High Court of Karnataka
High Court of Karnataka 
ಸುದ್ದಿಗಳು

ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಕೆ ಗಂಭೀರ ವಿಷಯ ಎಂದ ಹೈಕೋರ್ಟ್‌; ಅಗತ್ಯ ಮಾಹಿತಿಯೊಂದಿಗೆ ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ

Bar & Bench

ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಕೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯು ಗಂಭೀರ ವಿಷಯವನ್ನು ಒಳಗೊಂಡಿದ್ದು, ಸೂಕ್ತ ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸಿದ ಬಳಿಕ ಹೊಸ ಅರ್ಜಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ ಬುಧವಾರ ಅರ್ಜಿದಾರರಿಗೆ ಅನುಮತಿಸಿದೆ.

ಭಾರತ ಸರ್ಕಾರದ ಶಾಲಾ ಬ್ಯಾಗ್‌ಗಳ ಕುರಿತಾದ ನೀತಿ 2020 ಅನ್ನು ರಾಜ್ಯದಲ್ಲಿ ಪಾಲಿಸಲಾಗುತ್ತಿಲ್ಲ ಎಂದು ಆಕ್ಷೇಪಿಸಿ ವಕೀಲರೂ ಆದ ಪಾರ್ಟಿ ಇನ್‌ ಪರ್ಸನ್‌ ರಮೇಶ್‌ ನಾಯಕ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಅರ್ಜಿಯ ಜೊತೆಗೆ ಸೂಕ್ತ ಮಾಹಿತಿ ಮತ್ತು ದಾಖಲೆ ಸಲ್ಲಿಸದಿರುವುದರಿಂದ ಅರ್ಜಿ ವಜಾ ಮಾಡಲಾಗಿದೆ” ಎಂದು ನ್ಯಾಯಾಲಯವು ಮೊದಲಿಗೆ ಆದೇಶಿಸಿತು. ಆಗ ವಕೀಲ ರಮೇಶ್‌ ನಾಯಕ್‌ ಅವರು “ಅಗತ್ಯ ಮಾಹಿತಿ, ದಾಖಲೆಗಳೊಂದಿಗೆ ಹೊಸ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಕಲ್ಪಿಸಬೇಕು” ಎಂದು ಪೀಠಕ್ಕೆ ವಿನಂತಿಸಿದರು.

ಆಗ ನ್ಯಾಯಾಲಯವು “ಪಾರ್ಟಿ ಇನ್‌ ಪರ್ಸನ್‌ ಅವರು ಅವಸರದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಅಗತ್ಯ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಆದ್ದರಿಂದ, ಅರ್ಜಿ ಹಿಂಪಡೆಯಲು ಅವರಿಗೆ ಅನುಮತಿಸಿದ್ದು, ಅಗತ್ಯವಾದ ಎಲ್ಲಾ ದಾಖಲೆಗಳೊಂದಿಗೆ ಹೊಸ ಅರ್ಜಿ ಸಲ್ಲಿಸಬಹುದಾಗಿದೆ” ಎಂದು ಹೇಳಿ, ಪ್ರಕರಣ ಇತ್ಯರ್ಥಪಡಿಸಿತು.

ಇದಕ್ಕೂ ಮುನ್ನ, “ಪಾರ್ಟಿ ಇನ್‌ ಪರ್ಸನ್‌ ಎತ್ತಿರುವ ವಿಷಯವು ಪ್ರಮುಖವಾಗಿದೆ. ಆದರೆ, ಅವರು ಅರ್ಜಿಯಲ್ಲಿ ಮತ್ತು ಮನವಿಯಲ್ಲಿ ಬೀಸು ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಅಗತ್ಯವಾಗಿ ಗಂಭೀರವಾದ ರೀತಿಯಲ್ಲಿ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿಲ್ಲ. ಭಾರತದ ಸರ್ಕಾರ ಅಧೀನ ಕಾರ್ಯದರ್ಶಿಯು ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯ ಸರ್ಕಾರಗಳ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿರುವುದನ್ನು ಅರ್ಜಿದಾರರು ಮುಂದೆ ಇಟ್ಟಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

“ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಬಳಿಕ ಅಗತ್ಯ ಮಾಹಿತಿ ಕೋರಲಾಗಿದೆಯೇ ಎಂದು ಹಲವು ಬಾರಿ ಅರ್ಜಿದಾರ ಪಾರ್ಟಿ ಇನ್‌ ಪರ್ಸನ್‌ ಅವರನ್ನು ಪ್ರಶ್ನಿಸಿಲಾಗಿದೆ. ಆದರೆ, ಪಾರ್ಟಿ ಇನ್‌ ಪರ್ಸನ್‌ ಅವರು ಸೂಕ್ತ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದಷ್ಟೇ ಹೇಳಿದ್ದಾರೆ. ಇದರರ್ಥ, ಪಾರ್ಟಿ ಇನ್‌ ಪರ್ಸನ್‌ ಅವರು ಅಗತ್ಯ ಮಾಹಿತಿ ಪಡೆಯಲು ಅವಕಾಶ ಇದ್ದರೂ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂಬುದಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

“ಬೆಂಗಳೂರು ಮತ್ತು ತುಮಕೂರಿನ ಹಲವು ಶಾಲೆಗಳಿಗೆ ಭೇಟಿ ನೀಡಿದ್ದು, ಪುಟ್ಟ ಮಕ್ಕಳು ಹೆಚ್ಚು ತೂಕದ ಬ್ಯಾಗ್‌ಗಳನ್ನು ಹೊತ್ತುಕೊಂಡು ಹೋಗುವುದನ್ನು ನೋಡಿದ್ದೇನೆ ಎಂದು ಅರ್ಜಿದಾರರು ವಿವರಿಸಿದ್ದಾರೆ. ಇಲ್ಲಿಯೂ ಬೀಸು ಹೇಳಿಕೆಯನ್ನು ಅರ್ಜಿದಾರರು ನೀಡಿದ್ದು, ಯಾವೆಲ್ಲಾ ಶಾಲೆಗಳಿಗೆ ಅವರು ಭೇಟಿ ನೀಡಿದ್ದಾರೆ ಎಂಬುದನ್ನು ಉಲ್ಲೇಖಿಸಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದರೆ ನಮ್ಮ ದೃಷ್ಟಿಯಲ್ಲಿ ಇದು ಅರೆಬೆಂದ ಪ್ರಯತ್ನವಾಗಿದೆ. ಇದೊಂದು ಗಂಭೀರ ವಿಚಾರವಾಗಿದ್ದು, ಅರ್ಜಿದಾರರು ಕನಿಷ್ಠ ದಾಖಲೆಗಳನ್ನು ಮತ್ತು ಅಗತ್ಯ ಮಾಹಿತಿ ಸಂಗ್ರಹಿಸಿ ಆನಂತರ ನ್ಯಾಯಾಲಯದ ಮೆಟ್ಟಿಲೇರಬೇಕಿತ್ತು” ಎಂದು ಅರ್ಜಿ ವಜಾ ಮಾಡಿತು.

ಆಗ ಮಧ್ಯಪ್ರವೇಶಿಸಿದ ನಾಯಕ್‌ ಅವರು “ನ್ಯಾಯಾಲಯದ ನಿರ್ದೇಶನದಂತೆ ಅಗತ್ಯ ಮಾಹಿತಿ ಮತ್ತು ದಾಖಲೆಯೊಂದಿಗೆ ಹೊಸ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಕಲ್ಪಿಸಬೇಕು” ಎಂದು ವಿನಂತಿಸಿದರು.‌

ಇದಕ್ಕೆ ಪೀಠವು “ಹಾಗಾದರೆ ಇದೆಲ್ಲವನ್ನೂ ನೀವೇಕೆ ಮಾಡಿದಿರಿ? ಪಾರ್ಟಿ ಇನ್‌ ಪರ್ಸನ್‌ ಅವರೇ ನೀವು ವಕೀಲರು. ನಾವು ಆರಂಭದಿಂದಲೂ ಇದನ್ನು ತಿಳಿಸಲು ನಿಮಗೆ ಪ್ರಯತ್ನ ಮಾಡಿದ್ದೇವೆ. ಇದೊಂದು ಗಂಭೀರ ಪ್ರಕರಣ ಎಂಬುದು ನಿರ್ವಿವಾದವಾಗಿದ್ದು, ನಿಮ್ಮಿಂದ ಸರಿಯಾದ ಪ್ರಯತ್ನವಾಗಿಲ್ಲ ಎಂದಷ್ಟೇ ಹೇಳಿದ್ದೇವೆ. ನೀವು ಮರಳಿ ಯೋಚಿಸುತ್ತೀರಿ ಎಂದಿಕೊಂಡಿದ್ದೆವು” ಎಂದು ಬೇಸರಿಸಿತು.