ಚಿತ್ರ ನಟ ದರ್ಶನ್ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿನ ರಹಸ್ಯ ಮಾಹಿತಿಯನ್ನು ಮಾಧ್ಯಮಗಳು ಮುದ್ರಣ, ಪ್ರಸಾರ, ಹಂಚಿಕೆ ಮಾಡಬಾರದು ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ಮಾಡಿದೆ. ಇದನ್ನು ಉಲ್ಲಂಘಿಸುವ ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯಲ್ಲಿನ ಮಾಹಿತಿಯನ್ನು ಪ್ರಸಾರ/ಪ್ರಚಾರ/ ಮುದ್ರಣ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರ ವಾದ ಆಲಿಸಿದ ನ್ಯಾಯಾಲಯವು “ಮೇಲ್ನೋಟಕ್ಕೆ ಏಕಪಕ್ಷೀಯ ಮಧ್ಯಂತರ ಆದೇಶ ಪಡೆಯಲು ಅರ್ಜಿದಾರರು ತಮ್ಮ ಪ್ರಕರಣ ಸಾಬೀತುಪಡಿಸಿದ್ದಾರೆ. ಹೀಗಾಗಿ, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿನ ರಹಸ್ಯ ಮಾಹಿತಿಯನ್ನು ಮುಂದಿನ ಆದೇಶದವರೆಗೆ ಮಾಧ್ಯಮಗಳು ಮುದ್ರಣ, ಪ್ರಸಾರ, ಹಂಚಿಕೆ ಮಾಡಬಾರದು. ಈ ಆದೇಶವನ್ನು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಪ್ರತಿವಾದಿಗಳಾಗಿರುವ 3ರಿಂದ 40ರ ವರೆಗಿನ ಮಾಧ್ಯಮ ಸಂಸ್ಥೆಗಳಿಗೆ ರವಾನಿಸಬೇಕು. ನಿಯಮ ಮತ್ತು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಮಾಧ್ಯಮಗಳ ವಿರುದ್ಧ ಕಾನೂನಿನ ಅನ್ವಯ ಮಾಹಿತಿ ಮತ್ತು ಪ್ರಸಾರ ಇಲಾಖೆ ಕ್ರಮಕೈಗೊಳ್ಳಬೇಕು” ಎಂದು ಆದೇಶಿಸಿದೆ.
ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ದರ್ಶನ್ ಅವರ ಪತ್ನಿ ಅವರು ವಿಚಾರಣಾಧೀನ ನ್ಯಾಯಾಲಯದಲ್ಲಿ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶ ಪಡೆದಿದ್ದಾರೆ. ಅದಾಗ್ಯೂ, ಮಾಧ್ಯಮಗಳು ದಿನದ 24 ತಾಸು ದರ್ಶನ್ ಸಂಬಂಧಿತ ಸುದ್ದಿ ಪ್ರಸಾರದಲ್ಲಿ ನಿರತವಾಗಿವೆ. ನಾವಿಲ್ಲಿ ದರ್ಶನ್ ಅವರ ಮೂಲಭೂತ ಹಕ್ಕು ಜಾರಿಗೆ ಕೋರುತ್ತಿದ್ದೇವೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ದಿನದ 24 ತಾಸು ಏನನ್ನಾದರೂ ಪ್ರಸಾರ ಮಾಡುವ ಶಕ್ತಿ ಹೊಂದಿರುವ 200-300 ಚಾನೆಲ್‌ಗಳ ವಿರುದ್ಧ ದರ್ಶನ್ ಹೋರಾಡಬೇಕಿದೆ. ಅರ್ಜಿದಾರರು ರಕ್ಷಣೆ ಮಾತ್ರ ಕೋರುತ್ತಿದ್ದಾರೆ” ಎಂದರು.
ಇದಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು “ದರ್ಶನ್ ಅವರು ದೂರು ನೀಡಿದರೆ ಅದನ್ನು ಆಧರಿಸಿ ನಾವು ಮಾಧ್ಯಮ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಬಹುದು. ಆದರೆ, ಇಂಥ ಯಾವುದೇ ದೂರು ಬಂದಿಲ್ಲ. ನಾನು ಯಾವ ಆದೇಶ ಮಾಡಬೇಕು? ಯಾವ ಕಾರ್ಯಕ್ರಮ ಸಂಹಿತೆ ಉಲ್ಲಂಘಿಸಲಾಗಿದೆ ಎಂಬ ಮಾಹಿತಿ ನೀಡಬೇಕು, ಸಾಕ್ಷ್ಯ ಒದಗಿಸಬೇಕು” ಎಂದರು.
ಆಗ ಪೀಠವು “ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವ ಬದಲು ಮಾಧ್ಯಮಗಳಿಗೆ ಈ ವಿಚಾರಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸುತ್ತೇವೆ. ಈ ವಿಚಾರವನ್ನು ನೀವು ಮಾಧ್ಯಮ ಸಂಸ್ಥೆಗಳಿಗೆ ರವಾನಿಸಬೇಕು” ಎಂದಿತು. ಇದಕ್ಕೆ ಕಾಮತ್ ಅವರು “ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಾಹಿತಿಯ ಪ್ರಸಾರ/ಹಂಚಿಕೆ ಮತ್ತಿತರ ವಿಚಾರಗಳನ್ನು ಪ್ರಸಾರ ಮಾಡದಂತೆ ಹಿಂದೆ ಆದೇಶ ಮಾಡಿತ್ತು. ಅದನ್ನು ನಾವು ಮಾಧ್ಯಮಗಳಿಗೆ ತಿಳಿಸಿದ್ದೆವು. ಅದೇ ರೀತಿಯ ಆದೇಶ ಮಾಡಬಹುದು” ಎಂದರು.
ಇದಕ್ಕೆ ಒಪ್ಪಿದ ಪೀಠವು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಆರೋಪ ಪಟ್ಟಿಯ ರಹಸ್ಯ ಮಾಹಿತಿಯನ್ನು ಪ್ರಸಾರ ಮಾಡದಂತೆ ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಿ, ಆದೇಶಿಸಿದೆ. ಕೆಲವು ಮಾಧ್ಯಮಗಳನ್ನು ಪ್ರತಿವಾದಿಗಳನ್ನಾಗಿಸಲು ಕೋರಿ ಪ್ರಭುಲಿಂಗ ನಾವದಗಿ ಅವರು ಸಲ್ಲಿಸಿದ ಮೆಮೊವನ್ನು ನ್ಯಾಯಾಲಯವು ಅಧಿಕೃತವಾಗಿ ಸ್ವೀಕರಿಸಿದ್ದು, ಅರ್ಜಿಯಲ್ಲಿ ಅಗತ್ಯ ತಿದ್ದುಪಡಿ ಮಾಡಲು ಅನುಮತಿಸಿದೆ.