Google, Karnataka High Court 
ಸುದ್ದಿಗಳು

ಗೌಪ್ಯ ಮಾಹಿತಿ ಹಂಚಿಕೊಳ್ಳಲು ಗೂಗಲ್‌ಗೆ ನಿರ್ದೇಶಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ ಆದೇಶಕ್ಕೆ ಹೈಕೋರ್ಟ್‌ ತಡೆ

2022ರ ಏಪ್ರಿಲ್‌ 18ರಂದು ಎಡಿಐಎಫ್‌ಗೆ ಗೌಪ್ಯ ಮಾಹಿತಿ ನೀಡಲು ಗೂಗಲ್‌ಗೆ ಸಿಸಿಐ ನಿರ್ದೇಶಿಸಿದೆ. ಇದಕ್ಕೆ ಕಾಯಿದೆಯಲ್ಲಿ ಅವಕಾಶವಿಲ್ಲ ಎಂದು ಅರ್ಜಿದಾರ ಗೂಗಲ್‌ ವಾದಿಸಿದೆ.

Siddesh M S

ಗೂಗಲ್‌ನ ಗೌಪ್ಯತಾ ವಲಯದೊಳಗೆ ಪ್ರತಿವಾದಿಗಳಾದ ಅಲಯನ್ಸ್‌ ಆಫ್‌ ಡಿಜಿಟಲ್‌ ಇಂಡಿಯಾ ಫೌಂಡೇಶನ್‌ಅನ್ನು (ಎಡಿಐಎಫ್‌) ಸೇರಿಸಿಕೊಂಡು ಅವರ ಜೊತೆ ಗೌಪ್ಯ ಮಾಹಿತಿ ಹಂಚಿಕೊಳ್ಳುವಂತೆ ನಿರ್ದೇಶಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಮುಂದಿನ ವಿಚಾರಣೆಯವರೆಗೆ ತಡೆ ನೀಡಿ ಮಂಗಳವಾರ ಆದೇಶಿಸಿದೆ.

ಭಾರತೀಯ ಸ್ಪರ್ಧಾ ಆಯೋಗದ ಆದೇಶ ಪ್ರಶ್ನಿಸಿ ಗೂಗಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಅಲ್ಫಾಬೆಟ್‌ ಇಂಕ್‌, ಗೂಗಲ್‌ ಎಲ್‌ಎಲ್‌ಸಿ, ಗೂಗಲ್‌ ಐರ್ಲೆಂಡ್‌ ಲಿಮೆಟೆಡ್‌, ಗೂಗಲ್‌ ಇಂಡಿಯಾ ಡಿಜಿಟಲ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಗೌಪ್ಯ ಮಾಹಿತಿಯನ್ನು ಎಡಿಐಎಫ್‌ ಪಡೆಯಲು ಈಗ ಅನುಮತಿಸಲಾಗದು. ಸಿಸಿಐ ಮುಂದಿರುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗೂಗಲ್‌ ಸಂಸ್ಥೆಯು ಕಾಲಾನುಕ್ರಮ (ಟೈಮ್‌ಲೈನ್‌) ಪಾಲಿಸಬೇಕು. ಇಲ್ಲಿನ ಯಾವುದೇ ಅಭಿಪ್ರಾಯವು ಅಂತಿಮ ಎಂದು ಪರಿಗಣಿಸಬೇಕಿಲ್ಲ. ಇದು ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

2022ರ ಏಪ್ರಿಲ್‌ 18ರಂದು ಎಡಿಐಎಫ್‌ಗೆ ಗೌಪ್ಯ ಮಾಹಿತಿ ನೀಡಲು ಗೂಗಲ್‌ಗೆ ಸಿಸಿಐ ನಿರ್ದೇಶಿಸಿದೆ. ಇದಕ್ಕೆ ಕಾಯಿದೆಯಲ್ಲಿ ಅವಕಾಶವಿಲ್ಲ ಎಂದು ಅರ್ಜಿದಾರ ಗೂಗಲ್‌ ಹೇಳಿದೆ. ಆದೇಶ ಮಾಡುವಾಗ ಸಿಸಿಐ ನಿಯಮಗಳನ್ನು ಪಾಲಿಸಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದೂ ಪೀಠವು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಗೂಗಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಗೋಪಾಲ್‌ ಸುಬ್ರಮಣಿಯಮ್‌ ಅವರು “ಭಾರತೀಯ ಸ್ಪರ್ಧಾ ಆಯೋಗವೇ ರೂಪಿಸಿರುವ ಶಾಸನಬದ್ಧ ನಿಯಮಗಳನ್ನು ಇಲ್ಲಿ ಪರಿಗಣಿಸಬೇಕಿದೆ. ಇದು ಯುರೋಪಿಯನ್‌ ನಿಯಂತ್ರಣಗಳಿಗೆ ಸಮನಾಗಿದೆ. ಸೂಕ್ಷ್ಮವಾದ ವಾಣಿಜ್ಯ ಮಾಹಿತಿಯನ್ನು ಪಡೆಯಲು ಎಡಿಐಎಫ್‌ಗೆ ಅನುಮತಿಸಲಾಗದು. ವಿಸ್ತೃತವಾಗಿ ಆಲಿಸದ ಹೊರತು ನಮ್ಮ ಗೌಪ್ಯ ಮಾಹಿತಿಯನ್ನು ಸಿಸಿಐಯು ಎಡಿಐಎಫ್‌ ಜೊತೆ ಹಂಚಿಕೊಳ್ಳುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ” ಎಂದರು.

“ಎಡಿಐಎಫ್‌ ತಮ್ಮ ವರದಿಯನ್ನು ಸಿಸಿಐ ಮಹಾನಿರ್ದೇಶಕರಿಗೆ ಸಲ್ಲಿಸಿದೆ. ಇಲ್ಲಿ ಪ್ರತಿಕ್ರಿಯೆ ದಾಖಲಿಸಿದ್ದು, ಅವರು ಗೌಪ್ಯ ಸುತ್ತಿನಲ್ಲಿ ಸದಸ್ಯರಾಗಿ ಭಾಗವಹಿಸುವ ಅಗತ್ಯವಿಲ್ಲ. ಇದನ್ನೂ ಪೀಠ ಪರಿಗಣಿಸಬೇಕು. 2022ರ ಏಪ್ರಿಲ್‌ 8ರಂದು ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ. ಇದರ ನಡುವೆಯೂ ಸಿಸಿಐ ಆದೇಶ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ” ಎಂದು ಆಕ್ಷೇಪಿಸಿದರು.

ಎಡಿಐಎಫ್‌ ಪ್ರತಿನಿಧಿಸಿದ್ದ ವಕೀಲ ಅಬೀರ್‌ ರಾಯ್‌ ಅವರು “ಗೌಪ್ಯತಾ ವಲಯದಲ್ಲಿ ಕೆಲವೇ ಕೆಲವು ಸದಸ್ಯರು ಮಾಹಿತಿಯನ್ನು ಪಡೆಯುತ್ತಾರೆ. ಈ ಪಟ್ಟಿಯಲ್ಲಿ ನಾನು ಹಾಗೂ ಇನ್ನಿಬ್ಬರು ಸಹೋದ್ಯೋಗಿಗಳು ಸೇರಿರುತ್ತೇವೆ. ಎಡಿಐಎಫ್‌ ಸೇರಿದಂತೆ ಯಾರ ಜೊತೆಗೂ ಆ ಮಾಹಿತಿಯನ್ನೂ ಹಂಚಿಕೊಳ್ಳುವುದಿಲ್ಲ. ಇದನ್ನು ಸ್ಪಷ್ಟವಾಗಿ ನಾವು ಹೇಳುತ್ತಿದ್ದೇವೆ. ನಾವು ಮಾಧ್ಯಮ ಅಥವಾ ಮೂರನೇ ವ್ಯಕ್ತಿಯ ಜೊತೆ ಮಾಹಿತಿ ಸೋರಿಕೆ ಮಾಡುತ್ತೇವೆ ಎಂಬುದು ಗೂಗಲ್‌ ವಾದವಾದರೆ ಈ ಪ್ರಕರಣವನ್ನು ವಿಸ್ತೃತವಾಗಿ ಆಲಿಸಬೇಕಾಗುತ್ತದೆ. ಕಾಲಹರಣ ಮಾಡುವ ಪ್ರಯತ್ನವನ್ನು ಗೂಗಲ್‌ ಮಾಡುತ್ತಿದೆ. ಸಿಸಿಐ ಮಹಾನಿರ್ದೇಶಕರ ಆದೇಶದ ಪ್ರಕಾರ ಗೂಗಲ್‌ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ನೀಡಬೇಕು” ಎಂದು ತಗಾದೆ ಎತ್ತಿದರು.

ಆಗ ಪೀಠವು ಉಭಯ ಪಕ್ಷಕಾರರನ್ನು ಆಲಿಸಿ ವಿಸ್ತೃತವಾದ ಮಧ್ಯಂತರ ಆದೇಶ ಮಾಡುವ ಸ್ಥಿತಿ ಈಗ ಇಲ್ಲ. ಮುಂದಿನ ವಿಚಾರಣೆಯವರೆಗೆ ಯಾವ ತೆರನಾದ ಆದೇಶ ಮಾಡಬೇಕು ಎಂಬುದರ ಸಲಹೆ ಮಾಡಿ. ಗೌಪ್ಯತೆ ಮಾಹಿತಿ ಪಡೆಯಲು ಎಡಿಐಎಫ್‌ ಅರ್ಹವೇ ಎಂಬುದನ್ನು ತಿಳಿಯುವುದಕ್ಕೆ ಸಂಬಂಧಿಸಿದಂತೆ ವಾದ ಆಲಿಸಲು ನಾವು ದಿನ ನಿಗದಿಪಡಿಸುತ್ತೇವೆ. ಅಂದು ಮಧ್ಯಂತರ ಕೋರಿಕೆಗೆ ಸಂಬಂಧಿಸಿದಂತೆ ವಾದ ಆಲಿಸಿ, ಆದೇಶ ಮಾಡಲಾಗುವುದು ಎಂದು ಹೇಳಿ, ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿತು.