ಸುದ್ದಿಗಳು

ದಿನೇಶ್‌ ಕುಮಾರ್‌ ಪ್ರಕರಣದ ವಿಚಾರಣೆ ಮುಂದುವರಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ಬಂಧಿಸಿದ ಹೈಕೋರ್ಟ್‌

ದಿನೇಶ್‌ ಕುಮಾರ್‌ ಪ್ರಕರಣದ ವಿಚಾರಣೆಯನ್ನು ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಸ್ಥಾಪಿತವಾಗಿರುವ ವಿಶೇಷ ನ್ಯಾಯಾಲಯ ನಡೆಸಬೇಕೆ ವಿನಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವಲ್ಲ ಎಂದು ಆಕ್ಷೇಪಿಸಲಾಗಿದೆ.

Bar & Bench

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ಎಸಗಿದ ಆರೋಪದ ಸಂಬಂಧ ಮಾಜಿ ಆಯುಕ್ತ ಜಿ ಟಿ ದಿನೇಶ್‌ ಕುಮಾರ್‌ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ಬಂಧಿಸಿದೆ.

ದಿನೇಶ್‌ ಕುಮಾರ್‌ ಪ್ರಕರಣದ ವಿಚಾರಣೆಯನ್ನು ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಸ್ಥಾಪಿತವಾಗಿರುವ ವಿಶೇಷ ನ್ಯಾಯಾಲಯ ನಡೆಸಬೇಕೆ ವಿನಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವಲ್ಲ ಎಂದು ಆಕ್ಷೇಪಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ದಿನೇಶ್‌ ಕುಮಾರ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಜಾರಿ ನಿರ್ದೇಶನಾಲಯವು ಯಾವುದೇ ಜನಪ್ರತಿನಿಧಿಯ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಬಿ ವರದಿ ಸಲ್ಲಿಕೆಯಾಗಿದ್ದು, ಅದನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಪ್ಪಿಕೊಂಡಿದೆ. ಇಲ್ಲಿ ಪ್ರಕರಣದ ವಿಚಾರಣೆ ನಡೆಸುವ ವ್ಯಾಪ್ತಿಯ ವಿಚಾರವಿದೆ. ಹೀಗಾಗಿ, ವಾದಿಸಲು ಒತ್ತಾಯ ಮಾಡದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು. ದೂರು ದಾಖಲಿಸಿದಾಗಿನಿಂದಲೂ ಈ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಇಲ್ಲ. ಯಾವುದೇ ಜನಪ್ರತಿನಿಧಿಯ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಹೀಗಾಗಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಲ್ಲಿಯವರೆಗೆ ಹೊರಡಿಸಿರುವ ಆದೇಶಗಳಿಗೆ ವ್ಯಾಪ್ತಿ ಇಲ್ಲ” ಎಂದರು.

ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ಈ ಹಿಂದೆ ಸುಪ್ರೀಂ ಕೋರ್ಟ್‌ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಯಲು ಕೆಲವು ಸಂದರ್ಭದಲ್ಲಿ ಅವಕಾಶ ಕಲ್ಪಿಸಿದೆ. ಈ ಸಂಬಂಧಿತ ತೀರ್ಪುಗಳನ್ನು ಇಟ್ಟು ವಾದಿಸಲು ಕಾಲಾವಕಾಶ ನೀಡಬೇಕು. ಅಲ್ಲಿಯವರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ಮುಂದೂಡುವಂತೆ ನಿರ್ದೇಶಿಸಬಹುದು. ಇಲ್ಲಿ ಪ್ರಮುಖ ಕಾನೂನಿನ ಪ್ರಶ್ನೆ ಇದೆ” ಎಂದರು.

ಇದನ್ನು ಆಲಿಸಿದ ಪೀಠವು ಜಿ ಟಿ ದಿನೇಶ್‌ ಕುಮಾರ್‌ ಅವರ ವಿರುದ್ಧ ಜಾರಿ ನಿರ್ದೇಶನಾಲಯವು ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವನ್ನು ಮುಂದಿನ ವಿಚಾರಣೆವರೆಗೆ ನಿರ್ಬಂಧಿಸಿದೆ. ಅಲ್ಲದೇ, ಮಾರ್ಚ್‌ 26ಕ್ಕೆ ವಿಚಾರಣೆ ಮುಂದೂಡಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆಯುಕ್ತರಾಗಿದ್ದ ಅವಧಿಯಲ್ಲಿ ಜಿ ಟಿ ದಿನೇಶ್‌ ಕುಮಾರ್‌ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಅನರ್ಹರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಪಿಎಂಎಲ್‌ಎ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ 2025ರ ಸೆಪ್ಟೆಂಬರ್‌ 17ರಂದು ದಿನೇಶ್‌ರನ್ನು ಬಂಧಿಸಿತ್ತು.

ಆನಂತರ ಅಕ್ಟೋಬರ್‌ 5ರಂದು ದಿನೇಶ್‌ ಕುಮಾರ್‌ಗೆ ಸೇರಿದ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ ಡಿ ಮುಟ್ಟುಗೋಲು ಹಾಕಿಕೊಂಡಿತು. ಅಷ್ಟೇ ಅಲ್ಲದೆ, ಮುಡಾದ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ವಿರುದ್ಧ 2025ರ ನವೆಂಬರ್‌ 19ರಂದು ಆರೋಪಪಟ್ಟಿ  ಸಹ ಸಲ್ಲಿಸಿತು. ಆಯುಕ್ತರಾಗಿದ್ದ ಸಮಯದಲ್ಲಿ ಅನರ್ಹರಿಗೆ ಒಟ್ಟು 450 ಕೋಟಿಗೂ ಅಧಿಕ ಬೆಲೆ ಬಾಳುವ 283 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.