ಎಂಜಿನ್‌ ಸರ್ಕಾರಕ್ಕೆ ಬದಲಾಗಿ ಟ್ರಬಲ್‌ ಎಂಜಿನ್‌ ಸರ್ಕಾರ ಎಂದು ಹೇಳುವ ಮೂಲಕ ಬಿಜೆಪಿಯ ವರ್ಚಸ್ಸಿಗೆ ಕಾಂಗ್ರೆಸ್‌ ಹಾನಿ ಮಾಡಿದೆ; ಚುನಾವಣೆಯಲ್ಲಿ ಗೆಲುವಿಗೆ ಅಡ್ಡಿಪಡಿಸಲಾಗಿದೆ. ಕೊನೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಆರೋಪಿಗಳು ಕೇಳಿದ್ದಾರೆ. ಸುಳ್ಳು ಜಾಹೀರಾತು ನೀಡಲು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಹಾಗೂ ರಾಹುಲ್‌ ಗಾಂಧಿ ಅವರು ನೇರ ಕಾರಣವಾಗಿದ್ದಾರೆ ಎಂದು ಆರೋಪಿಸಿತ್ತು.

ರಾಹುಲ್‌ ಗಾಧಿ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಸುಳ್ಳು ಜಾಹೀರಾತನ್ನು ಹಂಚಿಕೊಳ್ಳುವ ಮೂಲಕ ಬಿಜೆಪಿಗೆ ಮಾನಹಾನಿ ಮಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ, ಕಾಂಗ್ರೆಸ್‌, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಮತ್ತು ರಾಹುಲ್‌ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್‌ 499 ಮತ್ತು 500ರ ಮಾನಹಾನಿ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿಯು ಖಾಸಗಿ ದೂರು ದಾಖಲಿಸಿತ್ತು.