ಬೆಂಗಳೂರಿನಲ್ಲಿ ಗುಂಡಿಬಿದ್ದ ರಸ್ತೆಗಳಿಂದ ಜನರು ಸಾಯುವುದನ್ನು ನೋಡಲಾಗದು. ಎಲ್ಲಿಯವರೆಗೆ ನಾವು ಇದನ್ನು ಸಹಿಸಿಕೊಳ್ಳಬೇಕು? ನೀವು (ಬಿಬಿಎಂಪಿ) ಸಂವೇದನಾ ಶೂನ್ಯರಾಗಿದ್ದೀರಿ. ನಿಂದಿಸುವುದನ್ನೂ ಸೇರಿದಂತೆ ನಾವೂ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೂ ನೀವು ಕೆಲಸದ ಬಗೆ ಗಂಭೀರವಾಗಿಲ್ಲ. ಈಗ ನಾವೇ ಕ್ರಿಯಾ ಯೋಜನೆ ರೂಪಿಸಿ ಕೆಲಸ ಮಾಡಿ ಎಂದು ನೀಡಬೇಕಿದೆ. ಗುಂಡಿಬಿದ್ದ ರಸ್ತೆಗಳಿಂದ ಯಾರೋ ಒಬ್ಬರು ಸತ್ತಿದ್ದಾರೆ ಎಂಬ ಪತ್ರಿಕಾ ವರದಿಗಳನ್ನು ನೋಡಿದಾಗ ನಮಗೆ ಪಾಪ ಪ್ರಜ್ಞೆ ಕಾಡುತ್ತದೆ ಎಂದು ಬಿಬಿಎಂಪಿ ವಿರುದ್ದ ಕರ್ನಾಟಕ ಹೈಕೋರ್ಟ್ ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ನಿಮ್ಮ ಎಂಜಿನಿಯರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ನೀವು ನೀಡುವ ಸ್ಥಿತಿಗತಿ ವರದಿಯನ್ನು ನೋಡಿ ನಾವು ಪ್ರಧಾನ ಎಂಜಿನಿಯರ್ ಅವರಿಗೆ ಕಲಾಪದಲ್ಲಿ ಭಾಗವಹಿಸುವುದರಿಂದ ವಿನಾಯಿತಿ ನೀಡುವ ಕುರಿತು ಯೋಚಿಸುತ್ತೇವೆ. ಇಲ್ಲವಾದಲ್ಲಿ ಏನಾಗುತ್ತದೋ ನಮಗೆ ಗೊತ್ತಿಲ್ಲ ಎಂದು ಪೀಠವು ಎಚ್ಚರಿಕೆ ನೀಡಿದೆ.
ಸುಧಾರಿತ ತಂತ್ರಜಾನ ಹೊಂದಿರುವ ಯಂತ್ರವನ್ನು ಬಳಸಿ ಗುಣಮಟ್ಟದ ರಸ್ತೆ ನಿರ್ಮಾಣವಾಗಬೇಕು. ಬೆಂಗಳೂರಿನ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ವ್ಯಾಪ್ತಿಯಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ರಿಪೇರಿ ಮಾಡುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು. 15 ದಿನಗಳಲ್ಲಿ ಆ ಕೆಲಸ ಮುಗಿಯಬೇಕು ಎಂದು ಪೀಠವು ಗಡುವು ವಿಧಿಸಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು “ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ನೀವು (ಬಿಬಿಎಂಪಿ) ಕ್ರಿಯಾ ಯೋಜನೆ ಸಿದ್ಧಪಡಿಸಿದ್ದೀರಾ? ಬಿಬಿಎಂಪಿ 14 ಸಾವಿರ ಕಿ ಮೀ ರಸ್ತೆ ನಿರ್ವಹಣೆ ಮಾಡಬೇಕು ಎಂದು ನಮಗೆ ತಿಳಿಸಲಾಗಿದೆ. ಸಿಬಿಡಿಗೆ ಸಂಬಂಧಿಸಿದ ಕ್ರಿಯಾ ಯೋಜನೆ ಎಲ್ಲಿ? ಯಾವ ರಸ್ತೆ ಹಾಳಾಗಿದೆ ಎಂಬುದನ್ನು ಪತ್ತೆ ಹಚ್ಚಲು ಸಮೀಕ್ಷೆ ಮಾಡಿ. ಇದಕ್ಕೆ ಅಗತ್ಯ ಬಿದ್ದರೆ ರಸ್ತೆ ಗುಂಡಿ ಮುಚ್ಚಲು ಪರಿಗಣತಿ ಹೊಂದಿರುವ ಸಂಸ್ಥೆಯನ್ನು ಸೇರಿಸಿಕೊಂಡು ಜಂಟಿ ಸಮೀಕ್ಷೆ ನಡೆಸಿ” ಎಂದು ಬಿಬಿಎಂಪಿಗೆ ಸೂಚಿಸಿತು.
“ನಮಗೆ ಸಲ್ಲಿಸಲಾಗಿರುವ ಮೆಮೊದಲ್ಲಿ ಕೇವಲ 442 ಕಿ. ಮೀ ರಸ್ತೆಯನ್ನು ತಕ್ಷಣಕ್ಕೆ ಮುಚ್ಚಬೇಕು ಎಂದು ಹೇಳಲಾಗಿದೆ. ಇಡೀ ಒಂದು ಪ್ರದೇಶದ ರಸ್ತೆ ಸಮೀಕ್ಷೆ, ನಿರ್ವಹಣೆ ಮತ್ತು ನಿರ್ಮಾಣದ ಕೆಲಸವನ್ನು ಒಂದು ಏಜೆನ್ಸಿಗೆ ನೀಡಿ. ನೀವು ಅದನ್ನು ಮೇಲ್ವಿಚಾರಣೆ ಮಾಡಿ. ಆದರೆ, ಅದನ್ನು ನೀವು ಮಾಡುತ್ತಿಲ್ಲ. ನೀವೇ ಸಮೀಕ್ಷೆ ಮಾಡುತ್ತೀರಿ. ಅದನ್ನು ಆಧರಿಸಿ ಗುಂಡಿ ಮುಚ್ಚಲು ನೀಡಬೇಕೋ, ಬೇಡವೋ ಎಂದು ನಿರ್ಧರಿಸುತ್ತೀರಿ. ಇದನ್ನೇ ಆಧರಿಸಿ ನೀವು ಈಗ 442 ಕಿ ಮೀ ಪ್ರದೇಶದಲ್ಲಿ ಗುಂಡಿ ಮುಚ್ಚ ಬೇಕು ಎಂದು ಹೇಳುತ್ತಿದ್ದೀರಿ. ಇದನ್ನು ಒಂದು ಏಜೆನ್ಸಿಗೆ ನೀಡುತ್ತಿದ್ದೀರಿ. ಉಳಿದ ರಸ್ತೆಗಳ ಕತೆ ಏನು? ಅವೆಲ್ಲವೂ ಚೆನ್ನಾಗಿದ್ದಾವಾ? ಎಂದು ಪೀಠವು ಪ್ರಹಾರ ನಡೆಸಿತು.
ಇದಕ್ಕೂ ಮುನ್ನ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ಎರಡು ದಿನಗಳ ಹಿಂದೆ ರಸ್ತೆ ಗುಂಡಿಯಿಂದ ಸಾವು ಸಂಭವಿಸಿದೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಆ ರಸ್ತೆಯನ್ನು ಆರು ತಿಂಗಳ ಹಿಂದೆಯಷ್ಟೇ ರೂಪಿಸಲಾಗಿತ್ತು. ಯಾವ ಏಜೆನ್ಸಿ ರಸ್ತೆಯನ್ನು ಅಗೆದಿತ್ತು ಎಂಬುದರ ತನಿಖೆಯನ್ನು ನಾವು ಮಾಡುತ್ತಿದ್ದೇವೆ. ನಾವು ರಸ್ತೆ ರೂಪಿಸುತ್ತೇವೆ. ಇನ್ಯಾರೋ ಬಂದು ಅಲ್ಲಿ ಅಗೆಯುತ್ತಾರೆ. ಇದಕ್ಕಾಗಿ ಎಲ್ಲಾ ಏಜೆನ್ಸಿಗಳ ಜೊತೆ ಸಮನ್ವಯ ಸಾಧಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇಂದು ನಾವು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಅದೇ ಎಂದೆನಿಸುತ್ತದೆ. ಹೀಗಾಗಿ, ಆ ಎಲ್ಲಾ ಏಜೆನ್ಸಿಗಳನ್ನು ಮನವಿಯಲ್ಲಿ ಪ್ರತಿವಾದಿಗಳನ್ನಾಗಿಸಲು ಅನುಮತಿಸಬೇಕು. ಈ ಸಂಬಂಧ ನಾನು ಮನವಿ ಸಲ್ಲಿಸುತ್ತೇನೆ” ಎಂದರು.
“ಸಿಬಿಡಿಗೆ ಸಂಬಂಧಿಸಿದಂತೆ ನಾವು ಮೆಮೊ ಸಲ್ಲಿಸಿದ್ದೇವೆ. ಸಿಬಿಡಿ ವ್ಯಾಪ್ತಿಯಲ್ಲಿ ಎಲ್ಲಾ ರಸ್ತೆಗಳು ಹಾಳಾಗಿಲ್ಲ. ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ 442 ಕಿ ಮೀ ರಸ್ತೆ ಹಾಳಾಗಿದ್ದು, ಅವುಗಳನ್ನು ನಾವು ಪತ್ತೆ ಹಚ್ಚಿದ್ದೇವೆ. ಇಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಅಮೆರಿಕನ್ ರೋಡ್ ಟೆಕ್ನಾಲಜೀಸ್ ಅಂಡ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನೀಡಲಾಗಿದೆ. ನಮ್ಮ ಅಧಿಕಾರಿಗಳು ರಸ್ತೆ ಸಮೀಕ್ಷೆ ನಡೆಸಿ, ಎಷ್ಟು ಉದ್ದದ ರಸ್ತೆ ಸರಿಪಡಿಸಬೇಕು, ಯಾವ ಪ್ರದೇಶ ಎಂಬುದನ್ನು ಪತ್ತೆ ಮಾಡಿದ್ದಾರೆ. ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಎಲ್ಲಾ ರಸ್ತೆಗಳು ಚೆನ್ನಾಗಿವೆ ಎಂದು ನಾವು ಹೇಳಲಾಗದು. ಬಿಬಿಎಂಪಿ ಮುಖ್ಯ ಆಯುಕ್ತರು, ಎಂಜಿನಿಯರ್‌ಗಳ ಜೊತೆ ಸಭೆ ನಡೆಸಿ, ಪೈಥಾನ್ ಯಂತ್ರ ಹೊಂದಿರುವ ಏಜೆನ್ಸಿ ಜೊತೆ ಸೇರಿ ಗುಂಡಿ ಬಿದ್ದಿರುವ ರಸ್ತೆಗಳ ಸಮೀಕ್ಷೆ ನಡೆಸಲಾಗುವುದು” ಎಂದರು.
ಸಿಬಿಡಿ ವ್ಯಾಪ್ತಿ ಎಷ್ಟು? ಸಿಬಿಡಿಯಲ್ಲಿ ಯಾವೆಲ್ಲಾ ಪ್ರದೇಶಗಳು ಬರುತ್ತವೆ? ಎಷ್ಟು ರಸ್ತೆ ಬರುತ್ತವೆ? ಸಿಬಿಡಿ ವ್ಯಾಪ್ತಿಗೆ ಸಿ ವಿ ರಾಮನ್ ನಗರ ಬರುತ್ತದೆ ಎಂದು ಹೇಳುತ್ತಿದ್ದೀರಾ? ನೀವು ಸಲ್ಲಿಸಿರುವ ಮೆಮೊ ಸಂಪೂರ್ಣವಾಗಿ ತಪ್ಪಿನಿಂದ ಕೂಡಿದೆ. ಸಿಬಿಡಿ ವ್ಯಾಪ್ತಿಗೆ ಬಿಟಿಎಂ ಲೇಔಟ್ ಬರುತ್ತದೆ ಎಂದು ಹೇಳಿದ್ದೀರಿ. ಆಮೇಲೆ ಸಿಬಿಡಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲಾಗಿದೆ ಎಂದು ಹೇಳುವುದು ನಿಮ್ಮ ಉದ್ದೇಶ. ಪ್ರಧಾನ ಎಂಜಿನಿಯರ್ ಅವರೇ ನೀವು ಮೆಮೊಗೆ ಸಹಿ ಮಾಡಿದ್ದೀರಿ. ಸಿಬಿಡಿಗೆ 70 ವಾರ್ಡ್‌ಗಳು ಬರಬಹುದು. ಇಲ್ಲಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಅವರು ಸಮೀಕ್ಷೆ ನಡೆಸಿ, ಎಷ್ಟು ಗುಂಡಿಗಳಿವೆ ಎಂಬುದನ್ನು ಪತ್ತೆ ಹಚ್ಚಿ, ಅವುಗಳ ಫೋಟೊ ಮತ್ತು ಆನಂತರ ಅವುಗಳನ್ನು ಮುಚ್ಚಿರುವುದರ ಕುರಿತು ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಕೃಷ್ಣ ಕುಮಾರ್ ಹೇಳಿದರು.
ಇದಕ್ಕೆ ಶ್ರೀನಿಧಿ ಅವರು “ಸಿಬಿಡಿ ವ್ಯಾಪ್ತಿ ಎಷ್ಟು ಕಿ ಮೀ ಎಂಬುದನ್ನು ಸಮೀಕ್ಷೆ ಮಾಡಿ ಹೇಳುತ್ತೇವೆ. ಬಿಟಿಎಂ ಲೇಔಟ್, ಸರ್ವಜ್ಞನಗರ, ಸಿ ವಿ ರಾಮನ್ ನಗರ, ಹೆಬ್ಬಾಳ, ಮಲ್ಲೇಶ್ವರಂ, ಮಹಾಲಕ್ಷ್ಮಿಪುರಂ, ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ ಸಿಬಿಡಿ ವ್ಯಾಪ್ತಿಗೆ ಬರುತ್ತವೆ” ಎಂದರು.
ಸುದೀರ್ಘ ವಾದ-ಪ್ರತಿವಾದ ಆಲಿಸಿದ ಪೀಠವು ಕೆಟ್ಟ ರಸ್ತೆಗಳಿಂದಾಗಿ ಯುವಕನೊಬ್ಬ ಎರಡು ದಿನಗಳ ಹಿಂದೆ ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ ಎಂಬ ವಿಚಾರವನ್ನು ನಮ್ಮ ಗಮನಕ್ಕೆ ತರಲಾಗಿದೆ. ಯುವಕನ ಅಕಾಲಿಕ ಸಾವಿಗೆ ನಾವು ವಿಷಾದಿಸುತ್ತೇವೆ. ಸಿಬಿಡಿ ವ್ಯಾಪ್ತಿಯಲ್ಲಿನ ರಸ್ತೆಗಳಲ್ಲಿನ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ನಾವು ಹಿಂದಿನ ವಿಚಾರಣೆಯಲ್ಲಿ ನೀಡಿದ್ದ ನಿರ್ದೇಶನದಂತೆ ಬಿಬಿಎಂಪಿ ಇಂದು ಮೆಮೊ ಸಲ್ಲಿಸಿದೆ. ಆದರೆ, ಅದು ತೃಪ್ತಿದಾಯಕವಾಗಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ಪ್ರಧಾನ ಎಂಜಿನಿಯರ್ ಎಸ್ ಪ್ರಭಾಕರ್ ಅವರ ಜೊತೆ ಸಮಸ್ಯೆ ಕುರಿತು ಚರ್ಚಿಸಿದ್ದು, ಸಿಬಿಡಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು. ಇದನ್ನು 15 ದಿನಗಳಲ್ಲಿ ಮಾಡಬೇಕು. ಸಿಬಿಡಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿ ಪತ್ತೆ ಸಮೀಕ್ಷೆಯನ್ನು ಮೂರು ದಿನಗಳಲ್ಲಿ ಮಾಡಬೇಕು. ಇದಕ್ಕೆ ಈಗಾಗಲೇ ಕೆಲಸ ನೀಡಲಾಗಿರುವ ಅಮೆರಿಕನ್ ರೋಡ್ ಟೆಕ್ನಾಲಜೀಸ್ ಅಂಡ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.
ಎಲ್ಲಾ ಪ್ರಮುಖ ರಸ್ತೆಗಳಲ್ಲಿ ತಕ್ಷಣ ಗುಂಡಿ ಮುಚ್ಚುವ ಕೆಲಸ ಆರಂಭವಾಗಬೇಕು. ಇದಕ್ಕೆ ಸೂಕ್ತ ತಂತ್ರಜ್ಞಾನವನ್ನು ಒಳಗೊಂಡಿರುವ ಯಂತ್ರವನ್ನು ಬಳಕೆ ಮಾಡಬೇಕು. ಬಿಬಿಎಂಪಿ ಆಯುಕ್ತ ಮತ್ತು ಪ್ರಧಾನ ಎಂಜಿನಿಯರ್ ಸಮರೋಪಾದಿಯಲ್ಲಿ ರಸ್ತೆ ರಿಪೇರಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೇ, ಅಭವೃದ್ಧಿ ಕೆಲಸಗಳ ಹಿನ್ನೆಲೆಯಲ್ಲಿ ರಸ್ತೆ ಅಗೆದಿರುವ ಎಲ್ಲಾ ಸಂಬಂಧಿತ ಏಜೆನ್ಸಿಗಳನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿಸಲು ಅನುಮತಿಸಲಾಗಿದೆ. ರಸ್ತೆ ಗುಂಡಿ ಕುರಿತಾದ ಸಮೀಕ್ಷೆ ಮತ್ತು ಸ್ಥಿತಿಗತಿ ವರದಿಯನ್ನು ಮುಂದಿನ ವಿಚಾರಣೆ ವೇಳಗೆ ಬಿಬಿಎಂಪಿಯು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿರುವ ಪೀಠವು ವಿಚಾರಣೆಯನ್ನು 15 ದಿನ ಮುಂದೂಡಿತು.