ಪೋಕ್ಸೊ ಪ್ರಕರಣ: ಸಮನ್ಸ್ ರದ್ದತಿ ಕೋರಿ ಹೈಕೋರ್ಟ್ ಕದತಟ್ಟಿದ ಮಾಜಿ ಸಿಎಂ ಯಡಿಯೂರಪ್ಪ
ಪೋಕ್ಸೊ ಪ್ರಕರಣದ ಸಂಬಂಧ 2025ರ ಮಾರ್ಚ್ 15ರಂದು ಖುದ್ದು ವಿಚಾರಣೆ ಹಾಜರಾಗುವಂತೆ ವಿಶೇಷ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್ ರದ್ದತಿ ಕೋರಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದರೊಂದಿಗೆ ಬಿಎಸ್‌ವೈ ಅವರು ಎರಡನೇ ಸುತ್ತಿನ ಹೋರಾಟ ಆರಂಭಿಸಿದ್ದಾರೆ.
ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಅವರ ಅರ್ಜಿಯು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಸಿಐಡಿಯನ್ನು ಪ್ರತಿವಾದಿಯನ್ನಾಗಿಸಿ ವಕೀಲರಾದ ಸಂದೀಪ್ ಪಾಟೀಲ್ ಅವರು ವಕಾಲತ್ತು ಹಾಕಿದ್ದಾರೆ.
ಐಪಿಸಿ ಸೆಕ್ಷನ್‌ಗಳಾದ 204 ಮತ್ತು 214ರ ಅಡಿ ಯಾವುದೇ ದಾಖಲೆಗಳು ಇಲ್ಲದಿದ್ದರೂ ವಿಚಾರಣಾಧೀನ ನ್ಯಾಯಾಲಯವು ಯಾಂತ್ರಿಕವಾಗಿ ಸಂಜ್ಞೇಯ (ಕಾಗ್ನಿಜೆನ್ಸ್) ಪರಿಗಣನೆ ಮಾಡಿದೆ. ಲೈಂಗಿಕ ದೌರ್ಜನ್ಯ ಅಪರಾಧ ಎಸಗಿರುವುದನ್ನು ಸಾಬೀತುಪಡಿಸುವ ಯಾವೊಂದು ದಾಖಲೆಯೂ ದೂರು, ಎಫ್‌ಐಆರ್ ಅಥವಾ ಆರೋಪ ಪಟ್ಟಿಯಲ್ಲಿ ಇಲ್ಲ. ಕೇವಲ ದುರುದ್ದೇಶ ಮತ್ತು ಸಮಾಜದಲ್ಲಿ ತಾವು ಗಳಿಸಿರುವ ಗೌರವವನ್ನು ಹಾಳು ಮಾಡಲು ಸುಳ್ಳು ದೂರು ದಾಖಲಿಸಲಾಗಿದೆ. ಸಿಐಡಿ ತನಿಖಾಧಿಕಾರಿಗಳು ಹಲವು ಸ್ವತಂತ್ರ ಸಾಕ್ಷಿಗಳ ವಿಚಾರಣೆಗೊಳಿಸಿದ ನಂತರವೂ ತಾವು ಲೈಂಗಿಕ ದೌರ್ಜನ್ಯ ಎಸಗಿರುವುದಕ್ಕೆ ಯಾವೊಂದು ಸಾಕ್ಷಿಯನ್ನೂ ಆರೋಪ ಪಟ್ಟಿಯಲ್ಲಿ ಒದಗಿಸಿಲ್ಲ. ಕೇವಲ ಸಂತ್ರಸ್ತೆಯ ಹೇಳಿಕೆ ಆಧರಿಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಅರ್ಜಿಯಲ್ಲಿ ಯಡಿಯೂರಪ್ಪ ಆಕ್ಷೇಪಿಸಿದ್ದಾರೆ.
ಹೈಕೋರ್ಟ್ ಈ ಹಿಂದೆ ಹೊರಡಿಸಿರುವ ಆದೇಶ ಉಲ್ಲಂಘಿಸಿ ವಿಶೇಷ ನ್ಯಾಯಾಲಯ ಸಂಜ್ಞೇ ತೆಗೆದಕೊಂಡು ಸಮನ್ಸ್ ಜಾರಿ ಮಾಡಿದೆ. ಆ ಆದೇಶವನ್ನು ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೆ ಸಮನ್ಸ್‌ಗೆ ತಡೆ ನೀಡಬೇಕು ಎಂದು ಬಿಎಸ್‌ವೈ ಕೋರಿದ್ದಾರೆ.
ವಿಶೇಷ ನ್ಯಾಯಾಲಯವು 2024ರ ಜುಲೈ 4ರಂದು ಸಂಜ್ಞೇ ತೆಗೆದುಕೊಂಡು ಜಾರಿಗೊಳಿಸಿದ ಸಮನ್ಸ್ ರದ್ದತಿಗೆ ಕೋರಿ ಈ ಹಿಂದೆ ಯಡಿಯೂರಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು 2025ರ ಫೆಬ್ರವರಿ 7ರಂದು ವಜಾಗೊಳಿಸಿದ್ದ ಹೈಕೋರ್ಟ್, ವಿಶೇಷ ನ್ಯಾಯಾಲಯವು ತೆಗೆದುಕೊಂಡಿದ್ದ ಸಂಜ್ಞೇ ರದ್ದುಪಡಿಸಿತ್ತು. ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್‌ನ ಆದೇಶಗಳನ್ನು ಗಮನದಲ್ಲಿರಿಸಿಕೊಂಡು ಹೊಸದಾಗಿ ಸಂಜ್ಞೇ ತೆಗೆದುಕೊಂಡು ಕಾನೂನು ಪ್ರಕಾರ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿತ್ತು. ಅಲ್ಲದೇ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ನಂತರ ಸಿಐಡಿ ಸಲ್ಲಿಸಿರುವ ಆರೋಪ ಪಟ್ಟಿಯನ್ನು ಆಧರಿಸಿ ವಿಶೇಷ ನ್ಯಾಯಾಲಯವು ಸಂಜ್ಞೇ ತೆಗೆದುಕೊಂಡು ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಮಾರ್ಚ್ 15ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಅದನ್ನು ಪ್ರಶ್ನಿಸಿ ಇದೀಗ ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸಂಬಂಧ ಸಂತ್ರಸ್ತೆಯ ತಾಯಿ 2024ರ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನಂತರ ಸಿಐಡಿಗೆ ತನಿಖೆ ವರ್ಗಾವಣೆಯಾಗಿತ್ತು. ಸಿಐಡಿ ಪೊಲೀಸರು ಯಡಿಯೂರಪ್ಪ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.