Karnataka HC and H D Kumaraswamy 
ಸುದ್ದಿಗಳು

ಎಚ್‌ಡಿಕೆ ವಿರುದ್ಧ ಸರ್ಕಾರಿ ಭೂಮಿ ಒತ್ತುವರಿ ಆರೋಪ: ಎಸ್‌ಐಟಿ ರಚನೆ ಆದೇಶಕ್ಕೆ ಹೈಕೋರ್ಟ್‌ ತಡೆ

ರಾಜ್ಯ ಸರ್ಕಾರವು ಜನವರಿ 28ರಂದು ಎಸ್‌ಐಟಿ ರಚಿಸಿರುವ ಆದೇಶದ ನಂತರ ಔಪಚಾರಿಕವಾಗಿ ಯಾವುದೇ ತೆರನಾದ ಅಧಿಸೂಚನೆಯನ್ನು ಪ್ರಕಟಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದಿರುವ ನ್ಯಾಯಾಲಯ.

Bar & Bench

ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಸೇರಿದ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಸರ್ವೇ ನಂಬರ್‌ 8, 9, 10, 16, 17 ಮತ್ತು 79ರಲ್ಲಿ ನಡೆದಿರುವ ಸರ್ಕಾರಿ ಭೂಮಿಯ ಅನಧಿಕೃತ ಒತ್ತುವರಿ ತೆರವುಗೊಳಿಸುವ ಸಂಬಂಧ ರಾಜ್ಯ ಸರ್ಕಾರವು ಹಿರಿಯ ಐಎಎಸ್‌ ಅಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ತಡೆ ನೀಡಿದೆ.

ಎಸ್‌ಐಟಿ ರಚನೆ ಅಕ್ರಮ ಎಂದು ಆಕ್ಷೇಪಿಸಿ ಮಾಜಿ ಮುಖ್ಯಮಂತ್ರಿಯೂ ಆದ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಇ ಎಸ್‌ ಇಂದಿರೇಶ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice E S Indiresh

ರಾಜ್ಯ ಸರ್ಕಾರವು ಜನವರಿ 28ರಂದು ಎಸ್‌ಐಟಿ ರಚಿಸಿರುವ ಆದೇಶದ ನಂತರ ಔಪಚಾರಿಕವಾಗಿ ಯಾವುದೇ ತೆರನಾದ ಅಧಿಸೂಚನೆಯನ್ನು ಪ್ರಕಟಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ರಚಿಸಿರುವ ಆದೇಶ ಮತ್ತು ಆನಂತರ ಕುಮಾರಸ್ವಾಮಿ ಅವರಿಗೆ ಜಾರಿ ಮಾಡಿರುವ ಸಮನ್ಸ್‌ಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ. ಅಲ್ಲದೇ, ಕಂದಾಯ ಇಲಾಖೆ ಮತ್ತು ರಾಮನಗರ ತಹಶೀಲ್ದಾರ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಕುಮಾರಸ್ವಾಮಿ ಪರವಾಗಿ ವಾದಿಸಿದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಎಸ್‌ಐಟಿ ರಚಿಸಿದ ಬಳಿಕ ಅಧಿಸೂಚನೆ ಹೊರಡಿಸಬೇಕು. ಆದರೆ, ಅದನ್ನು ಮಾಡದೇ ಕುಮಾರಸ್ವಾಮಿ ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿದೆ. ಹೀಗಾಗಿ, ಎಸ್‌ಐಟಿ ರಚನೆ ಆದೇಶ ವಜಾ ಮಾಡಬೇಕು” ಎಂದು ಕೋರಿದರು. ಕುಮಾರಸ್ವಾಮಿ ಪರವಾಗಿ ವಕೀಲ ಎ ವಿ ನಿಶಾಂತ್‌ ವಕಾಲತ್ತು ವಹಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ರಾಮನಗರ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮತ್ತು ಅವರ ಸಂಬಂಧಿಗಳು ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಆಕ್ಷೇಪಿಸಿ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಅರ್ಜಿಯ ಸಂಬಂಧ ಕರ್ನಾಟಕ ಲೋಕಾಯುಕ್ತ ವರದಿಯ ಅನುಸಾರ ಕ್ರಮಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ 2020ರಲ್ಲಿ ಆದೇಶಿಸಿತ್ತು. ಇದನ್ನು ಜಾರಿಗೊಳಿಸಿಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯವು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಿದೆ.

ಒತ್ತುವರಿ ತೆರವಿನ ವಿಚಾರದಲ್ಲಿ ಮೀನಮೇಶ ಎಣಿಸುತ್ತಿರುವ ಸರ್ಕಾರವು ಭೂಮಿ ಒತ್ತುವರಿ ಪತ್ತೆ ಮಾಡಲು ಎಸ್‌ಐಟಿ ರಚಿಸಿದೆ. ಇದು ಕಾನೂನಿಗೆ ಅನುಗುಣವಾಗಿಲ್ಲ. ಆದ್ದರಿಂದ, ಅದನ್ನು ಬದಿಗೆ ಸರಿಸಬೇಕು ಎಂದು ಕುಮಾರಸ್ವಾಮಿ ಕೋರಿದ್ದಾರೆ.