ಸುದ್ದಿಗಳು

ಚುನಾವಣಾ ಸಿದ್ಧತೆ ಕುರಿತು ಮಾಹಿತಿ ಸಲ್ಲಿಸಲು ಬಿಸಿಐ, ಕೆಎಸ್‌ಬಿಸಿಗೆ ನಿರ್ದೇಶನ; ಪರ್ಯಾಯ ಸಂಘದ ಕುರಿತ ಆದೇಶ ವಿಸ್ತರಣೆ

ಕೆಎಸ್‌ಬಿಸಿಗೆ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಮತ್ತು ಅಧ್ಯಕ್ಷ ಮಿಟ್ಟಲಕೋಡ್‌ ನೇಮಕ ವಜಾಗೊಳಿಸಬೇಕು, ಹೊಸ ಸಂಘ ನೋಂದಣಿ ಮಾಡದಂತೆ ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌.

Bar & Bench

ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಅಗತ್ಯವಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲು ಆದ್ಯತೆ ನೀಡುತ್ತಿದೆಯೇ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸರ್ಟಿಫಿಕೇಟ್‌ ಆಫ್‌ ಪ್ರಾಕ್ಟೀಸ್‌ಗೆ ಸಂಬಂಧಿಸಿದ ಅರ್ಜಿ ಬಾಕಿ ಇರುವುದು ಕೆಎಸ್‌ಬಿಸಿಗೆ ಚುನಾವಣೆ ನಡೆಸುವುದು ವಿಳಂಬವಾಗುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಭಾರತೀಯ ವಕೀಲರ ಪರಿಷತ್‌ ಮತ್ತು ಕೆಎಸ್‌ಬಿಸಿಗೆ ಕರ್ನಾಟಕ ಹೈಕೋರ್ಟ್‌ ಮತ್ತೊಮ್ಮೆ ಕಾಲಾವಕಾಶ ನೀಡಿದೆ.

ಕೆಎಸ್‌ಬಿಸಿಗೆ ಚುನಾವಣೆ ನಡೆಸಲು ನಿರ್ದೇಶಿಸಬೇಕು ಮತ್ತು‌ ಕೆಎಸ್‌ಬಿಸಿ ನಾಮನಿರ್ದೇಶಿತ ಅಧ್ಯಕ್ಷ ಎಸ್‌ ಎಸ್‌ ಮಿಟ್ಟಲಕೋಡ್‌ ನೇಮಕಾತಿ ವಜಾಗೊಳಿಸಬೇಕು ಮತ್ತು ಬೆಂಗಳೂರು ವಕೀಲರ ಸಂಘಕ್ಕೆ ಪರ್ಯಾಯ ಹೊಸ ಸಂಘ ನೋಂದಣಿ ಮಾಡದಂತೆ ಕೆಎಸ್‌ಬಿಸಿಗೆ ನಿರ್ದೇಶಿಸಬೇಕು ಎಂದು ಕೋರಿರುವವ ಪ್ರತ್ಯೇಕ ಮೂರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ ಪ್ರಸಾದ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಕೆಎಸ್‌ಬಿಸಿ ಪ್ರತಿನಿಧಿಸಿದ್ದ ವಕೀಲ ಎಸ್‌ ನಟರಾಜ್‌ ಅವರು “ಆಗಸ್ಟ್‌ 14ರಂದು 31.07.2025ರ ಪತ್ರದಲ್ಲಿ ಕೆಎಸ್‌ಬಿಸಿಗೆ ಶೀಘ್ರದಲ್ಲೇ ಚುನಾವಣೆ ನಡೆಸಲಾಗುವುದು ಎಂದು ಹೇಳಿರುವ ನಡುವೆಯೂ ಸುಪ್ರೀಂ ಕೋರ್ಟ್‌ನಲ್ಲಿ ಸರ್ಟಿಫಿಕೇಟ್‌ ಆಫ್‌ ಪ್ರಾಕ್ಟೀಸ್‌ಗೆ ಸಂಬಂಧಿಸಿದ ಅರ್ಜಿ ಬಾಕಿ ಇರುವುದು ಚುನಾವಣೆ ನಡೆಸುವುದಕ್ಕೆ ವಿಳಂಬವಾಗುತ್ತಿದೆಯೇ? ಮತ್ತು ಚುನಾವಣೆ ನಡೆಸಲು ಕೆಎಸ್‌ಬಿಸಿಯು ಎಲ್ಲಾ ಸಿದ್ಧತೆ ಮಾಡಿಕೊಳ್ಳಲು ಆದ್ಯತೆ ನೀಡುತ್ತಿದೆಯೇ? ಎಂಬ ಎರಡು ಪ್ರಶ್ನೆಗಳನ್ನು ಕೇಳಿದೆ. ಇದಕ್ಕೆ ಉತ್ತರಿಸಲು ಮೂರು ದಿನ ಕಾಲಾವಕಾಶ ನೀಡಬೇಕು” ಎಂದರು.

ಬೆಂಗಳೂರು ವಕೀಲರ ಸಂಘವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಮಿಟ್ಟಲಕೋಡ್‌ ಅವರು ಪ್ರಮಾಣೀಕೃತ ಪ್ರತಿಗಳನ್ನು ನೀಡುವಂತೆ ಸೂಚಿಸಿ, ನೋಟಿಸ್‌ ಪಡೆಯಲು ನಿರಾಕರಿಸಿದ್ದಾರೆ. ಸಿಒಪಿಗಾಗಿ ಮಾತ್ರ ಮಿಟ್ಟಲಕೋಡ್‌ ಅವರನ್ನು ನಾಮನಿರ್ದೇಶನ ಮಾಡಲಾಗಿದೆ” ಎಂದರು.

ಇದನ್ನು ಆಲಿಸಿದ ಪೀಠವು “14.8.2025ರ ಆದೇಶಕ್ಕೆ ಸಂಬಂಧಿಸಿದಂತೆ ನಿಲುವು ಕೈಗೊಳ್ಳಲು ಬಿಸಿಐ-ಕೆಎಸ್‌ಬಿಸಿಗೆ ಮುಂದಿನ ವಿಚಾರಣೆವರೆಗೆ ಕಾಲಾವಕಾಶ ನೀಡಲಾಗಿದೆ. ನ್ಯಾಯಾಲಯದ ಅನುಮತಿ ಪಡೆಯದೇ ಎಎಬಿಗೆ ಪರ್ಯಾಯವಾಗಿ ಹೊಸ ಸಂಘ ನೋಂದಣಿ ಮಾಡದಂತೆ ಮಾಡಿರುವ ಮಧ್ಯಂತರ ಆದೇಶವನ್ನು ವಿಸ್ತರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 12ಕ್ಕೆ ಮುಂದೂಡಿದೆ.