Karnataka HC and Goonda Act 
ಸುದ್ದಿಗಳು

ಗೂಂಡಾ ಕಾಯಿದೆ ಅಡಿ ವ್ಯಕ್ತಿಯೊಬ್ಬರ ಅಕ್ರಮ ಬಂಧನ: ಕಾನೂನುಬಾಹಿರ ಎಂದ ಕರ್ನಾಟಕ ಹೈಕೋರ್ಟ್‌, ಬಿಡುಗಡೆಗೆ ಆದೇಶ

“ಬಳಕೆ ಮಾಡಿ ಅಥವಾ ಕಳೆದುಕೊಳ್ಳಿ, ಬಳಕೆ ಮಾಡದ ಜ್ಞಾನವು ಹೊರೆಯಾಗುತ್ತದೆ. ಬಳಕೆ ಮಾಡದ ಸಮಯವು ಕಳೆದು ಹೋಗುತ್ತದೆ. ಏನು ಬಳಸುವುದಿಲ್ಲವೋ ಅದು ದುರ್ಬಳಕೆಯಾಗುತ್ತದೆ” ಎಂದು ಗಾದೆಯನ್ನು ಉದಾಹರಿಸಿರುವ ನ್ಯಾಯಾಲಯ.

Bar & Bench

ಬೆಂಗಳೂರಿನ ಶಿವರಾಜ್‌ ಅಲಿಯಾಸ್‌ ಕುಳ್ಳ ಶಿವರಾಜ್‌ ಎಂಬುವರನ್ನು ಗೂಂಡಾ ಕಾಯಿದೆ ಅಡಿ ವಶಕ್ಕೆ ಪಡೆದಿರುವ ಪೊಲೀಸ್‌ ಆಯುಕ್ತರ ಕ್ರಮ ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶ ಮಾಡಿದೆ. ಶಿವರಾಜ್‌ರನ್ನು ವಶಕ್ಕೆ ಪಡೆಯಲು ಪೊಲೀಸರು ಪಾಲಿಸಿರುವ ಪ್ರಕ್ರಿಯೆಯು ಸಂವಿಧಾನದ 22(5)ನೇ ವಿಧಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಗೂಂಡಾ ಕಾಯಿದೆ ಅಡಿ ಜೈಲು ಸೇರಿದ್ದ ಕುಳ್ಳ ಶಿವರಾಜ್‌ ಪತ್ನಿ ಕೆ ಎನ್‌ ಕಮಲಮ್ಮ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ಬೇರೆ ಯಾವುದೇ ಪ್ರಕರಣದಲ್ಲಿ ಶಿವರಾಜ್‌ ಬೇಕಿಲ್ಲ ಎಂದಾದರೆ ತಕ್ಷಣ ಅವರನ್ನು ಬಿಡುಗಡೆ ಮಾಡುವಂತೆ ಬೆಂಗಳೂರಿನ ಕೇಂದ್ರ ಕಾರಾಗೃಹದ ಹಿರಿಯ ಮೇಲ್ವಿಚಾರಕರಿಗೆ ಆದೇಶಿಸಿದೆ.

“ದಾಖಲೆಗಳನ್ನು ಪರಿಶೀಲಿಸಿದಾಗ ಅರ್ಜಿದಾರರು 04-01-2022ರಂದು ಮನವಿ ಸಲ್ಲಿಸಿದ್ದಾರೆ. 10-01-2022ರಂದು ಇದು ಸರ್ಕಾರದ ಗಮನಕ್ಕೆ ಬಂದಿದೆ. 168 ದಿನಗಳು ಕಳೆದ ಬಳಿಕ 28-06-2022ರಂದು ರಾಜ್ಯ ಸರ್ಕಾರವು ಮನವಿ ಪರಿಗಣಿಸಿರುವುದು ಸಂವಿಧಾನದ 22(5)ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಪೀಠ ಹೇಳಿದೆ.

“2022ರ ಜೂನ್‌ 28ರಂದು ಮನವಿ ಪರಿಗಣಿಸಲಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿದೆ. ಮನವಿ ಪರಿಗಣಿಸುವುದು ತಡವಾಗಿದೆ ಎನ್ನುವುದಾದರೆ ಈ ಆಧಾರದ ಮೇಲೆ ಇಡೀ ವಶಕ್ಕೆ (ಶಿವರಾಜ್‌) ಪಡೆಯಲಾದ ಆದೇಶವನ್ನು ಬದಿಗೆ ಸರಿಸಬಹುದಾಗಿದೆ. 2022ರ ಫೆಬ್ರವರಿಯಲ್ಲಿ ಮಾಡಿರುವ ಆದೇಶವು ಸರ್ಕಾರದ ಗಮನಕ್ಕೆ ಬಂದಿರಲಿಲ್ಲ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಪೀಠ ಹೇಳಿದೆ.

“ಬಳಕೆ ಮಾಡಿ ಅಥವಾ ಕಳೆದುಕೊಳ್ಳಿ, ಬಳಕೆ ಮಾಡದ ಜ್ಞಾನವು ಹೊರೆಯಾಗುತ್ತದೆ. ಬಳಕೆ ಮಾಡದ ಸಮಯವು ಕಳೆದು ಹೋಗುತ್ತದೆ. ಏನು ಬಳಸುವುದಿಲ್ಲವೋ ಅದು ದುರ್ಬಳಕೆಯಾಗುತ್ತದೆ” ಎಂದು ಪೀಠ ಇದೇ ವೇಳೆ ಗಾದೆಯನ್ನು ಉದಾಹರಿಸಿದೆ.

2021ರ ಡಿಸೆಂಬರ್‌ 28ರಂದು ಬೆಂಗಳೂರು ಪೊಲೀಸ್‌ ಆಯುಕ್ತರು ಶಿವರಾಜ್‌ನನ್ನು ವಶಕ್ಕೆ ಪಡೆಯಲು ಆದೇಶಿಸಿದ್ದರು. 2022ರ ಜನವರಿ 6ರಂದು ರಾಜ್ಯ ಸರ್ಕಾರವು ಅದಕ್ಕೆ ಸಮ್ಮತಿಸಿತ್ತು. ಅಂತಿಮ ಒಪ್ಪಿಗೆಯನ್ನು 2022ರ ಫೆಬ್ರವರಿ 14ರಂದು ಸರ್ಕಾರ ನೀಡಿತ್ತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ರೋಹನ್‌ ತಿಗಾಡಿ ಅವರು “2021ರ ಏಪ್ರಿಲ್‌ 21ರಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ಜಗದೀಶ್‌ ಅವರ ವಿರುದ್ಧ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಶಿವರಾಜ್‌ ಅವರು ದೂರು ನೀಡಿದ ಬಳಿಕ ಸುಳ್ಳು ಪ್ರಕರಣಗಳನ್ನು ಶಿವರಾಜ್‌ ವಿರುದ್ಧ ದಾಖಲಿಸಿ, ಅವರನ್ನು ಗೂಂಡಾ ಕಾಯಿದೆ ಅಡಿ ಬಂಧಿಸಲಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದೆ. ಶಿವರಾಜ್‌ ಅವರನ್ನು ವಶದಲ್ಲಿಟ್ಟುಕೊಳ್ಳುವುದನ್ನು ಮುಂದುವರಿಸುವುದು ಸಾಂವಿಧಾನಿಕವಾಗಿ ಅವರಿಗೆ ದೊರೆತಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ವಾದಿಸಿದ್ದರು.