ದರೋಡೆಗೆ ಯತ್ನಿಸಿದ ಆರೋಪದಲ್ಲಿ ಎರಡು ವರ್ಷಕ್ಕೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ನೀಡಲಾಗಿದ್ದ ಜಾಮೀನು ರದ್ದುಪಡಿಸುವಂತೆ ಮನವಿ ಮಾಡಿದ್ದ ಬೆಂಗಳೂರು ನಗರದ ರೈಲ್ವೆ ಠಾಣಾ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಆರೋಪಿ ಸ್ಟೀಫನ್‌ಗೆ ಜಾಮೀನು ನೀಡಿ 52ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ರೈಲ್ವೆ ಪೊಲೀಸ್ ಠಾಣಾಧಿಕಾರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ಮೇಲಿನ ಆದೇಶ ಮಾಡಿದೆ.
ಪ್ರಕರಣದ ಸಂಬಂಧ 2018ರ ಆಗಸ್ಟ್ 7ರಂದು ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಸಿದ್ದ ಪೊಲೀಸರು 2018ರ ಡಿಸೆಂಬರ್ 20ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪಿ ಎರಡು ವರ್ಷ ಎರಡು ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದರು. ಆರೋಪ ಸಾಬೀತುಪಡಿಸಲು ಸೂಕ್ತ ದಾಖಲೆಗಳು ಇಲ್ಲ ಎಂಬ ಕಾರಣಕ್ಕೆ ಅಧೀನ ನ್ಯಾಯಾಲಯವು 2020ರ ಅಕ್ಟೋಬರ್ 13ರಂದು ಆರೋಪಿಗೆ ಜಾಮೀನು ನೀಡಿದೆ. ಆದರೆ, ಸೂಕ್ತ ಕಾರಣಗಳು ಇಲ್ಲದಿದ್ದರೂ ರೈಲ್ವೆ ಪೊಲೀಸರು ಜಾಮೀನು ರದ್ದತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದು ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆಯಾಗಿದ್ದು, ದಂಡ ಸಹಿತ ಅರ್ಜಿ ವಜಾಗೊಳಿಸಲು ಇದು ಸೂಕ್ತ ಪ್ರಕರಣ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಅಲ್ಲದೆ, ರೈಲ್ವೆ ಪೊಲೀಸರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಈ ಆದೇಶ ಪ್ರತಿ ಲಭ್ಯವಾದ ದಿನದಿಂದ ನಾಲ್ಕು ವಾರದಲ್ಲಿ ದಂಡದ ಮೊತ್ತವನ್ನು ವಕೀಲರ ಗುಮಾಸ್ತರ ಕಲ್ಯಾಣ ಸಂಘಕ್ಕೆ ಪಾವತಿಸುವಂತೆ ರೈಲ್ವೆ ಪೊಲೀಸರಿಗೆ ನಿರ್ದೇಶಿಸಿದೆ.
2018ರ ಆಗಸ್ಟ್ 7ರಂದು ರಾತ್ರಿ 8 ಗಂಟೆಗೆ ಸ್ಟೀಫನ್ ಹಾಗೂ ಆತನ ಸ್ನೇಹಿತರು ದರೋಡೆ ಮಾಡುವುದಕ್ಕಾಗಿ ನಗರದ ಓಕಳೀಪುರ ರೈಲ್ವೆ ಸೇತುವೆ ಬಳಿಯ ಪೊದೆಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಅವಿತುಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಸ್ಟೀಫನ್ ಹಾಗೂ ಇತರರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಪ್ರಕರಣ ಸಂಬಂಧ ಸ್ಟೀಫನ್ ನ್ಯಾಯಾಂಗ ಬಂಧನದಲ್ಲಿದ್ದರು. ನಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನಗರದ 52ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಜಾಮೀನು ನೀಡಿ 2020ರ ಅಕ್ಟೋಬರ್ 13ರಂದು ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ರೈಲ್ವೆ ಠಾಣಾ ಪೊಲೀಸರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.