H D Revanna and Karnataka HC 
ಸುದ್ದಿಗಳು

ಶಾಸಕ ರೇವಣ್ಣ ಮೇಲಿನ ಮನೆಕೆಲಸದ ಮಹಿಳೆಯ ಘನತೆಗೆ ಚ್ಯುತಿ ಆರೋಪ ವಜಾಗೊಳಿಸಿದ ಹೈಕೋರ್ಟ್‌

ಲೈಂಗಿಕ ದೌರ್ಜನ್ಯ ಆರೋಪವನ್ನು ಪರಿಗಣಿಸಲು ಪ್ರಕರಣವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಮರಳಿಸಿದ ಹೈಕೋರ್ಟ್‌.

Bar & Bench

ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ವಿರುದ್ಧದ ಮನೆಕೆಲಸದ ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡಿದ ಆರೋಪದ ಸಂಬಂಧ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿದ್ದನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಬದಿಗೆ ಸರಿಸಿದೆ. ಆದರೆ, ಲೈಂಗಿಕ ದೌರ್ಜನ್ಯ ಆರೋಪವನ್ನು ಪರಿಗಣಿಸಲು ಪ್ರಕರಣವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಮರಳಿಸಿದೆ. ಇದರಿಂದ ರೇವಣ್ಣ ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತಾಗಿದೆ.

ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಜೆಡಿಎಸ್‌ ನಾಯಕ ಎಚ್‌ ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ. ಅಕ್ಟೋಬರ್‌ 29ರಂದು ಹೈಕೋರ್ಟ್‌ ಆದೇಶ ಕಾಯ್ದಿರಿಸಿತ್ತು.

Justice M I Arun

“ಕ್ರಿಮಿನಲ್‌ ಅರ್ಜಿಯನ್ನು ಭಾಗಶಃ ಪುರಸ್ಕರಿಸಲಾಗಿದೆ. 42ನೇ ಎಸಿಜೆಎಂ ನ್ಯಾಯಾಲಯವು ರೇವಣ್ಣ ವಿರುದ್ಧ ಐಪಿಸಿ 354 (ಮಹಿಳೆಯ ಘನತೆಗೆ ಚ್ಯುತಿ) ಅಡಿ ಸಂಜ್ಞೇ ಪರಿಣಿಸಿರುವುದನ್ನು ಬದಿಗೆ ಸರಿಸಲಾಗಿದೆ. ವಿಳಂಬವನ್ನು ಮೀರಿ ಐಪಿಸಿ 354ಎ (ಲೈಂಗಿಕ ದೌರ್ಜನ್ಯ) ಅಡಿ ಸೂಕ್ತ ಆದೇಶ ಮಾಡಲು ಪರಿಗಣಿಸುವಂತೆ ಪ್ರಕರಣವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಮರಳಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.

“ದೂರಿನಲ್ಲಿನ ಆರೋಪಗಳು ಐಪಿಸಿ ಸೆಕ್ಷನ್‌ 354ಎ ಅಡಿ ಬರುತ್ತವೆ. ಐಪಿಸಿ ಸೆಕ್ಷನ್‌ 354 ಇಲ್ಲಿ ಅನ್ವಯಿಸಲ್ಲ. ನನ್ನ ಪ್ರಕಾರ ಸಂತ್ರಸ್ತೆಯ ಘನತೆಗೆ ಹಾನಿ ಮಾಡುವ ಉದ್ದೇಶ ತೋರುವುದಿಲ್ಲ. ಇದು ಲೈಂಗಿಕ ದೌರ್ಜನ್ಯವಾಗುತ್ತದೆ. ಇದು ನನ್ನ ಅಭಿಪ್ರಾಯ, ನಿಮಗೆ ಅಗತ್ಯವಿದ್ದರೆ ಅದನ್ನು ಪ್ರಶ್ನಿಸಬಹುದು” ಎಂದು ಪೀಠವು ಪ್ರಾಸಿಕ್ಯೂಷನ್‌ ಕುರಿತು ಹೇಳಿತು.

"ಮೂರು ವರ್ಷ ಅಥವಾ ಅದಕ್ಕಿಂತ ಕಡಿಮೆ ಶಿಕ್ಷೆಯಾದರೆ ಪೊಲೀಸರು ಎಫ್‌ಐಆರ್‌ ದಾಖಲಿಸಲಾಗದು ಎಂಬ ವಾದವನ್ನು ತಳ್ಳಿಹಾಕಲಾಗಿದೆ" ಎಂದೂ ಪೀಠ ಹೇಳಿತು. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “9.9.2024ರಂದು ವಿಚಾರಣಾಧೀನ ನ್ಯಾಯಾಲಯವು ಐಪಿಸಿ ಸೆಕ್ಷನ್ 354 ಮತ್ತು 354ಎ ಆರೋಪಗಳಿಗೆ ಸಂಜ್ಞೇ ಪರಿಗಣಿಸಲಾಗಿದೆ. ಈ ಎರಡೂ ಸೆಕ್ಷನ್‌ಗಳ ಕುರಿತು ಆರೋಪ ಪಟ್ಟಿ ಸಲ್ಲಿಸಲಾಗಿದೆ” ಎಂದರು.

ಪ್ರಕರಣದ ಹಿನ್ನೆಲೆ: ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್‌ ಡಿ ರೇವಣ್ಣ ಹಾಗೂ ಅವರ ಮಗ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ 2024ರ ಏಪ್ರಿಲ್‌ 28ರಂದು ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತೆಯ ದೂರು ಆಧರಿಸಿ ಐಪಿಸಿ ಸೆಕ್ಷನ್‌  ಪ್ರಕರಣ 354A, 354D, 506, 509ರ ಅಡಿ ಪ್ರಕರಣ ದಾಖಲಿಸಲಾಗಿದ್ದು ರೇವಣ್ಣ ಅವರನ್ನು ಮೊದಲನೇ ಆರೋಪಿ ಹಾಗೂ ಪ್ರಜ್ವಲ್‌ ಅವರನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.

ರೇವಣ್ಣ ಅವರು ತಮ್ಮ ಪತ್ನಿ ಭವಾನಿಯವರು ಮನೆಯಲ್ಲಿ ಇಲ್ಲದಿದ್ದ ವೇಳೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತಿದ್ದರು. ಅಲ್ಲದೆ ತಮ್ಮ ಮಗಳಿಗೂ ಅಸಭ್ಯ ಸಂಭಾಷಣೆ ಮೂಲಕ ಪ್ರಚೋದನೆ ನೀಡುತ್ತಿದ್ದು ಮಗಳು ಹೆದರಿ ನಂಬರ್‌ ಬ್ಲಾಕ್‌ ಮಾಡಿಕೊಂಡಿದ್ದಳು. ಇದರಿಂದ ತಾನು ಕೆಲಸ ತೊರೆದಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು.

ಪ್ರಜ್ವಲ್‌ ರೇವಣ್ಣ ಅವರು ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಹಾಗೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಒಬ್ಬ ಮಹಿಳೆ ತನ್ನೊಂದಿಗೆ ಕೆಲಸ ಮಾಡುತ್ತಿದ್ದರು. ಆಕೆಯೊಂದಿಗೆ ಪ್ರಜ್ವಲ್‌ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯದ ವಿಡಿಯೋ ನೋಡಿ ಭಯವಾಗಿದ್ದು ತನ್ನ ಗಂಡ ಕೂಡ ತನ್ನ ಶೀಲ ಶಂಕಿಸುತ್ತಿದ್ದಾರೆ. ವಿಡಿಯೋ ಬಹಿರಂಗಗೊಂಡರೆ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಮಾನಸಿಕ ಹಿಂಸೆ ಆಗಿದೆ ಎಂದು ದೂರಿನಲ್ಲಿ ಮಹಿಳೆ ವಿವರಿಸಿದ್ದರು.

ತಮಗೆ ಜೀವ ಭಯ ಇರುವುದರಿಂದ ತಮಗೆ ಹಾಗೂ ತಮ್ಮ ಮಗಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಎಚ್‌ ಡಿ ರೇವಣ್ಣ ಹಾಗೂ ಪ್ರಜ್ವಲ್‌ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು.

ಈ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಸಂತ್ರಸ್ತೆಯ ಘನತೆಗೆ ಹಾನಿ ಮತ್ತು ಲೈಂಗಿಕ ದೌರ್ಜನ್ಯ ಆರೋಪ ಉಳಿಸಲಾಗಿದ್ದು, ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಆರೋಪವನ್ನು ಆನಂತರ ಸೇರ್ಪಡೆ ಮಾಡಲಾಗಿದೆ.

ಈ ಮಧ್ಯೆ, ಸಂತ್ರಸ್ತೆಯನ್ನು ಅಪಹರಿಸಿದ ಸಂಬಂಧ ರೇವಣ್ಣ, ಅವರ ಪತ್ನಿ ಭವಾನಿ ಸೇರಿದಂತೆ ಒಂಭತ್ತು ಮಂದಿಯ ವಿರುದ್ಧ ಕೆ ಆರ್‌ ಪೇಟೆಯಲ್ಲಿ ಬೇರೊಂದು ಪ್ರಕರಣ ದಾಖಲಾಗಿದೆ. ಇದರಲ್ಲಿ ರೇವಣ್ಣ ಮೊದಲ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ.