ಸುದ್ದಿಗಳು

ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆ; ಖುದ್ದು ಹಾಜರಾತಿಯಿಂದ ವಿನಾಯಿತಿ

ಹೈಕೋರ್ಟ್‌ ಆದೇಶದಿಂದಾಗಿ ನಾಳೆ (ಮಾರ್ಚ್​ 15ರಂದು) ವಿಶೇಷ ನ್ಯಾಯಾಲಯವು ಖುದ್ದು ವಿಚಾರಣೆ ಹಾಜರಾಗುವಂತೆ ಬಿಎಸ್‌ವೈ ಮತ್ತಿತರರಿಗೆ ಜಾರಿ ಮಾಡಿದ್ದ ಸಮನ್ಸ್‌ಗೆ ಯಾವುದೇ ಮಾನ್ಯತೆ ಇಲ್ಲದಂತಾಗಿದೆ.

Bar & Bench

ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮತ್ತು ಇತರೆ ಮೂವರ ವಿರುದ್ಧದ ಪೋಕ್ಸೊ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆವರೆಗೆ ವಿಚಾರಣಾಧೀನ ನ್ಯಾಯಾಲಯ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ. ಎರಡನೇ ಸುತ್ತಿನ ದಾವೆಯಲ್ಲಿ ಸದ್ಯಕ್ಕೆ ಬಿಎಸ್‌ವೈ ನಿರಾಳರಾದಂತಾಗಿದೆ.

ಪೋಕ್ಸೊ ಪ್ರಕರಣ ಮತ್ತು 2025ರ ಮಾರ್ಚ್​ 15ರಂದು ಖುದ್ದು ವಿಚಾರಣೆ ಹಾಜರಾಗುವಂತೆ ವಿಶೇಷ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್​ ರದ್ದತಿ ಕೋರಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವೈ ಎಂ ಅರುಣ, ರುದ್ರೇಶ್‌ ಮರಳುಸಿದ್ದಯ್ಯ ಮತ್ತು ಜಿ ಮರಿಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಏಕಸದಸ್ಯ ಪೀಠ ನಡೆಸಿತು.

Justice Pradeep Singh Yerur

ವಾದ ಪ್ರತಿವಾದ ಆಲಿಸಿದ ಪೀಠವು “ಯಡಿಯೂರಪ್ಪ ಮತ್ತು ಇತರರ ವಿರುದ್ದದ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಇರುವ ಪೋಕ್ಸೊ ಕಾಯಿದೆ ಮತ್ತು ಐಪಿಸಿ ಸೆಕ್ಷನ್‌ಗಳಾದ 354A, 204, 214 ಜೊತೆಗೆ 37ರ ಅಡಿ ಪ್ರಕರಣಕ್ಕೆ ತಡೆ ನೀಡಲಾಗಿದೆ. ಎಲ್ಲಾ ಅರ್ಜಿದಾರರಿಗೂ ವಿಚಾರಣಾಧೀನ ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಯಿಂದ ಮುಂದಿನ ವಿಚಾರಣೆವರೆಗೆ ವಿನಾಯಿತಿ ಕಲ್ಪಿಸಲಾಗಿದೆ” ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

ಬಿಎಸ್‌ವೈ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಒಂದು ತಿಂಗಳು ಹನ್ನೆರಡು ದಿನದ ನಂತರ ಸಂತ್ರಸ್ತೆ ಮತ್ತು ದೂರುದಾರೆ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆ ಮತ್ತು ದೂರುದಾರರ ಹೇಳಿಕೆ ಸತ್ಯದಿಂದ ಕೂಡಿಲ್ಲ. ಈ ಸಂಬಂಧ ಹಿಂದಿನ ದಾವೆಯ ಸಂದರ್ಭದಲ್ಲಿ ಸಮನ್ವಯ ಪೀಠವು ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆ ತಡೆ ನೀಡಿತ್ತು. ಈಗಲೂ ಸಂಜ್ಞೇ ಪರಿಗಣಿಸುವಾಗ ಲೋಪವಾಗಿದೆ. ಐಪಿಸಿ ಸೆಕ್ಷನ್‌ 204 ಮತ್ತು 214ರ ಅಡಿ ಯಾವುದೇ ಆಧಾರವಿಲ್ಲದಿದ್ದರೂ ಸಂಜ್ಞೇಯ ಪರಿಗಣಿಸಲಾಗಿದೆ. ಅಲ್ಲದೇ, ವಿಶೇಷ ನ್ಯಾಯಾಲಯವು ನಾಳೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ. ಹೀಗಾಗಿ, ಈ ಅರ್ಜಿ ಇತ್ಯರ್ಥವಾಗುವವರೆಗೆ ತಡೆ ನೀಡಬೇಕು” ಎಂದು ಕೋರಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಹಿಂದಿನ ದಾವೆಯ ಸುತ್ತಿನಲ್ಲಿ ಯಡಿಯೂರಪ್ಪ ಮತ್ತು ಇತರರ ಪ್ರಕರಣದಲ್ಲಿ ತಡೆಯಾಜ್ಞೆ ನೀಡಿರಲಿಲ್ಲ. ಮಧ್ಯಂತರ ಪರಿಹಾರ ನೀಡಲಾಗಿತ್ತು ಅಷ್ಟೆ. ಇದು ಮಧ್ಯಂತರ ಪರಿಹಾರ ನೀಡುವ ಪ್ರಕರಣವಲ್ಲ. ಪ್ರಕರಣ ಮುಂದುವರಿಸಲು ಸಾಕಷ್ಟು ದಾಖಲೆಗಳು ನ್ಯಾಯಾಲಯದ ಮುಂದೆ ಇವೆ. ಮಧ್ಯಂತರ ತಡೆ ನೀಡಿದರೆ ಪ್ರಾಸಿಕ್ಯೂಷನ್‌ಗೆ ಸಮಸ್ಯೆ ಉಂಟಾಗಲಿದೆ. ಇದೆಲ್ಲವನ್ನೂ ಪರಿಗಣಿಸಿ ಸಮನ್ವಯ ಪೀಠವು ಮತ್ತೆ ಸಂಜ್ಞೇ ಪರಿಗಣಿಸಲು ಆದೇಶಿಸಿತ್ತು. ಎಫ್‌ಐಆರ್‌, ಆರೋಪ ಪಟ್ಟಿ ಸಲ್ಲಿಕೆಯನ್ನು ಹಾಗೆ ಉಳಿಸಿತ್ತು” ಎಂದು ಆಕ್ಷೇಪಿಸಿದರು.